ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಕೋಟಾದಡಿ ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕೆ ರಾಹುಲ್‌ಗಾಂಧಿ ಒಪ್ಪಿಗೆ ನೀಡಿದ್ದರೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ಬೇಸರಗೊಂಡಿದ್ದಾರೆ.
ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಆನೇಕಲ್ ಶಿವಣ್ಣ, ಮುನಿರತ್ನ, ಬೈರತಿ ಸುರೇಶ್, ಡಾ.ಸುಧಾಕರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಶಾಸಕರು ಸಿದ್ದರಾಮಯ್ಯರನ್ನು ಶನಿವಾರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಅಧಿಕಾರ ಹಂಚಿಕೆ ಗೊಂದಲ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಮಂಗಳವಾರ ಸಂಜೆಯೊಳಗೆ ಸರಿಯಾಗದಿದ್ದರೆ ನಾವೆಲ್ಲರೂ ಒಟ್ಟಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಾನ ಸಿಗದಿದ್ದರೇ ಮುಂದೇನು?: ಈ ಮಧ್ಯೆ, ಸಚಿವ ಸ್ಥಾನದಿಂದ ಕೈ ಬಿಟ್ಟಿದ್ದರಿಂದ ಅಸಮಾಧಾನಗೊಂಡಿದ್ದ ರಮೇಶ್ ಜಾರಕಿಹೊಳಿ ಜತೆ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರಿಗೆ ಇದೀಗ ಸಂಕಷ್ಟ ಎದುರಾಗಿದೆ. ರಮೇಶ್ ಜಾರಕಿಹೊಳಿ ಜತೆ ಅಮಿತ್ ಶಾ ಭೇಟಿ ಮಾಡಲು ಪಕ್ಷೇತರ ಶಾಸಕ ಆರ್.ಶಂಕರ್, ಕಾಂಗ್ರೆಸ್‌ನ ನಾಗೇಂದ್ರ, ಬಿ.ಸಿ.ಪಾಟೀಲ್ ಸೇರಿದಂತೆ ಉತ್ತರ ಕರ್ನಾಟಕದ ಕೆಲವು ಶಾಸಕರು ಪ್ರಯತ್ನಿಸಿದ್ದರು ಎಂದು ಹೇಳಲಾಗಿದ್ದು,
ಆ ಮಾಹಿತಿ ಹಿನ್ನೆಲೆಯಲ್ಲಿ ಆ ಶಾಸಕರನ್ನು ಕಾಂಗ್ರೆಸ್ ನಾಯಕರು ಅನುಮಾನದಿಂದ ನೋಡುವಂತಾಗಿದೆ ಎನ್ನಲಾಗಿದೆ. ಅತ್ತ ಬಿಜೆಪಿಯ ಜತೆಯೂ ಬಹಿರಂಗವಾಗಿ ಗುರುತಿಸಿಕೊಳ್ಳಲು ಆಗದೆ ಇತ್ತ ಕಾಂಗ್ರೆಸ್‌ನಲ್ಲೂ ಸ್ಥಾನಮಾನ ಸಿಗದಿದ್ದರೆ ಮುಂದೇನು? ಎಂಬ ಚಿಂತೆ ಆವರಿಸಿದೆ ಎಂದು ಹೇಳಲಾಗಿದೆ.
ಆದಷ್ಟು ಶೀಘ್ರ ಮಾತುಕತೆ ಮೂಲಕ ಸೀಟು ಹಂಚಿಕೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇವೆ. ಬೀದರ್‌ನಿಂದ ಸ್ಪರ್ಧಿಸುವಂತೆ ರಾಹುಲ್‌ಗಾಂಧಿ ಅವರನ್ನು ಆಹ್ವಾನಿಸುವ ಚ್ಛೆ ನಮಗಿದೆ. ಆದರೆ, ಹೈಕಮಾಂಡ್ ಮುಂದೆ ಇಂಥ ಯಾವುದೇ ಪ್ರಸ್ತಾಪ ಇಲ್ಲ.
-ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ