ಉಡುಪಿ: ಅಧಿಕಾರ ಕಳೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಕಾಂಗ್ರೆಸ್‌ಗೆ ಬ್ಲಾಕ್‌ಮೇಲ್ ಮಾಡಿ ವಿಪಕ್ಷದ ನಾಯಕರಾಗಿದ್ದಾರೆ. ಪಕ್ಷದ ಮೇಲೆ ಅವರಿಗೆ ಹಿಡಿತವೇ ಇಲ್ಲ. ಪ್ರಸ್ತುತ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಣ, ಜೆಡಿಎಸ್ ವಲಸಿಗರ ಬಣ, ಪರಮೇಶ್ವರ್ ಬಣ ಹಾಗೂ ಡಿಕೆಶಿ ಬಣ ಸೇರಿದಂತೆ ಹಲವು ಬಣಗಳು ಸೃಷ್ಟಿಯಾಗಿವೆ. ಅವುಗಳನ್ನು ನಿಭಾಯಿಸಲಾಗದೆ ಸಿದ್ದರಾಮಯ್ಯ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ಅವರ ಐದು ವರ್ಷದ ಆಡಳಿತವನ್ನು ಜನತೆ ನೋಡಿದ್ದಾರೆ. ಜಾತಿ, ಧರ್ಮವನ್ನು ಒಡೆಯುವ ಕೆಲಸವನ್ನಷ್ಟೇ ಮಾಡಿದ್ದ ಅವರು ಈಗಲೂ ಅದೇ ಹಾದಿಯಲ್ಲಿ ನಡೆದು ಲಾಭ ಪಡೆಯವ ಭ್ರಮೆಯಲ್ಲಿದ್ದಾರೆ. ಅವರ ಕುತಂತ್ರ, ಷಡ್ಯಂತ್ರ ರಾಜ್ಯದ ಜನತೆಗೆ ಅರ್ಥವಾಗಿದೆ. ಇನ್ನು ಮುಂದಕ್ಕೆ ಯಾರೂ ಅವರ ಕುತಂತ್ರಗಳಿಗೆ ಬಲಿಯಾಗಲಾರರು ಎಂದು ಶೋಭಾ ಹೇಳಿದರು.
ಡಿಕೆಶಿ ಪ್ರಭಾವ ಇಲ್ಲ: ಡಿ.ಕೆ.ಶಿವಕುಮಾರ್ ಜೈಲಿನಿಂದ ಬಿಡುಗಡೆಯಾಗಿರುವುದರಿಂದ ಉಪ ಚುನಾವಣೆ ಮೇಲೆ ಯಾವುದೇ ಪ್ರಭಾವ ಉಂಟಾಗಲಾರದು. ಅವರು ಸಚಿವರಾಗಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿತ್ತು. 104 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಕನಕಪುರ ಹೊರತುಪಡಿಸಿ ರಾಜ್ಯದಲ್ಲೆಲ್ಲೂ ಅವರ ಪ್ರಭಾವ ಇಲ್ಲ ಎಂದರು.
ಮುಂಬರುವ ಉಪ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲಲಿದೆ. ಮೂರೂವರೆ ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತದೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಜೆಡಿಎಸ್‌ನ ಯಾರು ಕೂಡ ನಮ್ಮ ಸಂಪರ್ಕದಲ್ಲಿ ಇಲ್ಲ. ಯಾವುದೇ ಶಾಸಕರು ಬಿಜೆಪಿಗೆ ಸೇರ್ಪಡೆಯಾಗಬೇಕಾದರೆ ಮೊದಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮೊದಲಿನಿಂದಲೂ ನಮ್ಮದು ಇದೇ ನಿಲುವು ಎಂದು ತಿಳಿಸಿದರು.