ವಿಜಯಪುರ: ಮಂಗಳವಾರ ಅಂತ್ಯಕ್ರಿಯೆ ಮಾಡಲಾದ ವಿಜಯಪುರ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಕ್ತರಿಗೆ ವಿತರಿಸುವುದಿಲ್ಲ. ಬದಲಾಗಿ ಮೂರು ದಿನಗಳ ಬಳಿಕ ಸುತ್ತೂರು ಹಾಗೂ ಕನ್ಹೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಭಸ್ಮ ವಿಸರ್ಜನೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಜ್ಞಾನ ಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಸವಲಿಂಗ ಶ್ರೀಗಳು, ಸಿದ್ಧೇಶ್ವರ ಶ್ರೀಗಳ ಅಂತ್ಯಕ್ರಿಯೆ ವೇಳೆ ಚೀತಾ ಭಸ್ಮವನ್ನು ನದಿ- ಸಾಗರದಲ್ಲಿ ವಿಸರ್ಜಿಸಲು ಭಕ್ತರಿಗೆ ವಿತರಿಸುವುದಾಗಿ ಹೇಳಲಾಗಿತ್ತು. ಇದಕ್ಕಾಗಿ ಹೆಸರು ನೋಂದಣಿಗೂ ಹೇಳಿದ್ದೆವು. ಆದರೆ ಚಿತಾಭಸ್ಮವನ್ನು ಭಕ್ತರಿಗೆ ವಿತರಿಸದಿರಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಸಿದ್ದೇಶ್ವರ ಶ್ರೀಗಳ ಆಶಯದಲ್ಲಿ ಭಕ್ತರಿಗೆ ಚಿತಾಭಸ್ಮವನ್ನು ನೀಡುವ ಬಗ್ಗೆ ಹೇಳಿಲ್ಲ. ಹೀಗಾಗಿ ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ.
ಆಸಕ್ತ ಭಕ್ತರು ಹೊರಗಿನಿಂದ ವಿಭೂತಿಯನ್ನು ತಂದು ಅಂತ್ಯಕ್ರಿಯೆ ನಡೆಸಿದ ಸ್ಥಳದಲ್ಲಿ ಇರಿಸಿ ಅದನ್ನೇ ಶ್ರೀಗಳ ಭಸ್ಮ ಎಂದು ಭಾವಿಸಬಹುದು.
ಚಿತಾ ಭಸ್ಮವನ್ನು ಯಾವ ನದಿ, ಸಮುದ್ರದಲ್ಲಿ ವಿಸರ್ಜಿಸಬೇಕು ಎಂದು ಸುತ್ತೂರು ಶ್ರೀಗಳು, ಕನ್ಹೇರಿ ಶ್ರೀಗಳ ಮಾರ್ಗದಲ್ಲಿ ಆಶ್ರಮದ ಶ್ರೀಗಳೆಲ್ಲ ಸೇರಿ ಚರ್ಚಿಸಿ, ಈ ಬಗ್ಗೆ ಮೂರು ದಿನಗಳ ಬಳಿಕ ಅಂದರೆ ಗುರುವಾರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಜ್ಞಾನ ಯೋಗಾಶ್ರಮದ ಶ್ರೀಗಳ ಸಭೆಯ ಬಳಿಕ ಚಿತಾಭಸ್ಮವನ್ನು ಸರಳ ವಿಧಿವಿಧಾನಗಳ ಮೂಲಕ ವಿಸರ್ಜನೆಗೆ ಮಾಡುವುದಾಗಿ ಜ್ಞಾನ ಯೋಗಾಶ್ರಮದಲ್ಲಿ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.