Advertisement

ಹಳೇ ಮಿತ್ರಮಂಡಳಿಯತ್ತ ಸಿದ್ದು ಗಮನ : ಧಾರ್ಮಿಕ ಮುಖಂಡರ ಒಲವು ಗಳಿಸಲು ಡಿ.ಕೆ.ಶಿ ಪ್ರತಿತಂತ್ರ

12:44 AM Jun 30, 2021 | Team Udayavani |

ಬೆಂಗಳೂರು : ಮುಂದಿನ ಮುಖ್ಯಮಂತ್ರಿ ಪ್ರಸ್ತಾವದ ಅನಂತರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನಲ್ಲಿರುವ ಜನತಾ ಪರಿವಾರ ಮೂಲದವರನ್ನು ಒಗ್ಗೂಡಿಸಿ “ಗಟ್ಟಿ’ಯಾಗುವತ್ತ ಗಮನ ಹರಿಸಿದ್ದಾರೆ.

Advertisement

ಸಿ.ಎಂ. ಇಬ್ರಾಹಿಂ, ಆರ್‌.ವಿ. ದೇಶಪಾಂಡೆ, ಎಚ್‌.ಸಿ. ಮಹದೇವಪ್ಪ, ಸತೀಶ್‌ ಜಾರಕಿಹೊಳಿ, ರಮೇಶ್‌ ಕುಮಾರ್‌, ಬಸವರಾಜ ರಾಯರೆಡ್ಡಿ, ಜಮೀರ್‌ ಅಹಮದ್‌, ಕೃಷ್ಣ ಬೈರೇಗೌಡ ಮತ್ತಿತರ ನಾಯಕರನ್ನು ಜತೆಗೂಡಿಸಿಕೊಂಡು ಪಕ್ಷದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ.

ಸಿದ್ದರಾಮಯ್ಯ ಅವರು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಜತೆ ಇತ್ತೀಚೆಗೆ ಈ ಬಗ್ಗೆ ಸುದೀರ್ಘ‌ವಾಗಿ ಚರ್ಚಿಸಿದ್ದಾರೆ. ಜುಲೈ ಮೊದಲ ವಾರದಿಂದ ಈ ನಾಯಕರ ಜತೆ ಪಕ್ಷ ಸಂಘಟನೆ, ಮುಂದಿನ ಚುನಾವಣೆ ತಂತ್ರಗಾರಿಕೆ ಮತ್ತಿತರ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗ ಮೂಲ ಮತ್ತು ವಲಸಿಗ ಎಂಬ ಬಣ ರಾಜಕೀಯ ಪ್ರಾರಂಭವಾಗಿರುವುದರಿಂದ ಒಗ್ಗಟ್ಟು ಪ್ರದರ್ಶನ ಮುಖ್ಯ ಎಂಬ ದೂರಾಲೋಚನೆಯೂ ಇದರ ಹಿಂದಿದೆ ಎನ್ನಲಾಗಿದೆ.

ಸಮನ್ವಯ ಸಮಿತಿ?
ರಾಜ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆಗೂ ಹೈಕಮಾಂಡ್‌ ಮುಂದಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ನಡುವಿನ ಬಣ ರಾಜಕೀಯಕ್ಕೆ ಆರಂಭದಲ್ಲೇ ಬ್ರೇಕ್‌ ಹಾಕಲು ಇಂಥದ್ದೊಂದು ಚಿಂತನೆ ನಡೆದಿದೆ.

Advertisement

ಸಮುದಾಯವಾರು ಸಮಾವೇಶ
ಸಿದ್ದರಾಮಯ್ಯ ಈ ಹಿಂದೆ ಸಮುದಾಯವಾರು ಸಮಾವೇಶ ನಡೆಸಲು ಹೈಕಮಾಂಡ್‌ನಿಂದ ಅನುಮತಿ ಪಡೆದಿದ್ದರಾದರೂ ಆಕ್ಷೇಪ ವ್ಯಕ್ತವಾದ ಕಾರಣ ಸ್ವಲ್ಪ ದಿನ ಕಾಯುವಂತೆ ಸಂದೇಶ ಬಂದಿತ್ತು. ಕೊರೊನಾ 2ನೇ ಅಲೆ ಮತ್ತಿತರ ಕಾರಣದಿಂದ ಮತ್ತೆ ಹೈಕಮಾಂಡ್‌ ಸಂಪರ್ಕ ಸಾಧ್ಯವಾಗಿರಲಿಲ್ಲ. ಈಗ ಜುಲೈ – ಆಗಸ್ಟ್‌ನಲ್ಲಿ ಸಮುದಾಯವಾರು ಸಮಾವೇಶ ನಡೆಸುವ ಬಗ್ಗೆಯೂ ಮತ್ತೂಮ್ಮೆ ಹೈಕಮಾಂಡ್‌ ಬಳಿ ಚರ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಡಿಕೆಶಿ ಪ್ರತಿತಂತ್ರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಮಗೂ ರಾಜ್ಯವ್ಯಾಪಿ ಎಲ್ಲ ಸಮುದಾಯಗಳು ಮತ್ತು ಪಕ್ಷದ ಜಿಲ್ಲಾ ಘಟಕಗಳ ಬೆಂಬಲ ಇದೆ ಎಂಬ ಸಂದೇಶ ರವಾನಿಸುವ ನಿಟ್ಟಿನಲ್ಲಿ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಒಂದೆಡೆ ಮಠಾಧೀಶರು ಮತ್ತು ಧಾರ್ಮಿಕ ಮುಖಂಡರ ನಿಯೋಗಗಳು ಡಿ.ಕೆ. ಶಿವಕುಮಾರ್‌ ನಿವಾಸಕ್ಕೆ ಭೇಟಿ ನೀಡಿ ಸಮಾಲೋಚಿಸುತ್ತಿದ್ದರೆ ಮತ್ತೂಂದೆಡೆ ಜಿಲ್ಲಾ ಮಟ್ಟದ ಕಾಂಗ್ರೆಸ್‌ ನಾಯಕರ ಸಭೆಗಳನ್ನು ನಡೆಸಲಾಗುತ್ತಿದೆ. ಇದರ ನಡುವೆ ಹಿರಿಯ ನಾಯಕರ ವಿಶ್ವಾಸ, ಬೆಂಬಲಗಳಿಸುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next