ಬೆಂಗಳೂರು: ‘2020ರ ಮಾರ್ಚ್ ಅಂತ್ಯದೊಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ’ ಎಂದು ವಿಧಾನಸಭೆ ಮಾಜಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಭವಿಷ್ಯ ನುಡಿದಿದ್ದಾರೆ.
ಗುರುವಾರ ತಮ್ಮ ನಿವಾಸ ದಲ್ಲಿ ಮಾಧ್ಯಮಗಳೊಂದಿಗೆ ಮಾತ ನಾಡಿ, ‘ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರಿದರೆ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬೀಳುತ್ತದೆ. ಹಿಂದೆ ಧರ್ಮಸಿಂಗ್ ಸರ್ಕಾರ ಇದ್ದಾಗಲೂ ಇದನ್ನೇ ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಮೈತ್ರಿ ಸರ್ಕಾರ ಇನ್ನು ಏಳೆಂಟು ತಿಂಗಳು ಉಳಿಯಬಹುದು. 2020ರ ಮಾರ್ಚ್ ಅಂತ್ಯದೊಳಗೆ ಚುನಾವಣೆ ಬರುತ್ತದೆ ಎನ್ನುವುದಕ್ಕೆ ನನ್ನ ಬಳಿ ಸಾಕಷ್ಟು ಪುರಾವೆ ಇದೆ’ ಎಂದು ಹೇಳಿದ್ದಾರೆ.
‘ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಮಧ್ಯಂತರ ಚುನಾವಣೆಗೆ ಹೋಗಲು ಆಸಕ್ತಿ ವಹಿಸಿದ್ದರು. ಈ ಬಗ್ಗೆ ಹೈಕಮಾಂಡ್ ಜತೆಗೂ ಸಿದ್ದರಾಮಯ್ಯ ವಾದ ಮಾಡಿದ್ದರು. ಆದರೆ, ಹೈಕಮಾಂಡ್ ಒಪ್ಪಿಲ್ಲ. ಈಗ ಬಿಜೆಪಿ ಸರ್ಕಾರ ರಚಿಸಿದರೂ, ಕಾಂಗ್ರೆಸ್‌ಗೆ ಅನುಕೂಲ ವಾಗಲಿದೆ. ವಿರೋಧ ಪಕ್ಷದಲ್ಲಿ ಇದ್ದುಕೊಂಡು ಚುನಾವಣೆ ಎದುರಿಸಲು ಹೆಚ್ಚು ಅನುಕೂಲವಾಗಲಿದೆ’ ಎಂದು ಹೇಳಿದರು.
‘ಬಹಳಷ್ಟು ಕಾಂಗ್ರೆಸ್ಸಿಗರು ಮಧ್ಯಂತರ ಚುನಾವಣೆಗೆ ಹೋಗಲು ಆಸಕ್ತಿ ಹೊಂದಿದ್ದಾರೆ. ಹಿಂದೆ ರಾಮಕೃಷ್ಣ ಹೆಗಡೆ ಕಾಲದಲ್ಲಿಯೂ ಹೀಗೆಯೇ ಆಗಿತ್ತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈಗ ಮಧ್ಯಂತರ ಚುನಾವಣೆ ನಡೆದರೆ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಬೇಕೋ ಬೇಡವೋ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಸಿದ್ದರಾಮಯ್ಯ ಒಳ್ಳೆಯ ನಾಯಕ. ಕೆಲವು ಸಾರಿ ಸತ್ಯ ಸಂಗತಿಯನ್ನು ಹೇಳಬೇಕಾಗುತ್ತದೆ’ ಎಂದು ಕೋಳಿವಾಡ್, ಸಿದ್ದರಾಮಯ್ಯ ಅವರನ್ನು ಹೊಗಳಿದರು.
ಇದೇ ವೇಳೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಅವರು ಮುಖ್ಯಮಂತ್ರಿಯಾಗುವುದು ಕಷ್ಟವಿದೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿಯೇ ಮುಂದುವರಿಯುವುದೂ ಅನುಮಾನವಿದೆ ಎಂದು ಕೋಳಿವಾಡ ಹೇಳಿದ್ದಾರೆ.