Advertisement

ಲೋಕದಲ್ಲಿ ಸೋತ ಬಳಿಕ ಸಿದ್ದು ನಿವೃತ್ತಿ ಹೊಂದಬೇಕಿತ್ತು

09:37 PM Nov 27, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಒಂದಂಕಿಗೆ ತರುತ್ತೇವೆಂದು ಹೇಳಿ ಅವರೇ ಸಿಂಗಲ್‌ ನಂಬರ್‌ಗೆ ಇಳಿದಾಗ ಮಾಜಿ ಸಿಎಂ ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿಎಲ್‌ಪಿ ನಾಯಕ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಟೀಕಿಸಿದರು.

Advertisement

ತಾಲೂಕಿನ ಕಸಬಾ ಹೋಬಳಿಯ ದಿಬ್ಬೂರು, ಕತ್ತರಿಗುಪ್ಪೆ, ಮರಳುಕುಂಟೆ ಗ್ರಾಪಂಗಳಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, 1984ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತ ನಂತರ ಸಿಎಂ ಆಗಿದ್ದ ರಾಮಕೃಷ್ಣ ಹಗಡೆ ರಾಜೀನಾಮೆ ನೀಡಿದರು. ಆ ರೀತಿಯ ನೈತಿಕತೆ ಇಂದು ರಾಜಕಾರಣದಲ್ಲಿ ಉಳಿದಿಲ್ಲ ಎಂದರು.

ಸಿದ್ದು ವಿರುದ್ಧ ವಾಗ್ಧಾಳಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಹೊಂದಾಣಿಕೆಯನ್ನು ಸೋಲಿಸಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಆದರೆ ನೈತಿಕತೆ ಬಗ್ಗೆ ಮಾತನಾಡುವವರು ಅಂದು ಹೀನಾಯ ಸೋಲು ಕಂಡರೂ ಏಕೆ ನೈತಿಕೆ ಹೊಣೆ ಹೊತ್ತು ರಾಜೀನಾಮೆ ಕೊಡಲಿಲ್ಲ ಎಂದು ಸಿ.ಟಿ.ರವಿ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದರು.

ಕುರ್ಚಿಗೆ ಅಂಟಿಕೊಂಡಿದ್ದ ಎಚ್ಡಿಕೆ: ರಾಹುಲ್‌ ಗಾಂಧಿಯಾದರೂ ಲೋಕಸಭೆಯಲ್ಲಿ ಸೋಲಿನ ನಂತರ ನೈತಿಕೆಯಿಂದ ಎಐಸಿಸಿಗೆ ರಾಜೀನಾಮೆ ಕೊಟ್ಟರು ಇವರು ಏಕೆ ಕೊಡಲಿಲ್ಲ. ಪಕ್ಷದ ರಾಜಾಧ್ಯಕ್ಷರು ರಾಜೀನಾಮೆ ಕೊಡಲಿಲ್ಲ. ಇನ್ನೂ ಲೋಕಸಭಾ ಚುನಾವಣೆಯಲ್ಲಿ ತಂದೆ, ಮಗ ಸೋತರೂ ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಂಡೇ ಕೂತಿದ್ದರೆಂದು ಪರೋಕ್ಷವಾಗಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ಧಾಳಿ ನಡೆಸಿದರು.

ಮೂರುವರೆ ವರ್ಷ ಬಿಜೆಪಿ ಸರ್ಕಾರ ಇರುತ್ತೆ: ಸಿದ್ದರಾಮಯ್ಯ ಹೇಳುವುದೇಲ್ಲಾ ನಡೆಯಲ್ಲ. 2018ರ ಮತ್ತೆ ನಾನೇ ಮುಖ್ಯಮಂತ್ರಿ ಅಂದರು, ಆಗಲಿಲ್ಲ. ಯಾರು ಏನೇ ಹೇಳಿದರೂ ರಾಜ್ಯದಲ್ಲಿ ಮೂರುವರೆ ವರ್ಷ ಬಿಜೆಪಿ ಸರ್ಕಾರ ಇರುತ್ತದೆ. ಮಧ್ಯಂತರ ಚುನಾವಣೆ ಬರುವ ಪ್ರಶ್ನೆಯೆ ಇಲ್ಲ ಎಂದರು.

Advertisement

ಏನು ಅಭಿವೃದ್ಧಿ ಕಾರ್ಯ ಮಾಡಿಲ್ಲ: ಬಿಜೆಪಿ ಸರ್ಕಾರ ಈ ಹಿಂದೆ 2008ರಲ್ಲಿ ಅಧಿಕಾರದಲ್ಲಿದ್ದಾಗ ಡೀಸಿ ಕಚೇರಿ, ಮೇಗಾ ಡೇರಿ ಸ್ಥಾಪನೆಗೆ ಅನುದಾನ ಕೊಟ್ಟಿದೆ. ಹಿಂದಿನ ಕಾಂಗ್ರೆಸ್‌, ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆಂದು ಪ್ರಶ್ನಿಸಿದರು. ಕುಮಾರಸ್ವಾಮಿ ಜಿಲ್ಲೆಗೆ ಅಳಿಯನಾದರೂ ಏನು ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಆಳಿಯ ಮನೆ ತೊಳಿಯಾ ಎಂಬ ಗಾದೆಯೆಂತೆ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಿಲ್ಲೆಗೆ ಮಂಜೂರಾಗಿದ್ದ ಮೆಡಿಕಲ್‌ ಕಾಲೇಜ್‌ನ್ನು ಕನಕಪುರಕ್ಕೆ ತಗೊಂಡು ಹೋದರು. ಇದರ ಮರ್ಮ ಏನು ಎಂದು ರವಿ ಪ್ರಶ್ನಿಸಿದರು. ಅಳಿಯನಾಗಿ ಮಾಡದ ಕೆಲಸವನ್ನು ಯಡಿಯೂರಪ್ಪ ಮಾಡಿದ್ದಾರೆಂದರು.

ವಿಶ್ವಾಸಕ್ಕೆ ಬಂದಿದ್ದಾರೆ?: ನಾವು ಶಾಸಕರನ್ನು ಖರೀದಿ ಮಾಡಿಲ್ಲ. ಖರೀದಿ ಬಳಕೆಯೆ ಪ್ರಜಾಪ್ರಭುತ್ವಕ್ಕೆ ಮಾಡುವ ಅಪಮಾನ, ವಿಶ್ವಾಸ ಇಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಇದು ರಾಜಕಾರಣ ಎಂದರು. ಹಿಂಬಾಲಿನಿಂದ ರಾಜಕಾರಣ ಮಾಡಿದರೆ ತಪ್ಪಾಗುತ್ತದೆ. ಆದರೆ ರಾಜಾರೋಷವಾಗಿ ಪಕ್ಷ ಬಿಟ್ಟು ಮತ್ತೂಂದು ಪಕ್ಷಕ್ಕೆ ಹೋದರೆ ಅದು ಮರ್ಯಾದಸ್ಥರು ಮಾಡುವ ರಾಜಕಾರಣ ಎಂದು ಅನರ್ಹ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಂಡ ಕ್ರಮವನ್ನು ಸಮರ್ಥಿಸಿಕೊಂಡರು.

ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಜನ ಮಹಾ ಮಂಗಳಾರತಿ ಮಾಡುತ್ತಾರೆಂಬ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ ಪ್ರಸ್ತಾಪಿಸಿ ಮಾತನಾಡಿದ ಅವರು, ರಮೇಶ್‌ ಕುಮಾರ್‌ ನಾನೊಬ್ಬ ಸಭ್ಯ ರಾಜಕಾರಣಿ ಎಂದು ಭಾವಿಸಿದ್ದಾರೆ. ಅವರ ಸಭ್ಯತೆ ಬಗ್ಗೆ ಕೋಲಾರದ ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪರನ್ನು ಕೇಳಿದರೆ ಹೇಳುತ್ತಾರೆ ಎಂದು ತಿಳಿಸಿದರು.

ಜಾತಿ ಕೇಂದ್ರೀಕೃತ ರಾಜಕಾರಣ ಮಾಡಿಲ್ಲ: ರಮೇಶ್‌ ಕುಮಾರ್‌ ಹೇಳುವುದೊಂದು ನಡೆಯುವುದೊಂದು. ಅವರು ಈ ಹಿಂದೆ ಎಷ್ಟು ಪಕ್ಷಗಳನ್ನು ಬದಲಿಸಿದ್ದಾರೆ. ಯಾವ ಯಾವ ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದಾರೆಂಬುದನ್ನು ಅವಲೋಕಿಸಲಿ ಎಂದರು. ಅನರ್ಹರು ಬಗ್ಗೆ ಜನತಾ ನ್ಯಾಯಾಲಯದ ತೀರ್ಪು ಕೊಡುತ್ತದೆ ಎಂದ ಸಿ.ಟಿ.ರವಿ. ಸಿಎಂ ಯಡಿಯೂರಪ್ಪ, ವೀರಶೈವ ಸಮಾಜದ ಮತಗಳು ಬಿಜೆಪಿಗೆ ಬಿಟ್ಟು ಯಾರಿಗೆ ಹಾಕಬಾರದೆಂದು ಹೇಳಿಕೆಯನ್ನು ಸಮರ್ಥಿಸಿಕೊಂಡ ರವಿ, ಒಕ್ಕಲಿಗ ಸಮುದಾಯವನ್ನು ಯಾವುದೇ ಒಂದು ಕುಟುಂಬಕ್ಕೆ ಗುತ್ತಿಗೆ ನೀಡಿಲ್ಲ.

ಒಕ್ಕಲಿಗ ನಾಯಕರು ಸುಧಾಕರ್‌ ಹೌದು, ಸಿ.ಟಿ.ರವಿ ಕೂಡ ಹೌದು. ನಾವು ಪರಿಶ್ರಮದಿಂದ ರಾಜಕಾರಣದಲ್ಲಿ ಮೇಲೆ ಬಂದವನು. ಆದರೆ ಎಲ್ಲೂ ಜಾತಿ ರಾಜಕಾರಣ ಮಾಡಿಲ್ಲ. ಯಡಿಯೂರಪ್ಪ ಮಾತ್ರ ಈ ಜಾತಿ ಕೇಂದ್ರೀಕೃತ ರಾಜಕಾರಣ ಮಾಡಿಲ್ಲ ಎಂದರು. ಮಾಜಿ ಶಾಸಕ ಸುರೇಶ್‌ಗೌಡ, ಯುವ ಮುಖಂಡ ಮರಳಕುಂಟೆ ಕೃಷ್ಣಮೂರ್ತಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಅಗಲಗುರ್ಕಿ ಆರ್‌.ಚಂದ್ರಶೇಖರ್‌ ಸೇರಿದಂತೆ ಮತ್ತಿತರರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಆಳಿಯನಾಗಿ ಈ ಜಿಲ್ಲೆಗೆ ಏನು ಮಾಡಿದರೆ. ಆಳಿಯನಾಗಿ ಋಣ ತೀರಿಸುವುದಕ್ಕೆ ಬರದ ಜಿಲ್ಲೆಗೆ ಶಾಶ್ವತ ನೀರಾವರಿ ಕೊಡಲಿಲ್ಲ. ಒಳ್ಳೆಯ ಆಸ್ಪತ್ರೆ ಕೊಡಲಿಲ್ಲ. ಇಲ್ಲಿ ಇನ್ನೊಂದು ನಾಯಕತ್ವ ಬೆಳೆಯಬಾರದೆಂದು 2014 ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಬಿಜೆಪಿಯ ಬಿ.ಎನ್‌.ಬಚ್ಚೇಗೌಡರ ಸೋಲಿಗೆ ಕಾರಣರಾದರು. ಇದಕ್ಕೆ ಯಾರು ವ್ಯವಹಾರ ಕುದರಿಸಿದರೆಂದು ಕುಮಾರಸ್ವಾಮಿ ಹೇಳಲಿ.
-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next