Advertisement

ಸಿದ್ಧಗಂಗಾ ಮಠ ಆದರ್ಶಪ್ರಾಯ: ಅಮಿತ್‌ ಶಾ

12:07 PM Apr 02, 2022 | Team Udayavani |

ತುಮಕೂರು: ಉತ್ತರದಲ್ಲಿ ಗಂಗಾ, ದಕ್ಷಿಣದಲ್ಲಿ ಸಿದ್ಧಗಂಗಾ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ಧಗಂಗಾ ಮಠ ದೇಶದಲ್ಲಿರುವ ಎಲ್ಲ ಮಠ ಮಾನ್ಯಗಳಿಗಿಂತ ಆದರ್ಶ ಪ್ರಾಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದರು.

Advertisement

ನಗರದ ಶ್ರೀ ಕ್ಷೇತ್ರ ಸಿದ್ಧಗಂಗಾ ಮಠದಲ್ಲಿ ಶುಕ್ರವಾರ ನಡೆದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಮತ್ತು ಗುರುವಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿವಕುಮಾರ ಶ್ರೀಗಳು ಶಿಕ್ಷಣ, ಅನ್ನದಾಸೋಹ ಎರಡನ್ನೂ ಏಕಕಾಲದಲ್ಲಿ ನೀಡುತ್ತಾ ಲಕ್ಷಾಂತರ ಬಡ ಮಕ್ಕಳಿಗೆ ಭವಿಷ್ಯದ ಬದುಕು ಕಟ್ಟಿಕೊಟ್ಟಿದ್ದಾರೆ ಎಂದರು.

ಶ್ರೀಗಳು ತೋರಿಸಿರುವ ಸನ್ಮಾರ್ಗ ಇಂದು ನಮ್ಮೆಲ್ಲರಿಗೂ ಅನುಕರಣೀಯ. ಮನುಷ್ಯ ಹೇಗೆ ಬದುಕಬೇಕು, ಆದರ್ಶ ಜೀವನ ಹೇಗೆ ನಡೆಸಬೇಕು ಎಂಬುದನ್ನು ಶ್ರೀಗಳು ತಮ್ಮ ಕಾಯಕ ತತ್ವದ ಮೂಲಕ ಇಡೀ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.

ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದ 80 ಕೋಟಿ ಬಡ ಜನರಿಗೆ ಉಚಿತವಾಗಿ ಊಟ, 3 ಕೋಟಿ ಜನರಿಗೆ ಮನೆಯನ್ನು ನಿರ್ಮಿಸಿಕೊಡುವ ಮೂಲಕ ಪ್ರಧಾನಿ ಮೋದಿ ಅವರು ಸಿದ್ಧಗಂಗಾ ಶ್ರೀಗಳ ಕಾಯಕತತ್ವದ ಆದರ್ಶವನ್ನು ತಮ್ಮ ಬದುಕಿನಲ್ಲಿ ಪಾಲನೆ ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಅಟಲ್‌ ಬಿಹಾರಿ ವಾಜಪೇಯಿ ಅವರು ಶ್ರೀ ಮಠಕ್ಕೆ ಭೇಟಿ ನೀಡಿದಾಗ, ಉತ್ತರದಲ್ಲಿ ಗಂಗೆ, ದಕ್ಷಿಣದಲ್ಲಿ ಸಿದ್ಧಗಂಗೆ ಇದೆ ಎಂದು ಹೇಳಿದ್ದರು. ಇದರರ್ಥ ಗಂಗಾನದಿಯಲ್ಲಿ ಸ್ನಾನ ಮಾಡಿದರೆ ಜನ್ಮ ಜನ್ಮದ ಪಾಪ ನಾಶವಾಗುತ್ತದೆ, ಶಿಕ್ಷಣ ಸನ್ಮಾರ್ಗ ತೋರುತ್ತಿರುವ ಸಿದ್ಧಗಂಗಾ ಮಠಕ್ಕೆ ಒಮ್ಮೆ ಭೇಟಿ ನೀಡಿದರೆ ಪುಣ್ಯ ಬರುತ್ತದೆ. ಇಂತಹ ಮಹಾನ್‌ ತಪಸ್ವಿ ಮಠದ ಮಕ್ಕಳಿಗೆ ಶಿಕ್ಷಣ, ಅನ್ನದಾಸೋಹ ನೀಡುವ ಮೂಲಕ ಬಸವಣ್ಣನವರ ಆದರ್ಶಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು ಎಂದು ಸ್ಮರಿಸಿದರು.

Advertisement

ಸಮಾರಂಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಷಿ, ಎ. ನಾರಾಯಣಸ್ವಾಮಿ, ಭಗವಂತ ಖೂಬಾ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ: ಶ್ರೀ ಶಿವಕುಮಾರ ಮಹಾಸ್ವಾಮೀಜಿಯವರ ಗದ್ದುಗೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮಠಕ್ಕೆ ಆಗಮಿಸಿದ ಅವರನ್ನು ಸಿದ್ಧಲಿಂಗ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ಸ್ವಾಗತ ಸಮಿತಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಕೇಂದ್ರ ಹಾಗೂ ರಾಜ್ಯದ ಸಚಿವರು ಸ್ವಾಗತಿಸಿದರು. ಸಿದ್ಧಲಿಂಗ ಶ್ರೀಗಳು ಅಮಿತ್‌ ಶಾ ಅವರ ಹಣೆಗೆ ವಿಭೂತಿ ಇಟ್ಟು, ಕೊರಳಿಗೆ ರುದ್ರಾಕ್ಷಿ ಮಾಲೆ ಹಾಕಿ ಸ್ವಾಗತಿಸಿದರು, ನಂತರ ಅಮಿತ್‌ ಶಾ ಅವರು ಗದ್ದುಗೆ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸಿ, ಆರತಿ ಬೆಳಗಿದರು.

Advertisement

Udayavani is now on Telegram. Click here to join our channel and stay updated with the latest news.

Next