ದಾವಣಗೆರೆ: ಇತಿಹಾಸ ಪ್ರಸಿದ್ಧ ತುಮಕೂರಿನ ಸಿದ್ಧಗಂಗಾಮಠ, ಮೈಸೂರು ಅರಮನೆ, ವಿಜಯಪುರದ ಗೋಲ್‌ಗುಂಬಜ್ ಪ್ರಾತ್ಯಕ್ಷಿಕೆ, ವಚನಕಾರರು, ಕವಿಗಳು, ಸ್ವಾತಂತ್ರ ಹೋರಾಟಗಾರರ ವೇಷಭೂಷಣ ಒಳಗೊಂಡಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸಂಸ್ಕೃತಿ, ಪರಂಪರೆ, ವಿಶಿಷ್ಠತೆಯನ್ನು ಸಾರುವ ಮಕ್ಕಳಿಂದ ತಯಾರಿಸಲ್ಪಟ್ಟ ಕಲಾಕೃತಿಗಳು ಸಿದ್ಧಗಂಗಾ ಶಾಲೆ ಆವರಣದಲ್ಲಿ ಭಾನುವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಸಿದ್ಧಗಂಗಾ ಸ್ಕೌಟ್ಸ್ ಗ್ರೂಪ್ ವತಿಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ದರ್ಶನ…ಮಾಡಿಸಿದವು.
ದಾವಣಗೆರೆಯ ಇತಿಹಾಸ ಪ್ರಸಿದ್ಧ ಆನೆಕೊಂಡ ದೇವಸ್ಥಾನ, ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ಆಹಾರದಲ್ಲಿ ಬೆಣ್ಣೆದೋಸೆ, ಗೋಬಿ ಮಂಚೂರಿ ಅನ್ನು ವಿದ್ಯಾರ್ಥಿನಿ ಬಿ.ಎನ್. ನಂದಿನಿ ತಂಡ ಪರಿಚಯಿಸಿದರೆ, ಮಂಡ್ಯದ ಆದರ್ಶ ತಂಡ ಮಂಡ್ಯದ ಪ್ರಸಿದ್ಧ ನಟ ಮಂಡ್ಯ ರಮೇಶ್, ದಿ| ರೆಬಲ್‌ಸ್ಟಾರ್ ಅಂಬರೀಷ್ ಅವರ ವ್ಯಕ್ತಿತ್ವದ ಚಿತ್ರಣ, ಮಲ್ಲಿಕಾರ್ಜುನ ದೇವಸ್ಥಾನ ಒಳಗೊಂಡಂತೆ ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳು, ಕವಿಗಳು ಮುಂತಾದವರನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ನಿರ್ಮಿಸಿದ್ದರು.
ಚಿತ್ರದುರ್ಗದ ಚೇತನ ಓಪನ್ ಬುಲ್ ಬುಲ್ ಪಬ್ಲಿಕ್ ತಂಡ ಚಿತ್ರದುರ್ಗದ ಸ್ವಾತಂತ್ರ್ಯಾ ಹೋರಾಟಗಾರರು, ಕವಿಗಳು, ವಚನಕಾರರ ವೇಷ ಭೂಷಣ ತೊಟ್ಟ ಮಕ್ಕಳು, ದುರ್ಗದ ಕೋಟೆ ಸುತ್ತಮುತ್ತಲಿನ ಸ್ಥಳಗಳ ಪ್ರಾತ್ಯಕ್ಷಿಕೆ ಹಾಗೂ ಜೆ.ಎಸ್. ಚಿನ್ಮಯ್ ತಂಡವು ಚಾಮುಂಡಿ ಬೆಟ್ಟ, ಲಲಿತಮಹಲ್, ಮೈಸೂರು ಅರಮನೆ, ಮೈಸೂರು ಪ್ರಾಣಿ ಸಂಗ್ರಹಾಲಯ, ಕೆ.ಆರ್.ಎಸ್ ಡ್ಯಾಂ, ಬ್ರಿಟೀಷರ ಕಾಲದ μರಂಗಿಗಳು ಮುಂತಾದ ವಸ್ತು ಹಾಗೂ ಮಾಹಿತಿ ಪ್ರದರ್ಶಿಸಿತ್ತು. ಪಿ.ಆರ್. ಭರತ್ ತಂಡ ಬೀದರ್ ಜಿಲ್ಲೆ ಆಯ್ದುಕೊಂಡು ಬೀದರ್ ಕೋಟೆ, ಗುಂಬಜ್ ದರ್ವಾಜಾ, ಬರೀದ್ ಶಾಯಿ ಪಾರ್ಕ್ ಪ್ರಾತ್ಯಕ್ಷಿಕೆ ಹಾಗೂ ಗುರುನಾನಕ್, ಝೀರಾ ಸಾಬ್, ಆಹಾರದ ವಿಶೇಷತೆಯಲ್ಲಿ ಪರೋಟ ದಾಲ್ ಅನ್ನು ಪ್ರದರ್ಶನ ಮಾಡಿದರು.
ಕಾರ್ತಿಕ್ ತಂಡ ರಾಮನಗರ ಜಿಲ್ಲೆಯ ಸ್ಪೆಷಲ್ ತಟ್ಟೆ ಇಡ್ಲಿ, ಸಾವನದುರ್ಗ ಬೆಟ್ಟ, ಅರ್ಕಾವತಿ, ಕಾವೇರಿ, ವೃಷಭಾವತಿ ನದಿಗಳ ಸಂಗಮದ ಮಹತ್ವ ಪರಿಚಯಸಿದರು. ಹಾಸನದ ಎನ್.ಜೆ. ಸಾಯಿ ಗೊಮ್ಮಟೇಶ್ವರ ಟೆಂಪಲ್, ಬೇಲೂರು-ಹಳೇಬೀಡುಗಳ ಇತಿಹಾಸ, ವಿಜಾಪುರದ ಎ.ಎಂ. ಆದರ್ಶ ಗೋಲ್‌ಗುಂಬಜ್, ಬಸವಣ್ಣನ ನೆಲೆಯ ಪರಿಚಯ, ಸ್ಪೆಷಲ್ ಚುರುಮುರಿ ಮಂಡಕ್ಕಿ ಹಾಗೂ ಹಾವೇರಿಯ ವಿಕಾಸ್ ತಂಡ ಹುಕ್ಕೇರಿ ಮಠ, ಶ್ರೀ ಕ್ಷೇತ್ರ ಐರಣಿ ಹೊಳೆಮಠ, ಸ್ಪೆಷಲ್ ಎಣಗಾಯಿ ಪಲ್ಯ, ರೊಟ್ಟಿ ವಿಶೇಷತೆ ಪರಿಚಯಿಸಿದರು.
ಆರಂಭದಲ್ಲಿ ಸಿದ್ಧಗಂಗಾ ಶಾಲೆಯ ಮುಖ್ಯೋಪಾಧ್ಯಾಯಿನಿ ಜಸ್ಟೀನ್ ಡಿಸೋಜಾ ಕರ್ನಾಟಕ ದರ್ಶನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ, ನಿರ್ದೇಶಕ ಜಯಂತ್, ನೇತಾಜಿ ಸ್ಕೌಟ್ ಮತ್ತು ಗೈಡ್ಸ್ ಲೀಡರ್ ವಿಜಯ್, ಸ್ಕೌಟ್ಸ್ ಪೋಷಕರ ಸಮಿತಿ ಅಧ್ಯಕ್ಷ ಪಾಟೀಲ್ ಇತರರು ಉಪಸ್ಥಿತರಿದ್ದರು.
ಕರ್ನಾಟಕ ದರ್ಶನದ ವಸ್ತು ಪ್ರದರ್ಶನದಲ್ಲಿ ಒಟ್ಟು ಸುಮಾರು 300 ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಒಂದೊಂದು ತಂಡವು, ರಾಜ್ಯದ ಜಿಲ್ಲೆಗಳ ವಿಶೇಷತೆಗಳನ್ನು ಪರಿಚಯಿಸುವ ಮೂಲಕ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದವು.