ಕರ್ನಾಟಕ ಕುರುಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಅಭೂತಪೂರ್ವ ರೀತಿಯ ವಿಜಯ ಸಾಧಿಸಿದೆ. ಆದರೂ ತನ್ನ ಪ್ರಬಲ ಎದುರಾಳಿ ಬಿಜೆಪಿ ಮತ್ತು ಕಿಂಗ್ ಮೇಕರ್ ಆಸೆಯಲ್ಲಿದ್ದ ಜೆಡಿಎಸ್ ಪಕ್ಷಗಳನ್ನು ಧೂಳೀಪಟ ಮಾಡಿ ಕಾಂಗ್ರೆಸ್ ಇಷ್ಟೊಂದು ದೊಡ್ಡ ಮಟ್ಟದ ವಿಜಯ ಸಾಧಿಸಿದ್ದು ಹೇಗೆ ಎಂಬ ಮಾತುಗಳು ಸಹಜವಾಗಿ ಸಾಮಾನ್ಯ ಜನರ ಮಧ್ಯೆ ಕೇಳಿಬರುತ್ತಿದೆ.
ಕಾಂಗ್ರೆಸ್ ಸ್ಥಳೀಯ ನಾಯಕರ ಮಾಸ್ ಲೀಡರ್‌ಶಿಪ್ ಮತ್ತು ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ಮತಗಳನ್ನು ತರಿಸಿಕೊಟ್ಟದ್ದಂತೂ ಸುಳ್ಳಲ್ಲ. ಅದಲ್ಲದೇ, ಬಿಜೆಪಿ ವಿರುದ್ಧದ 40 ಪರ್ಸೆಂಟ್ ಕಮಿಷನ್ ಅಸ್ತ್ರ, ʻಪೇ ಸಿಎಂʼ ಪೋಸ್ಟರ್‌ಗಳು ಬಿಜೆಪಿ ಪಾಳಯವನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದವು. ಈ ಮೂಲಕ ಸಾಮಾನ್ಯ ಜನರಿಗೂ ಬಿಜೆಪಿ ಭ್ರಷ್ಟ ಪಕ್ಷ ಎಂಬ ಅರಿವು ಮೂಡುವಂತೆ ಮಾಡಿದ್ದವು. ಇಷ್ಟು ಪ್ರಯೋಗಗಳನ್ನು ಕಾಂಗ್ರೆಸ್ ತನ್ನ ಮೇಲೆ ಮಾಡುತ್ತಿದ್ದರೂ ಇದಾವುದರ ಅರಿವೇ ಇಲ್ಲದಂತೆ, ಇದೆಲ್ಲವೂ ತನ್ನ ಮೇಲೆ ಮಾಡುತ್ತಿರುವ ಆರೋಪಗಳೇ ಅಲ್ಲವೇನೋ ಎನ್ನುವ ಭ್ರಮೆಯಲ್ಲಿದ್ದ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಈ ದೊಡ್ಡ ರೀತಿಯ ಆರೋಪಗಳಿಗೆ ಲಗಾಮು ಹಾಕುವ ಗೋಜಿಗೇ ಹೋಗದಿದ್ದದ್ದು ಕಾಂಗ್ರೆಸ್ ಪಾಲಿಗೆ ದೊಡ್ಡ ಮಟ್ಟದ ಬಲ ತಂದುಕೊಟ್ಟಿತ್ತು.
ಈ ಮುಂಚೆಯೂ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದ ಕಾಂಗ್ರೆಸ್ ಅವನ್ನೆಲ್ಲಾ ಸಮರ್ಥವಾಗಿ ದಡ ತಲುಪಿಸುವಲ್ಲಿ ವಿಫಲವಾಗುತ್ತಿತ್ತು. ಅದೆಷ್ಟೋ ಬಾರಿ ತಮ್ಮ ನಡುವೆಯೇ ಗೊಂದಲಗಳುಂಟಾಗಿ ಕೊನೆಗೆ ʻಕೈʼಸುಟ್ಟುಕೊಂಡಿರುವ ಉದಾಹರಣೆಗಳೂ ಬಹಳಷ್ಟಿವೆ.
ಈ ಬಾರಿ ಕಾಂಗ್ರೆಸ್ ಇದನ್ನೆಲ್ಲಾ ಸಮರ್ಥವಾಗಿ ನಿಭಾಯಿಸಿದ ರೀತಿ ಇಡೀ ರಾಜ್ಯದ ಜನರ ಹೃದಯ ಗೆದ್ದಿತು. ಈ ಬಾರಿಯ ಕರ್ನಾಟಕ ರಣಾಂಗಣದಲ್ಲಿ ಕಾಂಗ್ರೆಸ್ ಇಷ್ಟೊಂದು ದೊಡ್ಡ ಮಟ್ಟದ ಗೆಲುವು ಸಾಧಿಸುವಂತೆ ದಾಳ ಉರುಳಿಸಿದ್ದು ಸಿದ್ದು, ಡಿಕೆಶಿ ಅಲ್ಲ… ಬದಲಾಗಿ ʻಸುನಿಲ್ ಕನಗೋಲು ಆಂಡ್ ಟೀಂʼ.
ಹೌದು. ತೆರೆಯ ಹಿಂದೆ ಇದ್ದುಕೊಂಡೇ ರಾಜ್ಯ ಕಾಂಗ್ರೆಸ್‌ನ ಬೇರನ್ನು ಗಟ್ಟಿಗೊಳಿಸಿದ ಕೀರ್ತಿ ಸಂಪೂರ್ಣವಾಗಿ ಈ ಕನಗೋಲು ಮತ್ತು ತಂಡಕ್ಕೆ ಸಲ್ಲುತ್ತದೆ.
ಯಾರು ಈ ಸುನಿಲ್ ಕನಗೋಲು?
ಭಾರತದ ಮುಂಚೂಣಿ ರಾಜಕೀಯ ತಂತ್ರಗಾರರ ಪೈಕಿ ಒಬ್ಬರಾಗಿರುವ ಸುನಿಲ್ ಕನಗೋಲು ಕರ್ನಾಟಕದ ಬಳ್ಳಾರಿ ಮೂಲದವರಾಗಿದ್ದು, ಅಮೇರಿಕಾದಲ್ಲಿ ಉನ್ನತ ಶಿಕ್ಷಣ ಪೂರೈಸಿದ ಬಳಿಕ ಗುಜರಾತ್ ಚುನಾವಣೆಯಲ್ಲಿ ರಾಜಕೀಯ ತಂತ್ರಗಾರರಾಗಿ ಕರ್ತವ್ಯ ನಿರ್ವಹಿಸಿದ್ದವರು.
2014 ರ ಲೋಕಸಭೆಯ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ತಂತ್ರಗಾರಿಕಾ ತಂಡದಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದ ಸುನಿಲ್ ಕನಗೋಲು, 2017 ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2019 ರ ಲೋಕಸಭಾ ಚುನಾವಣೆ ವೇಳೆ ತಮಿಳುನಾಡಿನ ಎಂ. ಕೆ ಸ್ಟಾಲಿನ್ ಅವರ ರಾಜಕೀಯ ತಂತ್ರಗಾರರಾಗಿದ್ದ ವೇಳೆ ಅವರು ನಡೆಸಿದ್ದ ʻನಮಕ್ಕು ನಾಮೆʼ ಎಂಬ ಹೆಸರಿನ ಪ್ರಚಾರ ಆಂದೋಲನ ಅವರಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿತ್ತು.
ಕೆಲವೊಂದಷ್ಟು ಆಂತರಿಕ ಕಾರಣಗಳಿಂದಾಗಿ ಬಿಜೆಪಿ ತೊರೆದು ʻಕೈʼ ಪಾಳಯದೊಂದಿಗೆ ಕೈಜೋಡಿಸಿದ್ದ ಕನಗೋಲು ಅವರಿಂದಾಗಿ ಕಾಂಗ್ರೆಸ್ ಭರಪೂರ ಲಾಭ ಪಡೆದುಕೊಂಡಿತು. ಅವರು ಬಿಜೆಪಿ ತೊರೆದು ಕಾಂಗ್ರೆಸ್ ಜೊತೆ ಸೇರಿದ್ದು ಬಿಜೆಪಿ ಉನ್ನತ ಮಟ್ಟದ ನಾಯಕರಿಗೇ ಶಾಕ್ ನೀಡಿತ್ತು ಎಂಬುದಂತೂ ಸತ್ಯ.
ತಮ್ಮ ಹೋಂ ಗ್ರೌಂಡ್ ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸ್ಟ್ರಾಟಜಿ ಟೀಂನ ನೇತೃತ್ವ ಹಿಡಿದ ಮೇಲೆ ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಅವರೇ ಪ್ರಮುಖ ಪಾತ್ರ ವಹಿಸಿದ್ದರು ಎನ್ನಬಹುದು. ಅವರ ಉದ್ದೇಶವಂತೂ ನೇರವಾಗಿದ್ದಂತಿತ್ತು… ತನ್ನನ್ನು ಮಟ್ಟ ಹಾಕಲು ಪ್ರಯತ್ನಿಸಿದವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ಮತ್ತು ಪಕ್ಷದಲ್ಲಿ ತಾನು ಗುರುತಿಸಿಕೊಳ್ಳುವಂತೆ ಮಾಡಬೇಕು ಎಂಬುದು. ಈ ಅವರ ಹಠವೂ ರಾಜ್ಯದಲ್ಲಿ ಕಮಲ ಪತನಕ್ಕೆ ನಾಂದಿ ಹಾಡಿತು. ಇದಕ್ಕಾಗಿಯೇ ಅವರು ಮೋದಿ ಅಲೆಯ ಮಧ್ಯೆಯೂ ಬಿಜೆಪಿಯನ್ನು ಕಟ್ಟಿ ಹಾಕುವಲ್ಲಿ ಇನ್ನಿಲ್ಲದ ಶ್ರಮ ಹಾಕಿದ್ದರು.
ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಂಬಲದಿಂದಾಗಿ ಕಾಂಗ್ರೆಸ್ ಸೇರಿದ್ದ ಸುನೀಲ್ ಕನಗೋಲು ಮತ್ತು ತಮ್ಮ ರಾಜಕೀಯ ತಜ್ಞರನ್ನೊಳಗೊಂಡ ತಂಡಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸುವ ಮಹತ್ವದ ಜವಾಬ್ದಾರಿಯನ್ನು ನೀಡಲಾಯ್ತು. ಈ ವೇಳೆಗೆ ಸಿದ್ದು ಬಣ-ಡಿಕೆ ಬಣ ಎಂದು ಹರಿದು ಹಂಚಿಹೋಗಿದ್ದ ರಾಜ್ಯ ಕಾಂಗ್ರೆಸ್‌ನ್ನು ಒಂದು ಮಾಡಿದ ಕನಗೋಲು ಟೀಂ ಅಲ್ಲೇ ಕರ್ನಾಟಕವನ್ನು ಗೆಲ್ಲುವ ಮೊದಲ ಹೆಜ್ಜೆಗೆ ಮುನ್ನುಡಿಯಿಟ್ಟಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೇರಿಸಲೇಬೇಕೆಂಬ ಪಣ ತೊಟ್ಟಿದ್ದ ಇವರ ತಂಡ ಜವಾಬ್ದಾರಿ ಸಿಕ್ಕಿದಂದಿನಿಂದ ಪ್ರತಿ ದಿನವೂ ಬಿಡುವಿಲ್ಲದಂತೆ ತಮ್ಮನ್ನು ತೊಡಗಿಸಿಕೊಂಡಿತ್ತು. ಕರ್ನಾಟಕದ ಪ್ರತಿ ಮಂದಿಯನ್ನು ತಲುಪುವಂತಹಾ ಪ್ರಣಾಳಿಕೆಯನ್ನೂ ಸಿದ್ಧಪಡಿಸಲಾಯ್ತು. ಕನಗೋಲು ಮತ್ತವರ ತಂಡ ವಾರದ 7 ದಿನವೂ ದುಡಿದು, ದಿನವೊಂದಕ್ಕೆ 20 ಗಂಟೆಗಳಷ್ಟು ಕಾಲ ಶ್ರಮ ವಹಿಸಿದ್ದರ ಪರಿಣಾಮವೇ ಈಗ ಕಾಂಗ್ರೆಸ್ ತೆಕ್ಕೆಗೆ 135 ಸ್ಥಾನ ಬೀಳುವಂತಾಗಿದೆ.
ಈ ದೈತ್ಯ ವಿಜಯದ ಮೂಲಕ ಕಾಂಗ್ರೆಸ್‌ನಲ್ಲಿ ಕನಗೋಲು ಮತ್ತು ತಂಡ ತನ್ನದೇ ಆದ ಛಾಪು ಮೂಡಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೂ ಮೊದಲು ನಡೆಯಲಿರುವ ತೆಲಂಗಾಣ, ಛತ್ತೀಸ್‌ಗಢ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ʻಕನಗೋಲು ಆಂಡ್ ಟೀಂʼ ಬಲ ತುಂಬಲಿದೆ.
*ಪ್ರಣವ್ ಶಂಕರ್