Advertisement

“ನೀರಿಗೆ ಬಿದ್ದು, ಉಸಿರುಗಟ್ಟಿ ಸಿದ್ಧಾರ್ಥ ಮೃತಪಟ್ಟಿದ್ದಾರೆ’

10:49 PM Aug 02, 2019 | Team Udayavani |

ಮಂಗಳೂರು: ಕೆಫೆ ಕಾಫಿ ಡೇ ಸ್ಥಾಪಕ ಮತ್ತು ಮಾಜಿ ಸಿಎಂ ಎಸ್‌.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಅವರು, ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅವರ ಮೃತದೇಹದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ (ಪ್ರೊವಿಷನಲ್‌ ರಿಪೋರ್ಟ್‌) ಹೇಳಿದೆ. ಪ್ರಾಥಮಿಕ ವರದಿಯನ್ನು ನಗರದ ವೆನ್ಲಾಕ್‌ ಆಸ್ಪತ್ರೆಯ ಅಧೀಕ್ಷಕರಾದ ಡಾ|ರಾಜೇಶ್ವರಿ ದೇವಿ ಅವರು ಪ್ರಕರಣದ ತನಿಖಾಧಿಕಾರಿ, ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕೋದಂಡರಾಮ ಅವರಿಗೆ ಶುಕ್ರವಾರ ಸಲ್ಲಿಸಿದ್ದಾರೆ.

Advertisement

ಗೌಪ್ಯವಾಗಿರುವ ಈ ವರದಿಯಲ್ಲಿ ಸಿದ್ಧಾರ್ಥ್ ಅವರ ಸಾವಿಗೆ ಬೇರೆ ಯಾವುದೇ ಕಾರಣವನ್ನು ಉಲ್ಲೇಖೀಸಿಲ್ಲ. ನೀರಿಗೆ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ನಮೂದಿಸಲಾಗಿದೆ. ಬಾಕಿ ಉಳಿದಂತೆ ಸಾವಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಅಂತಿಮ ವರದಿಯಲ್ಲಿ ಉಲ್ಲೇಖೀಸಲಾಗುವುದು ಎಂದಷ್ಟೇ ತಿಳಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಬಂದಿದ್ದ ಸಿದ್ಧಾರ್ಥ್ ಅವರು, ಜು.29ರಂದು ಸಂಜೆ ಉಳ್ಳಾಲ ಸೇತುವೆ ಬಳಿ ನಾಪತ್ತೆಯಾಗಿದ್ದರು. ಜು.31ರಂದು ಬೆಳಗ್ಗೆ ಅವರ ಮೃತದೇಹ ಹೊಗೆ ಬಜಾರ್‌ ಹಿನ್ನೀರಿನಲ್ಲಿ ಪತ್ತೆಯಾಗಿತ್ತು.

ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಜು.31ರಂದು ನಗರದ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿತ್ತು. ಸಾವಿನ ಬಗ್ಗೆ ಸಂಶಯ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಮೃತದೇಹದ ಭಾಗಗಳನ್ನು ಹೆಚ್ಚಿನ ಪರೀಕ್ಷೆಗಾಗಿ ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ವರದಿ ಬಂದ ಬಳಿಕ ಅಂತಿಮ ಹಂತದ ವರದಿ ಸಿದ್ಧಗೊಳ್ಳಲಿದೆ. ವರದಿ ಬರಲು ಸುಮಾರು 10 ದಿನಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next