ವಿಜಯಪುರ : ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಸಂಪೂರ್ಣ ಆರೋಗ್ಯವಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಶ್ರೀಗಳ ಭಕ್ತರು ವದಂತಿಗಳಿಗೆ ಕಿವಿಗೊಡದಿರಿ. ಸ್ವಯಂ ಶ್ರೀಗಳೇ ಶನಿವಾರ ಧಾವಂತದಲ್ಲಿ ಆಶ್ರಮಕ್ಕೆ ಭೇಟಿ ನೀಡಿದ್ದ ಭಕ್ತರಿಗೆ ದರ್ಶನ ನೀಡಿದ್ದು, ವದಂತಿ, ಆತಂಕಗಳಿಗೆ ತೆರೆ ಎಳೆದಿದ್ದಾರೆ.
ಶನಿವಾರ ಬೆಳಗ್ಗೆ ಸಿದ್ಧೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ವದಂತಿ ಹರಡಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಶ್ರೀಗಳ ಆರೋಗ್ಯದ ಬಗ್ಗೆ ಸಲ್ಲದ ಸುದ್ದಿಗಳು ಹರಿದಾಡಲು ಆರಂಭಿಸಿದ್ದವು. ಇದನ್ನು ಗಮನಿಸಿದ ಸಾವಿರಾರು ಭಕ್ತರು ಧಾವಂತದಿಂದ ಜ್ಞಾನಯೋಗಾಶ್ರಮದತ್ತ ಧಾವಿಸಿ ಬಂದಿದ್ದರು.
ಇದರಿಂದ ಜ್ಞಾನಯೋಗಾಶ್ರಮದಿಂದ ಶ್ರೀಗಳ ಆರೋಗ್ಯವಾಗಿದ್ದಾರೆ ಎಂಬ ಮಾತಿಗೆ ನೆರೆದ ಭಕ್ತರು ಆತಂಕದಲ್ಲಿ ಆಶ್ರಮದ ಆವರಣದಲ್ಲೇ ಠಿಕಾಣಿ ಹೂಡಿದ್ದರು. ಈ ಹಂತದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಶ್ರೀಗಳು, ಸ್ವಯಂ ಭಕ್ತರ ಬಳಿಗೆ ಆಗಮಿಸಿ, ದರ್ಶನ ನೀಡಿ, ಆಶೀರ್ವದಿಸಿದರು. ಆ ಮೂಲಕ ಶ್ರೀಗಳ ಆರೋಗ್ಯದ ಕುರಿತು ಹರಿಡಿದ್ದ ಆತಂಕಗಳಿಗೆ ತೆರೆ ಎಳೆದರು.
ಕಳೇದ ಕೆಲ ದಿನಗಳಿಂದ ವಾತಾವರಣದಲ್ಲಿ ವಿಪರೀತ ಚಳಿ ಇದ್ದು, ಸಹಜವಾಗಿ ಕೆಮ್ಮು, ಕಫದ ಬಾಧೆ ಇತ್ತು. ಇದರ ಹೊರತಾಗಿ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದ ಕಾರಣ ಚಿಕಿತ್ಸೆಗಾಗಿ ಯಾವ ಆಸ್ಪತ್ರೆಗೂ ಶ್ರೀಗಳು ದಾಖಲಾಗಲು ನಿರಾಕರಿಸಿದ್ದರು. ಕೆಲವು ವೈದ್ಯರು ಆಶ್ರಮಕ್ಕೆ ಆಗಮಿಸಿ ಶ್ರೀಗಳ ಆರೋಗ್ಯ ಪರೀಕ್ಷಿಸಿದ್ದಾರೆ.
83 ವರ್ಷ ಸಿದ್ದೇಶ್ವರ ಶ್ರೀಗಳು ಶನಿವಾರವೂ ಎಂದಿನಂತೆ ನಿತ್ಯ ಕರ್ಮಗಳನ್ನು ಮುಗಿಸಿ, ಧ್ಯಾನ ಮಾಡಿದ್ದ ಶ್ರೀಗಳು, ಭಕ್ತರ ಆತಂಕದ ಕಾರಣ ಆಶ್ರಮದ ಆವರಣಕ್ಕೆ ಆಗಮಿಸಿದ್ದ ಭಕ್ತರ ಬಳಿಗೆ ಬಂದು ದರ್ಶನ-ಆಶೀರ್ವಾದ ನೀಡಿದರು. ಈ ಹಂತದಲ್ಲಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳಿಗೂ ದರ್ಶನ ನೀಡಿದ ಶ್ರೀಗಳು, ಆರೋಗ್ಯವಾಗಿರುವುದಾಗಿ ಹೇಳಿದರು. ಅಲ್ಲದೇ ನೆರೆದ ಭಕ್ತರಿಗೆ ಪ್ರಸಾದ ಸ್ವೀಕರಿಸಿ ಮರಳುವಂತೆ ಸೂಚಿಸಿದರು.
ಸಿದ್ದೇಶ್ವರ ಶ್ರೀಗಳು ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಇದ್ದು, ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಯಾವುದೇ ವದಂತಿಗಳನ್ನು ಹಬ್ಬಿಸಬಾರದು ಎಂದು ಸಾಮಾಜಿಕ ಜಾಲತಾಣಗಳ ವದಂತಿಕಾರರಿಗೆ ಸೂಚಿಸಿದ್ದು, ಭಕ್ತರೂ ಕೂಡ ಇಂಥ ವದಂತಿಗಳಿಗೂ ಕಿವಿಗೊಡಬೇಡಿ ಎಂದು ವೇದಾಂತಕೇಸರಿ ಮಲ್ಲಿಕಾರ್ಜುನ ಶ್ರೀಗಳು ಜ್ಞಾನಯೋಗಾಶ್ರಮ ಹಾಗೂ ಆಶ್ರಮದ ಸಾಧಕರು ಭಕ್ತರಲ್ಲಿ ಮನವಿ ಮಾಡಿದ್ದಾರೆ.