ಬೆಂಗಳೂರು: ಸಾಕಷ್ಟು ಉತ್ತಮ ಕೆಲಸಗಳ ನಡುವೆಯೂ ತಾವು ಮಾಡದ ತಪ್ಪಿಗೆ ಇಂದಿಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ತಿಳಿಸಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜನಮನ ಪ್ರಕಾಶನ ಭಾನುವಾರ ಆಯೋಜಿಸಿದ್ದ “ಸಿದ್ದರಾಮಯ್ಯ ಆಡಳಿತ ಅಂತರಂಗ ಬಹಿರಂಗ, ವರ್ತಮಾನದ ಇತಿಹಾಸ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೈಗೆ ಬಂದ ಮಗ ಸಿದ್ದರಾಮಯ್ಯ ಅವರ ಕಣ್ಮುಂದೆ ಸಾವಿಗೀಡಾದ. ಉತ್ತಮ ಕೆಲಸಗಳನ್ನು ಮಾಡಿಯೂ ಕ್ಷೇತ್ರದಲ್ಲಿ ಸೋಲು ಕಂಡು ನೋವು ಅನುಭವಿಸಿದ್ದಾರೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸಿ ಜನಪರ ಯೋಜನೆ ನೀಡಿದರೂ ಪಕ್ಷದಲ್ಲಾದ ಒಳಜಗಳದಿಂದ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಯಿತು. ಇನ್ನು ಅನರ್ಹಗೊಂಡ ಶಾಸಕರಿಂದ ಸಾಕಿದ ಗಿಣಿಯೇ ಕುಕ್ಕಿದಂತಾಗಿದೆ. ಈ ರೀತಿ ತಾವು ಮಾಡದ ತಪ್ಪಿಗೆ ಸಿದ್ದರಾಮಯ್ಯ ನೋವು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರು ತುಂಬಾ ಮುಖ್ಯ. ಆದರೆ, ನಮ್ಮದು ಜನರ ಪಕ್ಷವಾಗಿದ್ದು, ಕಾರ್ಯಕರ್ತರೇ ಇಲ್ಲ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಬೆಳೆಸಿದ್ದರು. ಈಗ ಅಂತಹ ಪದ್ಧತಿ ಮರೆಯಾಗಿದೆ. ದೇವರಾಜ ಅರಸು ಬಂದ ಬಳಿಕ ಭ್ರಷ್ಟಾಚಾರ ಜಾಸ್ತಿ ಆಯ್ತು ಎಂದು ಕೆಲವರು ಹೇಳಿದರು. ಕಾರಣ ಅವರನ್ನ ಸಮರ್ಥಿಸಿಕೊಳ್ಳುವವರು ಯಾರೂ ಇರಲಿಲ್ಲ. ಅದೇ ಸ್ಥಿತಿ ಸಿದ್ದರಾಮಯ್ಯ ಅವರಿಗೂ ಬಂದಿದೆ. ಇವರಿಗಿಂತ ಮೊದಲು ಬಂದವರು ಬಹಳ ಹಣ ತಿಂದರು. ಆದರೆ, ಅವರನ್ನು ಸಮರ್ಥಿಸಿಕೊಳ್ಳುವವರು ಹೆಚ್ಚಿದ್ದರು ಎಂದರು.
ಇಂದಿನ ಮಾಧ್ಯಮಗಳು ಒಬ್ಬ ವ್ಯಕ್ತಿಯನ್ನು ವಿಜೃಂಭಿಸುತ್ತಿವೆ. ಆದರೆ, ರೂಪಾಯಿ ಮೌಲ್ಯ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಇದರ ಬಗ್ಗೆ ಆ ಮನುಷ್ಯ ಚಕಾರವೆತ್ತಲಿಲ್ಲ. ಇನ್ನು, ವಿದೇಶಗಳಲ್ಲಿರುವ ಕಪ್ಪುಹಣ ಎಲ್ಲ ಕಾಂಗ್ರೆಸ್‌ನವರದ್ದೇ ಎಂದು ಬಿಂಬಿಸಲಾಗುತ್ತಿದೆ ಎಂದು ರಮೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಮಾತನಾಡಿ, ಅನರ್ಹಗೊಂಡಿರುವ ಶಾಸಕರು ಪಕ್ಷಕ್ಕೆ ದ್ರೋಹ ಬಗೆದು ಮತ್ತೂಂದು ಪಕ್ಷಕ್ಕೆ ಸೇರ್ಪಡೆಯಾದ ಸಂದರ್ಭದಲ್ಲಿ ಅಂದಿನ ಸಭಾಧ್ಯಕ್ಷ ರಮೇಶ್ ಕುಮಾರ್ ಎಲ್ಲರನ್ನೂ ಅನರ್ಹಗೊಳಿಸಿ ದಿಟ್ಟ ಕೆಲಸ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹಣ, ಜಾತಿ ಬಲ ಇದ್ದವರಿಗೆ ಮಣೆ ಹಾಕುವ ಕಾರಣ ಅಯೋಗ್ಯರು ಆಯ್ಕೆಯಾಗುತ್ತಿದ್ದಾರೆ ಎಂದರು.
ಪ್ರಧಾನಿ ನರೇಂದ್ರ ಮೋದಿ, ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲ ಪಕ್ಷಗಳ ನಿಯೋಗದೊಂದಿಗೆ ತೆರಳಿ ಕೇಂದ್ರದ ಮೇಲೆ ಒತ್ತಡ ತಂದು ಬರ ಹಾಗೂ ನೆರೆ ಪರಿಹಾರ ಪಡೆಯಬೇಕಿತ್ತು. ಆದರೆ, ಇದ್ಯಾವುದೂ ಆಗುತ್ತಿಲ್ಲ. ಬಿಜೆಪಿಯವರು ಗೋವಾದಲ್ಲೂ ಕಾಂಗ್ರೆಸ್ ಉಳಿಸಲಿಲ್ಲ. ಕರ್ನಾಟಕದಲ್ಲೂ ಪಜೀತಿ ಮಾಡಿ ಬಿಟ್ಟಿದ್ದಾರೆ. ನೆರೆ ವಿಷಯದಲ್ಲಿ ಸಿದ್ದರಾಮಯ್ಯ ಮಾತಿನಲ್ಲಿ ಕಾಲ ಕಳೆಯುತ್ತಿರುವುದು ಸರಿಯಲ್ಲ ಎಂದು ಕುಟುಕಿದರು. ಸಾಹಿತಿ ಮರುಳಸಿದ್ದಪ್ಪ, ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಭಾಗವಹಿಸಿದ್ದರು.