ಪರಶುರಾಂಪುರ: ಎಂಟನೇ ಶತಮಾನದ ನೊಳಂಬರ ಕಾಲದ್ದು ಎಂದು ಹೇಳಲಾಗಿರುವ ಗಡಿ ಗ್ರಾಮ ಸಿದ್ದೇಶ್ವರನದುರ್ಗದ ಸಿದ್ದೇಶ್ವರ ದೇವಾಲಯಕ್ಕೆ ಕಾಯಕಲ್ಪ ನೀಡಲಾಗಿದೆ. ಗ್ರಾಮದ ಸಿದ್ದೇಶ್ವರಸ್ವಾಮಿ ಭಕ್ತರ ಕ್ಷೇಮಾಭಿವೃದ್ಧಿ ಸಂಘ, ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸಹಯೋಗದಲ್ಲಿ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದೆ.
ತುಂಬಾ ಹಳೆಯದಾದ ದೇಗುಲದ ಗೋಡೆ, ಕಲ್ಲುಗಳು ಶಿಥಿಲಗೊಂಡು ಬಿದ್ದು ಹೋಗುತ್ತಿದ್ದವು. ಗ್ರಾಮಸ್ಥರು ತಾತ್ಕಾಲಿಕವಾಗಿ ದುರಸ್ತಿ ಮಾಡಿಸಿದ್ದರು. ಗೋಪುರವೂ ಬಿರುಕು ಬಿಡಲಾರಂಭಿಸಿದಾಗ ದೇವಾಲಯದ ಜೀರ್ಣೋದ್ಧಾರಕ್ಕೆ ದೃಢಸಂಕಲ್ಪ ಮಾಡಿದರು. ಈ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ನೆರವು ನೀಡಿದರು. ಧಾರ್ಮಿಕ ಮತ್ತು ದತ್ತಿ ಇಲಾಖೆಯೂ ಸಹಕಾರ ನೀಡಿತು.
ನೊಳಂಬರ ಕಾಲದ ದೇವಾಲಯ: ಸಿದ್ದೇಶ್ವರಸ್ವಾಮಿ ದೇವಾಲಯ 1200 ವರ್ಷಗಳಿಗಿಂತಲೂ ಹಳೆಯದು. ಇತಿಹಾಸದ ಪ್ರಕಾರ ಈ ದೇವಸ್ಥಾನವನ್ನು ನೊಳಂಬ ವಂಶದ ರಾಜರು ನಿರ್ಮಿಸಿರಬಹುದು ಎಂದು ಹೇಳಲಾಗುತ್ತಿದೆ. ಈ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ ನೊಳಂಬರ ಇತಿಹಾಸಕ್ಕೆ ಪ್ರಮುಖ ಆಧಾರ. ಇದೊಂದು ಗುಹಾಂತರ ದೇವಾಲಯ ಮಾದರಿಯ ವಾಸ್ತುಶಿಲ್ಪ ಹೊಂದಿದೆ ಎನ್ನುತ್ತಾರೆ ದೇವಸ್ಥಾನ ಸಮಿತಿಯ ನಿರ್ದೇಶಕ ಹಾಗೂ ಭೂ
ವಿಜ್ಞಾನಿ ಡಾ| ಗಂಗಾಧರಮೂರ್ತಿ.
ಸಿದ್ದೇಶ್ವರನದುರ್ಗದ ಬೆಟ್ಟ ಕೃಷ್ಣ ಶಿಲಾ ಸ್ತೋಮದ ಬೃಹತ್ ಗುಂಡು-ಬಂಡೆಗಳಿಂದ ಕೂಡಿದೆ. ಸಂಶೋಧಕರ ಪ್ರಕಾರ, ಭೂಮಿ ಉದ್ಬವಿಸಿದಾಗ ಪ್ರಥಮವಾಗಿ ನಿರ್ಮಾಣವಾಗುವ ಅತ್ಯಂತ ಗಡುಸು/ಕಠಿಣವಾದ ಬೆಸಾಲ್ಟ್ ಶಿಲಾ ಕುಟುಂಬಕ್ಕೆ ಸೇರಿದ ಡಾಲರೈಟ್ ಶಿಲೆ ಇಲ್ಲಿದೆ ಎಂದು ತಿಳಿಸಿದರು.
ದೇವಾಲಯಗಳ ಬೀಡು: ಸಿದ್ದೇಶ್ವರನದುರ್ಗದ ಸುತ್ತ ಹಲವು ದೇಗುಲಗಳಿವೆ. ಗ್ರಾಮದ ಈಶಾನ್ಯ ದಿಕ್ಕಿಗೆ ಎಸ್. ಮರಡಿಹಟ್ಟಿಯಲ್ಲಿರುವ ಆಂಜನೇಯಸ್ವಾಮಿ ದೇವಾಲಯವಿದೆ. ಇಲ್ಲಿ ಹನುಮನ ವಿಗ್ರಹ ಉತ್ತರಾಭಿಮುಖವಾಗಿ ನೆಲೆಸಿರುವುದು ವಿಶೇಷ. ಪೂರ್ವಕ್ಕೆ ಒಂದು ಎಕರೆ ವಿಸ್ತೀರ್ಣದ ಪೌಳಿಯಲ್ಲಿ ಹೊಂಗೆ, ಹುಣಸೆ, ಬೇವು. ಮಾವಿನ ತೋಪಿನ ನಡುವೆ ಕಂಗೊಳಿಸುತ್ತಿರುವ ಕಂಚಿವರದಸ್ವಾಮಿ ದೇವಾಲಯವಿದೆ.
ಆಗ್ನೇಯ ದಿಕ್ಕಿಗೆ ಯಾದವ ಕುಲದೇವರುಗಳ ಪಂಚ ದೇಗುಲಗಳಿವೆ. ದಕ್ಷಿಣದ ಬೆಟ್ಟದ ಮೇಲೆ ಮಾರಿಕಾಂಬಾ, ನೈರುತ್ಯಕ್ಕೆ ದುರುಗಮ್ಮದೇವಿ, ಪಶ್ಚಿಮಕ್ಕೆ ವೀರಭದ್ರಸ್ವಾಮಿ ದೇಗುಲಗಳಿವೆ. ವಾಯುವ್ಯಕ್ಕೆ ಆಳೆತ್ತರದ ತೋಟದ
ಆಂಜನೇಯಸ್ವಾಮಿ ದೇವಾಲಯವಿದೆ.