ಹೈದರಾಬಾದ್: ಕಳೆದ ಕೆಲ ಸಮಯದಿಂದ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಗೌಪ್ಯವಾಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.
ಬುಧವಾರ (ಮಾ.27) ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರಂನಲ್ಲಿರುವ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ಕುಟುಂಬದ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ ಎಂದು ʼಗ್ರೇಟ್ ಆಂಧ್ರʼ ವರದಿ ಮಾಡಿದೆ.
ಬುಧವಾರ ಸಂಜೆ ತಮ್ಮ ವಿವಾಹದ ಬಗ್ಗೆ ಅಧಿಕೃತವಾಗಿ ನಟ – ನಟಿ ಸೋಶಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ.
ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ 2021 ರಲ್ಲಿ ಬಂದ ‘ಮಹಾ ಸಮುದ್ರಂʼ ಸಿನಿಮಾದಲ್ಲಿ ಜೊತೆಯಾಗಿ ಸಿನಿಮಾ ಮಾಡಿದ್ದರು. ಆ ಬಳಿಕ ಅವರಿಬ್ಬರು ಆತ್ಮೀಯವಾಗಿ ನಾನಾ ಕಡೆ ಕಾಣಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಇಬ್ಬರು ಡೇಟ್ ಮಾಡುತ್ತಿದ್ದರೂ, ಅದನ್ನು ಎಲ್ಲೂ ಕೂಡ ಬಹಿರಂಗವಾಗಿ ಹೇಳಿರಲಿಲ್ಲ.
ರಹಸ್ಯವಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಮದುವೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲು ಕಾಯುತ್ತಿದ್ದಾರೆ.
ಇದು ಅದಿತಿ ಅವರಿಗೆ ಎರಡನೇ ಮದುವೆ. ಸಿದ್ದಾರ್ಥ್ ಈ ಹಿಂದೆ ಹಲವು ನಟಿಯರೊಂದಿಗೆ ಡೇಟಿಂಗ್ ನಡೆಸಿದ್ದಾರೆ ಎನ್ನಲಾಗಿದೆ.