Advertisement

ಬೋಧಿಸಿ ಬುದ್ಧರಾದರು ಶ್ರೀ ಸಿದ್ಧೇಶ್ವರರು

06:16 PM Jan 03, 2023 | Team Udayavani |

ನೂರಾರು ಎಕರೆ ಜಮೀನಿತ್ತು, ಅರಮನೆಯಂಥ ಮನೆಯೂ ಇತ್ತು. ಆದರೆ ಸಿದಗೊಂಡ ಎಂಬ ಬಾಲಕನ ಎದೆಯಲ್ಲಿ ಅಕ್ಷರ ಮೊಳಕೆ ಯೊಡೆಯುವ ಹಂತದಲ್ಲೇ ಬುದ್ಧನ ವೈರಾಗ್ಯವೂ ಮೈಗೂಡಿತ್ತು. ನಶ್ವರದ ರಾಜವೈಭವವನ್ನೆಲ್ಲ ಧಿಕ್ಕರಿಸಿ ಎದ್ದು ಹೊರಟ ಸಿದ್ಧಾರ್ಥ ಗೌತಮ ಬುದ್ಧನಾದಂತೆ, ಒಕ್ಕಲುತನ ಸಿರಿ ಕುಟುಂಬದ ಸಿದಗೊಂಡ ಎಲ್ಲವನ್ನೂ ತೊರೆದು ಸಿದ್ಧೇಶ್ವರನಾಗಿ ಜಗದೋದ್ಧಾರಕ್ಕೆ ಟೊಂಕ ಕಟ್ಟಿದ್ದ. ದೀಪಾವಳಿ ಪಾಡ್ಯದ ದಿನ ಜಗತ್ತಿಗೆ ಬಂದಿದ್ದ ಸಿದಗೊಂಡ ಎಂಬ ಜ್ಞಾನಸೂರ್ಯ, ಯುಗಾದಿ ಪಾಡ್ಯದ ದಿನ ಮೌಡ್ಯದ ಮನುಜಕುಲವನ್ನು ಜ್ಞಾನಲೋಕದ ಬೆಳಕಿಗೆನೆಡೆ ಕರೆದೊಯ್ಯಲು ಹುಟ್ಟಿನ ಮನೆ ತೊರೆದಿದ್ದ.

Advertisement

ಬಿಜ್ಜರಗಿ ಗ್ರಾಮದಲ್ಲಿ ಬಿರಾದಾರ ಉರ್ಫ್‌ ಪಾಟೀಲ ಮನೆತನಕ್ಕೆ ಸುಮಾರು 200 ಎಕರೆ ಜಮೀನು ಹಾಗೂ 40 ಅಂಕಣದ ಮನೆ ಇದೆ. ಮಳೆ ಆಶ್ರಿತವಾದ ಭೀಕರ ಬರಕ್ಕೆ ಹೆಸರಾದ ಬಿಜ್ಜರಗಿ ಗ್ರಾಮದಲ್ಲಿ ಇನ್ನೂರು ಎಕರೆ ಜಮೀನಿದ್ದರೂ ಬಂಜರು ಪ್ರದೇಶವಾದ ಜಮೀನುಗಳಲ್ಲಿ ಬೆಳೆಯೂ ಅಷ್ಟಕ್ಕಷ್ಟೇ ಬರುತ್ತಿತ್ತು. ಆದರೆ ಒಕ್ಕಲುತನ ಮನೆಯಲ್ಲಿ ಸಂತಸದ ಸಿರಿಗೆ ಬರವಿರಲಿಲ್ಲ.

ಬಿರಾದಾರ ಉರ್ಫ್‌ ಪಾಟೀಲ ಓಗೆಪ್ಪ ಅವರದ್ದು ಕೃಷಿ ಆಧಾರಿತ ಸಿರಿವಂತ ಮನೆತನವೇ. ಓಗೆಪ್ಪ ಅವರ ಮೊದಲ ಮಗುವಾಗಿ ಜನಿಸಿದ್ದ ಸಿದಗೊಂಡ ಅವರು ಮನೆಯ ಯಜಮಾನಿಕೆಗೆ ಹೆಗಲು ಕೊಡುವ ಹಿರಿಮಗ ನಾಗುತ್ತಾನೆ ಎಂದು ಇಡೀ ಕುಟುಂಬ ಹಿರಿಹಿರಿ ಹಿಗ್ಗಿತ್ತು. ಆದರೆ ಸಂಗಮ್ಮ ಓಗೆಪ್ಪ ಬಿರಾದಾರ ತನ್ನ ತವರೂರು ಬಸವನ ಬಾಗೇವಾಡಿಯ ನಂದಿಹಾಳ ಗ್ರಾಮದಲ್ಲಿ 5-9- 1940ರಂದು ಸಿದಗೊಂಡನಿಗೆ ಜನ್ಮ ನೀಡಿದ್ದರು. ಮಗುವಿನ ತೇಜಸ್ಸು ಗಮನಿಸಿದ ಸಂಗಮ್ಮ ಅವರ ತಂದೆ ನಾಗಪ್ಪ ಇವನು ನಿಮ್ಮ ಕುಟುಂಬಕ್ಕೆ ದಕ್ಕುವ ಮಗನಲ್ಲ, ಸಮಾಜೋದ್ಧಾರಕ್ಕೆ ಹುಟ್ಟಿ ಬಂದಿರುವ ಜ್ಞಾನಸೂರ್ಯ. ಹೀಗಾಗಿ ತಿಳಿವಳಿಕೆ ಬರುವ ಹೊತ್ತಿಗೆ ಇವನು ಜಗದ ಕಲ್ಯಾಣಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡು ಹೊರಟು ಹೋಗುತ್ತಾನೆಂದು ಭವಿಷ್ಯ ನುಡಿದಿದ್ದರು.

ಅಜ್ಜ ನುಡಿದಿದ್ದ ಭವಿಷ್ಯ: ಅಜ್ಜ ನುಡಿದಂತೆ ಸಿದಗೊಂಡ ತನ್ನ ಎದೆಯಲ್ಲಿ ಅಕ್ಷರದ ಬೀಜ ಬಿತ್ತನೆಯಾದ 7ನೇ ವರ್ಷಕ್ಕೆ ಆಧ್ಯಾತ್ಮದತ್ತ ಒಲವು ತೋರಿದರು. ಇದ್ದಕ್ಕಿದ್ದಂತೆ ಊರ ಪಕ್ಕದಲ್ಲಿರುವ ಹಳ್ಳದ ದಡದಲ್ಲಿರುವ ರಾಮೇಶ್ವರ ದೇವಸ್ಥಾನದಲ್ಲಿ ಧ್ಯಾನಮಗ್ನನಾಗಿ ಬಿಡುತ್ತಿದ್ದರು. ಮತ್ತೆ ಇನ್ನೆಲ್ಲೋ ಹೋಗಿ ಏಕಾಂಗಿಯಾಗಿ ಧ್ಯಾನಿಸುತ್ತ ಕುಳಿತಿರುತ್ತಿದ್ದರು. ಮನೆಯ ಜಗಲಿಯಲ್ಲಿ ಪೂಜೆ ಮಾಡುತ್ತ ಕುಳಿತರೆ ಜ್ಞಾನದಲ್ಲಿ ಮಗ್ನನಾಗುತ್ತಿದ್ದರು. ದೇವರ ಕೋಣೆಯಲ್ಲಿ ಧ್ಯಾನಾಸಕ್ತನಾಗಿ ಕುಳಿತ ನೆಲದಲ್ಲಿ ರಂಗೋಲಿಯಂತೆ ಚಿತ್ತಾರಗಳು ಮೂಡುತ್ತಿದ್ದವು. ಮನೆಯಿಂದ ಹೊರಟ ಎಂದರೆ ಎಲ್ಲೆಲ್ಲೋ ಧ್ಯಾನ ಮಗ್ನನಾಗಿ ಮನೆಗೆ ಬಾರದೇ ಹೋಗುತ್ತಿದ್ದರು. ಈ ಕಾರಣಕ್ಕೆ ಹೆತ್ತ ವರು ಸಿದಗೊಂಡ ಎಂಬ ಬಾಲ ಲೀಲಾಮಯನನ್ನು ಹುಡುಕುವಲ್ಲೇ ಹೈರಾಣಾಗಿ ಬಿಡುತ್ತಿದ್ದರು. ಈ ಹಂತದಲ್ಲೇ ವಿಜಯಪುರದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ದರ್ಶನವಾಗಿ, ಅವರ ದಿವ್ಯ ದೃಷ್ಟಿಯ ಕೃಪೆ ಬಾಲಜ್ಞಾನಿ ಸಿದಗೊಂಡ ಅವರ ಮೇಲೆ ಬೀಳುತ್ತದೆ. ಅಜ್ಜನೊಂದಿಗೆ ಹೆಜ್ಜೆ ಹಾಕುತ್ತ ಹೋಗಿದ್ದಾಗ ಮಲ್ಲಿ ಕಾರ್ಜುನ ಶ್ರೀಗಳ ಪ್ರವಚನ ಕಿವಿಗೆ ಬೀಳುತ್ತಲೇ ಅಲ್ಲಿಗೆ ಸಿದಗೊಂಡ ಬಂದಿರುವ ಕಾರ್ಯಕ್ಕೆ ಮಾರ್ಗ ಸಿಗುತ್ತದೆ. ಗಣಿಯಲ್ಲಿನ ಕಚ್ಚಾ ಸ್ವರ್ಣ ಖನಿಜಕ್ಕೆ ಶೋ ಧಿಸಿದ ಬಳಿಕ ಸಿಗುವ ಚಿನ್ನದ ಹೊಳಪಿನಂತೆ ಸಿದ ಗೊಂಡ ಅವರಲ್ಲಿ ಜ್ಞಾನಿ ಯ ದರ್ಶನಭಾಗ್ಯ ಜಗದ ಕಲ್ಯಾಣದ ಯೋಗದ ಕಡೆ ಕರೆದೊಯ್ಯಲು ಮಲ್ಲಿಕಾರ್ಜುನ ಶ್ರೀಗಳ ಪ್ರವಚನಗಳು ಮೆಟ್ಟಿಲಾಯಿತು.

ಪ್ರಭಾವ ಬೀರಿದ ಮಲ್ಲಿಕಾರ್ಜುನ ಶ್ರೀ ಪ್ರವಚನ: ಮಲ್ಲಿಕಾ ರ್ಜುನ ಶ್ರೀಗಳ ಪ್ರವಚನದಿಂದ ಪ್ರಭಾವಿತರಾಗಿದ್ದ ಸಿದ ಗೊಂಡ ಅವರು ವೇದಾಂತ ಕೇಸರಿಯ ದರ್ಶನಕ್ಕಾಗಿ ವಿಜಯಪುರಕ್ಕೆ ನಡೆದು ಹೋಗಿ ಬಿಡುತ್ತಿದ್ದರು. ಹಲವು ಬಾರಿ ಮನೆಯಲ್ಲಿ ಹೇಳದೇ ಮಲ್ಲಿಕಾರ್ಜುನ ಶ್ರೀಗಳ ಆಶ್ರಮ ಸೇರಿ ಬಿಡುತ್ತಿದ್ದರು. ಹಲವು ಬಾರಿ ಮಲ್ಲಿಕಾರ್ಜುನ ಶ್ರೀಗಳು ಸಿದಗೊಂಡ ಅವರ ಮನ ವೊಲಿಸಿ ಹೆತ್ತವರೊಂದಿಗೆ ಕಳಿಸುತ್ತಿದ್ದರು. ಅದರೆ ಪದೇ ಪದೇ ಜ್ಞಾನ ಯೋಗಾಶ್ರಮಕ್ಕೆ ಬಂದು ಮರಳಿ ಹೋಗಲು ನಿರಾಕರಿಸುತ್ತಿದ್ದ ಸಿದ ಗೊಂಡ ಅವರಲ್ಲಿನ ಸೆಲೆಯನ್ನು ವೇದಾಂತ ಕೇಸರಿ ಗುರುವಿಗೆ ಸ್ಪಷ್ಟ ಅರಿವಾಯ್ತು. ಪ್ರಾಥಮಿಕ ಶಾಲೆಯಲ್ಲಿ ಹೊನವಾಡದ ಅಡಿವೆಪ್ಪ ಕಲಘಟಗಿ, ಸಿದರಾಯ ಮೊಸಳಿ ಎಂಬ ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡಿದ್ದು, ಗುರುಗಳೆಲ್ಲ ಸಿದಗೊಂಡ ಅವರೇ ಅಚ್ಚುಮೆಚ್ಚಿನ ಶಿಷ್ಯ ಎನಿಸಿದ್ದರು. ಬಿಜ್ಜರಗಿ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಣ ಮುಗಿಯಿತೋ, ಅದೊಂದು ದಿನ ಯುಗಾದಿ ಪಾಡ್ಯದ ದಿನ ಮನೆಯಲ್ಲಿದ್ದ 3 ರೂ. ಬಿಲ್ಲೆಗಳನ್ನು ಎತ್ತಿಕೊಂಡು ಆಶ್ರಮದತ್ತ ಹೆಜ್ಜೆ ಹಾಕಿದರು. ಮನೆಯ ಹಿರಿಯ ಮಗನಾಗಿ ಜವಾಬ್ದಾರಿಯ ನೊಗ ಹೊರ ಬೇಕಾದ ಮಗನನ್ನು ಅರಸಿ ಸಂಗಮ್ಮ-ಓಗೆಪ್ಪ ದಂಪತಿ ಮತ್ತೆ ಮಲ್ಲಿಕಾರ್ಜುನ ಶ್ರೀಗಳ ಬಳಿಗೆ ಧಾವಿಸಿ ಬಂದರು.

Advertisement

ಇದೆಲ್ಲವನ್ನು ತಮ್ಮಲ್ಲಿನ ತ್ರಿಕಾಲ ಜ್ಞಾನದ ಬೆಳಕಿನಿಂದ ನೋಡಿದ ಮಲ್ಲಿಕಾರ್ಜುನ ಶ್ರೀಗಳು, ನಿಮ್ಮ ಮಗ ಆಯ್ಕೆ ಮಾಡಿಕೊಂಡಿರುವ ದಾರಿ ಬೇರೆಯದೇ ಇದೆ. ಆತ ನಿಮ್ಮ ಕುಟುಂಬದ ನೊಗ ಹೊರಲು ಬಂದವನಲ್ಲ, ಜಗಕೆ ಬೆಳಕು ನೀಡಲು ಜನಿಸಿರುವ ಜ್ಞಾನಸೂರ್ಯ. ಹೀಗಾಗಿ ಅವನ ಜವಾಬ್ದಾರಿಯನ್ನು ನನಗೆ ಬಿಡಿ, ಇನ್ನೆಂದೂ ಸಿದಗೊಂಡನನ್ನು ಮನೆಗೆ ಕರೆಯಲು ಇಲ್ಲಿಗೆ ಬರಬೇಡಿ ಎಂದು ಆಜ್ಞಾಪಿಸಿದರು.

ಹೆತ್ತವರ ಅಂತಿಮ ದರ್ಶನಕ್ಕೂ ಹೋಗಲಿಲ್ಲ: ಮನೆಗೆ ಹಿರಿ ಮಗನ ಆಸರೆಯ ನಿರೀಕ್ಷೆಯಲ್ಲಿದ್ದ ಹೆತ್ತವರು ಮಗನಿಗೆ ಸಾಧ್ಯ ವಾದರೆ ಮನಃ ಪರಿವರ್ತನೆಯಾಗಿ ಮನೆಗೆ ಬರಲು ಯೋಚಿಸು ಎಂದು ಕೋರಿಕೆ ಮುಂದಿಟ್ಟು ಭಾರವಾದ ಹೃದಯ ದೊಂದಿಗೆ ಮನೆಗೆ ಮರಳಿದ್ದರು. ಹೆತ್ತವರು ಲಿಂಗೈಕ್ಯರಾದರೂ ಅಂತಿಮ ದರ್ಶನಕ್ಕೂ ಬಾರದಂತೆ ಊರಿಗೆ ಹೆಜ್ಜೆ ಇರಿಸಲಿಲ್ಲ. 13ನೇ ವಯ ಸ್ಸಿಗೆ ಜಮೀನಾªರಿಕೆ ಬೃಹತ್‌ ವಾಸದ ಮನೆ ತೊರೆದು ಜ್ಞಾನಯೋ ಗಾಶ್ರಮಕ್ಕೆ ಬಂದ ಸಿದಗೊಂಡ ಎಂಬ ಚೇತನ, ಮಲ್ಲಿಕಾರ್ಜುನ ಶ್ರೀಗಳ ನೆರಳಲ್ಲಿ ಬೆಳೆಯಲಾರಂಭಿಸಿ ದರು. ಶಿಷ್ಯನ ಶಿಕ್ಷಣದ ಎಲ್ಲ ಜವಾ ಬ್ದಾರಿಯನ್ನು ತಾವೇ ಹೊತ್ತರು. ತತ್ವಶಾಸ್ತ್ರದಲ್ಲಿ ಉನ್ನತ ಶ್ರೇಣಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಂದ ತನ್ನ ಶಿಷ್ಯ ಸಿದಗೊಂಡ ಅವರಲ್ಲಿ ಪರಿಪಕ್ವತೆಯಿಂದ ಮಾಗಿದ್ದ ಮನಸನ್ನು ವೇದಾಂತಕೇಸರಿ ಮನವೂ ಅರಿಯಿತು.

ಸಿದ್ಧೇಶ್ವರ ಎಂದು ನಾಮಕರಣ: ನೀನು ಸಂಪಾದಿ ಸಿರುವ ಜ್ಞಾನದ ಬೆಳಕಿನಿಂದ ಜಗದಲ್ಲಿರುವ ಅಜ್ಞಾನದ ಅಂಧ ಕಾರ ತೊಡೆದು ಹಾಕು ಎಂದು ಪ್ರವಚನ ನೀಡಲು ಪ್ರೇರೇಪಿಸಿದರು. ಗುರುವಿನ ಆಜ್ಞೆಯನ್ನು ಶಿರಸಾ ಪಾಲಿಸಿದ ಸಿದಗೊಂಡ ಪಾಟೀಲ ಅವರಲ್ಲಿನ ದಿವ್ಯತೇಜಸ್ಸಿಗೆ ಅಂತಿಮವಾಗಿ ಅದೊಂದು ದಿನ ತಮ್ಮ ಆಶ್ರಮದ ಉತ್ತರಾ ಧಿಕಾರತ್ವವನ್ನು ವಹಿಸಿದ ಮಲ್ಲಿ ಕಾರ್ಜುನ ಶ್ರೀಗಳು, ನೀನಿನ್ನು ಸಿದಗೊಂಡನಲ್ಲ, ಸಿದ್ಧೇಶ್ವರ ಎಂಬ ನಾಮಾಂಕಿತದಿಂದ ಮೆರೆಯುತ್ತಿ ಎಂದು ಆಶೀರ್ವದಿಸಿ, ಮಸ್ತಕಕ್ಕೆ ಕರವನ್ನಿರಿಸಿ ಹರಸಿದರು. ಅಲ್ಲಿಂದ ಸಿದಗೊಂಡ ಎಂಬ ಸಾಮಾನ್ಯ ವ್ಯಕ್ತಿ, ಸಿದ್ಧೇಶ್ವರ ಎಂಬ ಮರುನಾಮಕರಣದಿಂದ ವಿಶ್ವಕ್ಕೆ ಜ್ಞಾನದ ಹಸಿವು ನೀಗುವ ಜ್ಞಾನದಾಸೋಹ ಉಣ ಬಡಿಸಿದರು.

2002ರಲ್ಲಿ ಬಿಜ್ಜರಗಿ ಗ್ರಾಮಸ್ಥರು ಶಾಲಾ ಕಟ್ಟಡ, ಕಲ್ಯಾಣ ಮಂಟಪ ಲೋಕಾರ್ಪಣೆಗೆ ಆಹ್ವಾನಿಸಿದಾಗ 2002ರಲ್ಲಿಯೂ ಹುಟ್ಟೂರಿಗೆ ಹೋಗಿದ್ದರೂ, ಮನೆಯತ್ತ ಕಣ್ಣು ಹಾಯಿಸಲೇ ಇಲ್ಲ. ಹುಟ್ಟೂರಲ್ಲೇ ಇದ್ದ ತಂಗಿಯರು, ಅಳಿಯಂದಿರು, ಸೊಸೆಯಂದಿರನ್ನು ಹತ್ತಿರ ಕರೆದು ಮಾತನಾಡಿಸಲೂ ಇಲ್ಲ. ಇಂಥ ಕಾರಣದಿಂದಲೇ ಜನರು ವೈರಾಗ್ಯ ನಿಧಿ ಸಿದ್ಧೇಶ್ವರರನ್ನು ಮತ್ತೋರ್ವ ವೀರಸನ್ಯಾಸಿ ವಿವೇಕಾನಂದ ಎಂದು ಬಣ್ಣಿಸುವುದು.

ತಮ್ಮ ಬುತ್ತಿಯನ್ನು
ಪಕ್ಷಿಗಳಿಗೆ ಇಡುತ್ತಿದ್ದರು
ಶಾಲೆಗೆ, ಹೊಲಕ್ಕೆ ಬುತ್ತಿ ಕಟ್ಟಿ ಕಳಿಸಿದರೆ ಸಾಕು ಸಿದಗೊಂಡ ಪಕ್ಷಿಗಳಿಗಾಗಿ ಪೊಟರೆಯಲ್ಲಿಟ್ಟು ಬರುತ್ತಿದ್ದ. ದಾರಿಯಲ್ಲಿ ನಡೆದು ಹೋಗುವಾಗಲೂ ಒಡೆದ ಮಡಿಕೆಗಳ ತುಂಡುಗಳು, ದೇವಸ್ಥಾನದಲ್ಲಿ ಸಿಗುತ್ತಿದ್ದ ತೆಂಗಿನ ಚಿಪ್ಪುಗಳನ್ನು ಸಂಗ್ರಹಿಸುತ್ತಿದ್ದರು. ಅವುಗಳಿಗೆ ತನ್ನದೇ ಸೆಣಬಿನಿಂದ ಕಟ್ಟಿ ಗಿಡ-ಮರಗಳಲ್ಲಿ ಪಕ್ಷಿಗಳಿಗಾಗಿ ನೀರೊಟಿಗೆ ಮಾಡುತ್ತಿದ್ದರು. ಸೆಣಬು ಸಿಗದಿದ್ದರೆ ಮನೆಯಲ್ಲಿನ ಹಳೆಯ ಬಟ್ಟೆಯನ್ನು, ಅದೂ ಸಿಗದಿದ್ದರೆ ತನ್ನದೇ ಅಂಗಿ ಹರಿದು ನೀರೊಟಿಗೆ ಕಟ್ಟುತ್ತಿದ್ದರು. ಹೆತ್ತವರು ತನಗಾಗಿ ಚಪ್ಪಲಿ ಕೊಡಿಸಿದರೆ ಅನ್ಯ ಮಕ್ಕಳಿಗೆ ಕೊಟ್ಟು ಬಂದು ಬಿಡುತ್ತಿದ್ದರು.

ಸಮ್ಮಾನಗಳಿಂದ ದೂರ
ತಮ್ಮ ಪ್ರವಚನ ಹಾಗೂ ಆಧ್ಯಾತ್ಮದ ಸಾಧನೆಯಿಂದಲೇ ಆಧ್ಯಾತ್ಮಿಕ ವಲಯದಲ್ಲಿ ನಡೆದಾಡುವ ದೇವರೆಂದೇ ಭಕ್ತ ವಲಯದಿಂದ ಕರೆಸಿಕೊಂಡಿದ್ದ ಸಿದ್ದೇಶ್ವರ ಶ್ರೀಗಳು, ಎಂದೂ ಶಾಲು, ಹೂಮಾಲೆ, ಪ್ರಶಸ್ತಿ, ಗೌರವ ಸನ್ಮಾನಗಳಿಗೆ ಮಾರು ಹೋದವರಲ್ಲ. ನಿತ್ಯವೂ ಒಂದಿಲ್ಲೊಂದು ವೇದಿಕೆ, ಕಾರ್ಯಕ್ರಮ, ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಷ್ಟಾದರೂ ಸಿದ್ದೇಶ್ವರ ಶ್ರೀಗಳು ಎಂದೂ ಒಂದೇ ಒಂದು ಹೂಮಾಲೆ ಕೊರಳಿಗೆ ಹಾಕಿಕೊಂಡುದಾಗಲಿ, ಹೂಗುತ್ಛ ಮುಟ್ಟಿ ಸ್ವೀಕರಿಸಿದ್ದಾಗಲಿ ದಾಖಲೆ ಇಲ್ಲ.

40 ಅಂಕಣದ ಭಾರಿ ಮನೆ ಖಾಲಿ ಖಾಲಿ
ಸಿದ್ದೇಶ್ವರ ಶ್ರೀಗಳು ಊರು ತೊರೆದ ಬಳಿಕ ಅವರ ಕಿರಿಯ ಸಹೋದರರಾದ ಸೋಮಲಿಂಗ ಹಾಗೂ ಅಮರೇಶ ಅವರೂ ವಿದ್ಯೆ ಕಲಿತ ಬಳಿಕ ಉದ್ಯೋಗದ ಕಾರಣಕ್ಕೆ ಊರು ತೊರೆದಿದ್ದಾರೆ. ಮಕ್ಕಳ ಮದುವೆ, ಇತರೆ ಸಮಸ್ಯೆಗಳಿಗೆ ಓಗೆಪ್ಪ ಅವರು ತಮಗಿದ್ದ ಜಮೀನುಗಳನ್ನು ಮಾರುತ್ತ ಬಂದಿದ್ದರಿಂದ ಇದೀಗ ಸುಮಾರು 25 ಎಕರೆ ಜಮೀನು ಮಾತ್ರ ಉಳಿದಿದೆ. ಉಳಿದಿರುವ ಜಮೀನನ್ನು ಹಾಗೂ 40 ಅಂಕಣದ ಭಾರಿ ಮನೆಯಲ್ಲಿ ಯಾರೂ ವಾಸ ಮಾಡದಿದ್ದರೂ ಊರಲ್ಲೇ ಇರುವ ಸಹೋದರಿಯರ ಕುಟುಂಬ ನಿರ್ವಹಣೆ ಮಾಡುತ್ತಿದೆ.

ಭಕ್ತರಂತೆ ಒಡ ಹುಟ್ಟಿದವರಿಂದ ದರ್ಶನ
ಸಿದ್ಧೇಶ್ವರ ಶ್ರೀಗಳು ಮನೆಯನ್ನು ತೊರೆದ ಬಳಿಕ ಅವರ ಮೂವರು ಸಹೋದರಿಯರಾಗಲಿ, ಇಬ್ಬರು ಕಿರಿಯ ಸಹೋದರಾಗಲಿ ಎಂದೂ ನೇರವಾಗಿ ಸಿದ್ಧೇಶ್ವರ ಶ್ರೀಗಳೊಂದಿಗೆ ಬಾಂಧವ್ಯದ ಬೆಸುಗೆ ತೆರೆದಿಟ್ಟಿಲ್ಲ. ಅಣ್ಣನ ದರ್ಶನಕ್ಕೆ ಬಂದಾಗ ಸಹೋದರ-ಸಹೋದರಿ ಯರು ಪರಸ್ಪರ ಮುಖಾಮುಖೀಯಾದರೂ ಎಂದೂ ಸಾರ್ವಜನಿಕವಾಗಿ ಕರುಳಿನ ಸಂಬಂಧವನ್ನು ತೆರೆದು ಇರಿಸಿಲ್ಲ.

ಪದ್ಮಶ್ರೀ ನಿರಾಕರಿಸಿದ್ದರು
ಹಾರ-ತುರಾಯಿ ಮಾತ್ರವಲ್ಲ ಶ್ರೀಗಳ ಸಾಧನೆಗೆ ಹಲವು ಪ್ರಶಸ್ತಿ, ಗೌರವಗಳು ಹುಡುಕೊಂಡಿ ಬಂದರೂ ಪ್ರಶಸ್ತಿ, ಸನ್ಮಾನ, ಗೌರವ, ಬಿರುದುಗಳಂಥ ಯಾವ ವ್ಯಾಮೋಹಕ್ಕೂ ಒಗ್ಗಿಸಿಕೊಳ್ಳಲಿಲ್ಲ. ಹಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ನೀಡಿ ತಮ್ಮ ಘನತೆ ಹೆಚ್ಚಿಸಿಕೊಳ್ಳುವ ಧಾವಂತ ತೋರಿದರೂ ಡಾಕ್ಟರ್‌ ಎನಿಸಿಕೊಳ್ಳುವ ಮನಸ್ಸು ಮಾಡಲಿಲ್ಲ. ಕೇಂದ್ರ ಸರ್ಕಾರ ಪ್ರಕಟಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದೇ ಸೌಜನ್ಯದಿಂದಲೇ ನಯವಾಗಿ ತಿರಸ್ಕರಿಸಿ ಮೇಲ್ಪಂಕ್ತಿ ಹಾಕಿದ್ದರು.

ತುಂಡು ಲುಂಗಿ, ನಿಲುವಂಗಿ ಧರಿಸುತ್ತಿದ್ದರು
ವಿಜಯಪುರ ಸಿದ್ಧೇಶ್ವರ ಶ್ರೀಗಳು ನುಡಿದಂತೆ ನಡೆದರು. ತಾವು ನೀಡುತ್ತಿದ್ದ ಪ್ರವಚನಗಳಲ್ಲಿ ಪಕ್ಷಿಗಳು ಜೀವನ, ಪ್ರಾಣಿಗಳ ಬದುಕಿನ ಮಾದರಿ ಜೀವನ ಕ್ರಮಗಳನ್ನು ಭಕ್ತರಿಗೆ ಉಣಬಡಿಸುತ್ತಿದ್ದರು. ಶ್ರೀಗಳು ಧರಿಸುತ್ತಿದ್ದು ಖಾದಿ ಯಿಂದ ನೇಯ್ದ ಶ್ವೇತ ವರ್ಣದ ಒಂದು ತುಂಡು ಲುಂಗಿ, ಒಂದು ನಿಲುವಂಗಿ ಮಾತ್ರ. ಅದಕ್ಕೆ ಯಾವತ್ತೂ ಜೇಬು ಇರಲೇ ಇಲ್ಲ. ನಿತ್ಯವೂ ಜ್ಞಾನಯೋ ಗಾಶ್ರಮಕ್ಕೆ ಭೇಟಿ ನೀಡುತ್ತಿದ್ದ ಭಕ್ತರು, ಪ್ರವಚನ ಸ್ಥಳದಲ್ಲಿ ನೆರೆಯುತ್ತಿದ್ದ ಭಕ್ತರು, ಕಾರ್ಯಕ್ರಮ ಸಂಘಟಕರು ಅದರ ಉಸ್ತುವಾರಿ ನೋಡಿಕೊಳ್ಳುತ್ತಿರೆ ವಿನಃ ಅವರೆಂದೂ ಅದರ ಗೋಜಿಗೆ ಹೋಗಲೇ ಇಲ್ಲ. ಸಾಧಕರು ಎಂದು ಶ್ವೇತ-ಕಾವಿ ಧರಿಸುವ ವ್ಯಕ್ತಿಗಳಿಗೆ ಸಂತ ಶ್ರೇಷ್ಠತೆ ಜೀವನ ನಡೆಸುವುದೆಂದರೆ ಏನೆಂದು ಸಿದ್ದೇಶ್ವರ ಶ್ರೀಗಳು ಸ್ವಯಂ ಸಾ ಧಿಸಿ ತೋರಿಸಿದ್ದರು.

ಕಲ್ಯಾಣ ಮಂಟಪ ಗುರುವಿಗೆ ಅರ್ಪಣೆ
ಬಿಜ್ಜರಗಿ ಗ್ರಾಮದಲ್ಲಿ ಕಲ್ಯಾಣ ಮಂಟಪ ನಿರ್ಮಾಣಗೊಂಡ ಬಳಿಕ ಗ್ರಾಮಸ್ಥರು ತಮ್ಮೂರಿನ ಕೀರ್ತಿ ಬೆಳಗಿದ ಸಿದ್ಧೇಶ್ವರರ ಹೆಸರು ನಾಮಕರಣ ಮಾಡಲು ಬಯಸಿದ್ದರು. ಇದಕ್ಕಾಗಿ ಅವರ ಒಪ್ಪಿಗೆ ಪಡೆಯಲು ಹೋದಾಗ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳ ಹೆಸರಿಡಿ ಎಂದು ಗುರುವಿಗೆ ಕಲ್ಯಾಣ ಮಂಟಪವನ್ನು ಅರ್ಪಿಸಿದ್ದರು.

ಮಕ್ಕಳಿಗೆ ಮನೆ ದೇವರ ಹೆಸರು
ಓಗೆಪ್ಪ ಪಾಟೀಲ ಕುಟುಂಬಕ್ಕೆ ಬಿಜ್ಜರಗಿ ಗ್ರಾಮದ ಘೋಣಸಗಿ ರಸ್ತೆಯಲ್ಲಿರುವ ಬೂತಾಳಸಿದ್ದ ಮನೆದೈವ. ಅಲ್ಲಿರುವ ದೇವತೆಗಳಲ್ಲಿ ಸಿದಗೊಂಡ, ಸೋಮನಿಂಗ, ಅಮಗೊಂಡ ಎಂಬ ಮೂರು ದೇವರುಗಳಿವೆ. ಆ ದೇವರುಗಳ ಹೆಸರನ್ನೇ ಸಂಗಮ್ಮ-ಓಗೆಪ್ಪ ದಂಪತಿ ತಮ್ಮ ಮೂವರು ಗಂಡು ಮಕ್ಕಳಿಗೆ ನಾಮಕರಣ ಮಾಡಿದ್ದರು.

ತಂದೆ ಓಗೆಪ್ಪ ಶ್ರೇಷ್ಠ ಕಲಾವಿದ
ವರ್ಣಚಿತ್ರ ಕಲೆಯಲ್ಲಿ ಪಳಗಿದ್ದ ಓಗೆಪ್ಪ ಪಾಟೀಲ ಆ ಕಾಲದಲ್ಲಿ ಬಿಡಿಸುತ್ತಿದ್ದ ವರ್ಣಚಿತ್ರಗಳು ಕಲಾಜೀವಂತಿಕೆಯ ಶ್ರೇಷ್ಠತೆಯಿಂದಲೇ ಪ್ರಖ್ಯಾತಿ ಪಡೆದಿತ್ತು. ಕ್ಯಾಮೆರಾ-ಫೋಟೋಗಳು ಇಲ್ಲದ ಆ ಕಾಲಘಟ್ಟದಲ್ಲಿ ವರ್ಣಚಿತ್ರ ಕಲಾವಿದರೇ ಭಾವಚಿತ್ರಗಳನ್ನು ಬಿಡಿಸಿಕೊಡುತ್ತಿದ್ದರು. ಹೀಗಾಗಿ ಬಹುತೇಕ ಕುಟುಂಬಗಳು ತಮ್ಮ ಹಿರಿಯರು ಗತಿಸಿದ ಬಳಿಕ ಅವರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ವರ್ಣಚಿತ್ರ ಕಲಾವಿದರ ಮೊರೆ ಹೋಗುತ್ತಿದ್ದರು. ಕಲಾನಿ  ಓಗೆಪ್ಪ ಅವರು ವರ್ಣಗಳಲ್ಲಿ ರಚಿಸಿರುವ ಭಾವಚಿತ್ರಗಳು ಗ್ರಾಮದ ಪ್ರತಿ ಮನೆಯಲ್ಲೂ ಅವರ ಪೂರ್ವಜರನ್ನು ಜೀವಂತಿಕೆಯಿಂದ ಇರಿಸಿದೆ.

ಕೊನೆಯ ಪ್ರವಚನ
ಅ.12ರಿಂದ ನ.13ರವರೆಗೆ ಜಿಲ್ಲೆಯ ಬಬಲೇಶ್ವರ ತಾಲೂಕು ಕಾಖಂಡಕಿ ಗ್ರಾಮದಲ್ಲಿ ಗುರುದೇವಾಶ್ರಮದಲ್ಲಿ ಪ್ರವಚನ ನೀಡಿದ್ದರು. ಇದೇ ಅವರ ಕೊನೆಯ ಪ್ರವಚನವಾಗಿತ್ತು.

ರಾಮೇಶ್ವರ ಮಠದಲ್ಲಿ ಧ್ಯಾನಮಗ್ನರಾಗಿ ಕುಳಿತರೆ ದಿನಗಳು ಉರುಳಿದ್ದೇ ತಿಳಿಯುತ್ತಿರಲಿಲ್ಲವಂತೆ. ಶಾಲೆಯಲ್ಲಿ ಗಂಟೆ ಬಾರಿಸುತ್ತಲೇ ನೇರವಾಗಿ ಧ್ಯಾನಕ್ಕೆ ಕುಳಿತು ಬಿಡುತ್ತಿದ್ದರಂತೆ. ಬಾಲ್ಯದಲ್ಲೇ ಅವರಲ್ಲಿ ದೈವೀಕತೆ ಮೈಗೂಡಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ.
-ರಾಜು ಸೌದಿ, ಹತ್ತಿರ ಸಂಬಂಧಿ, ಬಿಜ್ಜರಗಿ

ದೀಪಾವಳಿ ಪಾಡ್ಯದಂದು ಜನ್ಮ ತಳೆದಿದ್ದ ಸಿದಗೊಂಡರುತಮ್ಮ ಹೊಸಜೀವನಕ್ಕೆ ಧಾರ್ಮಿಕವಾಗಿ ಹೆದ್ದಾರಿಯಾದ
ಯುಗಾದಿ ಪಾಡ್ಯದ ದಿನವೇ 13ರ ಬಾಲ್ಯದಲ್ಲಿ ಎಲ್ಲವನ್ನೂ ತೊರೆದು ಹೊರಟು ಹೋಗಿದ್ದರು. ಮಲ್ಲಿಕಾರ್ಜುನ ಶ್ರೀಗಳ ದಿವ್ಯದೃಷ್ಟಿಗೆ ಬಿದ್ದು, ಜಗಕ್ಕೆಲ್ಲ ಜ್ಞಾನದ ಹಸಿವು ನೀಗುವ ಸಿದ್ದೇಶ್ವರರಾಗಿ ಕೀರ್ತಿ ಗಳಿಸಿದ್ದು, ನಮ್ಮೂರಿಗೆ ಗಿರಿಮೆಯ ಗರಿ.
-ರಾಜು ಮಸಳಿ, ಸ್ಥಳೀಯರು, ಬಿಜ್ಜರಗಿ

ಜ್ಞಾನಯೋಗಾಶ್ರಮ ಸೇರಿದಂತೆ ಎಲ್ಲಿಯೇ ಪ್ರವಚನ ನಡೆದರೂ ಶ್ರೀಗಳನ್ನು ಕಾಣಲು ಪಾಟೀಲ, ಬಿರಾದಾರ, ಸವದಿ, ತೇಲಿ ಹೀಗೆ ಬಂಧುಗಳೆಲ್ಲ ಹೋಗುತ್ತಿದ್ದೆವು. ಆದರೆ ಒಡಹುಟ್ಟಿದವರು, ಅವರ ಮಕ್ಕಳೆಂದು ನಮ್ಮನ್ನು ಗುರುತಿಸಿದರೂ ಬಂಧುತ್ವ ಹೇಳಿಕೊಂಡಿರಲಿಲ್ಲ.
-ಶಾರದಾ ಸವದಿ, ಸೋದರ ಸೊಸೆ, (ತಂಗಿ ಸುಮಿತ್ರಾ ಮಗಳು)

-ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next