Advertisement

ಸಿದ್ದರಾಮೋತ್ಸವ ಆಚರಣೆ ಕುರಿತು ಸಿದ್ದರಾಮಯ್ಯ ಅವರು ಹೇಳಿದ್ದೇನು?

05:00 PM Jul 12, 2022 | Team Udayavani |

ದಾವಣಗೆರೆ : ದಾವಣಗೆರೆಯಲ್ಲಿ ಆ. 3 ರಂದು ನಡೆಯುತ್ತಿರುವುದು ಸಿದ್ದರಾಮೋತ್ಸವ ಅಲ್ಲ. ನನ್ನ ಜನ್ಮ ದಿನದ 75ನೇ ವರ್ಷದ ಅಮೃತ ಮಹೋತ್ಸವ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರೂ ಸಿದ್ದರಾಮೋತ್ಸವ ಎಂದು ಕರೆದೇ ಇಲ್ಲ. ಮಾಧ್ಯಮದವರು ಮತ್ತು ಆರ್‌ಎಸ್ಸೆಸ್‌ನವರು ಸಿದ್ದರಾಮೋತ್ಸವ ಎಂದು ಕರೆದವರು. ನಾನು ಎಂದಿಗೂ ಜನ್ಮ ದಿನ ಆಚರಿಸಿಕೊಂಡಿಲ್ಲ. ಮುಂದೆಯೂ ಆಚರಿಸಿಕೊಳ್ಳುವುದಿಲ್ಲ ಎಂದರು.

ದಾವಣಗೆರೆಯಲ್ಲಿ ಆ. 3 ರಂದು ನಡೆಯುತ್ತಿರುವ ಅಮೃತ ಮಹೋತ್ಸವ ಕಾರ್‍ಯಕ್ರಮದಿಂದ ಈಗಾಗಲೇ ಬಿಜೆಪಿ ಯವರಿಗೆ ಭಯ ಪ್ರಾರಂಭವಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಮಾನಸಿಕ ಆರೋಗ್ಯ ಸ್ಥಿರವಾಗಿಲ್ಲ. ಹಾಗಾಗಿಯೇ ಅವರು, ಬಿಜೆಪಿಯವರು ಏನೇನೋ ಮಾತನಾಡುತ್ತಿದ್ದಾರೆ. ಅಮೃತ ಮಹೋತ್ಸವ ಕಾರ್‍ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನನ್ನ ಶಾಲಾ ದಾಖಲಾತಿ ಪ್ರಕಾರ 3.8.1947 ಜನ್ಮ ದಿನ. ಯಾರೇ ಜೀವನದಲ್ಲೇ ಆಗಲಿ 50, 75, 100 ವರ್ಷ ಮೈಲಿಗಲ್ಲಿದ್ದಂತೆ. ನನಗೆ 75 ವರ್ಷ ಆಗುತ್ತಿದೆ. ಸಾರ್ವಜನಿಕ ಕ್ಷೇತ್ರದಲ್ಲಿ 40 ವರ್ಷದಿಂದ ಇದ್ದೇನೆ. ಹಾಗಾಗಿ ಆಪ್ತರು, ಅಭಿಮಾನಿ ಗಳು ಎಲ್ಲರೂ ಸೇರಿಕೊಂಡು ದಾವಣಗೆರೆಯಲ್ಲಿ ವಿಜೃಂಭಣೆಯಿಂದ ಅಮೃತ ಮಹೋತ್ಸವ ಕಾರ್‍ಯಕ್ರಮ ಮಾಡುತ್ತಿದ್ದಾರೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಈ ಕಾರ್‍ಯಕ್ರಮ ಮಾಡುತ್ತಿಲ್ಲ. ಚುನಾವಣೆ ಇನ್ನೂ 8 ತಿಂಗಳಿರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ : ಟೂಲ್ ಕಿಟ್ ಟೆಂಡರ್ ನಲ್ಲಿ ಅಕ್ರಮ ಆರೋಪ: ದಾಖಲೆ ಬಿಡುಗಡೆ ಮಾಡಿದ ಇಲಾಖೆ

Advertisement

2012 ರಲ್ಲಿ ದಾವಣಗೆರೆಯಲ್ಲೇ ಹಾಲುಮತ ಮಹೋತ್ಸವ ಮಾಡಲಾಗಿತ್ತು. ಈಗ ಅಮೃತ ಮಹೋತ್ಸವ ಕಾರ್‍ಯಕ್ರಮ ಮಾಡಲಾಗುತ್ತಿದೆ. ಅದೇ ಬೇರೆ. ಇದೇ ಬೇರೆ. ಅಮೃತ ಮಹೋತ್ಸವ ಕಾರ್‍ಯಕ್ರಮ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸುವ ಕಾರ್‍ಯಕ್ರಮ ಅಲ್ಲ. ಮುಖ್ಯಮಂತ್ರಿಯನ್ನ ಪಕ್ಷದ ಹೈಕಮಾಂಡ್, ಶಾಸಕರು ಆಯ್ಕೆ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಹುಲ್ ಗಾಂಧಿ ಅವರು ನೀವೇ ಮುಖ್ಯಮಂತ್ರಿ ಎಂದು ಹೇಳಿದ್ದಾರಂತೆ ಎಂಬ ಪ್ರಶ್ನೆಗೆ ನಿಮಗೇನಾದರೂ ಆ ರೀತಿ ಹೇಳಿದ್ದಾರಾ… ಎಂದು ಪ್ರಶ್ನಿಸಿದರು.

ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್‍ಯಕ್ರಮದ ನಂತರ ಕಾಂಗ್ರೆಸ್ ಹೋಳಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಇತರರು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರಿಗೆ ಈಗಿನಿಂದಲೇ ಭಯ ಪ್ರಾರಂಭವಾಗಿದೆ. ಹಂಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದರು.

ಪುಸ್ತಕ ಬರೆಸಿಲ್ಲ…

ಅಮೃತ ಮಹೋತ್ಸವ ಕಾರ್‍ಯಕ್ರಮದ ಸಂದರ್ಭದಲ್ಲೇ ದೇವನೂರು ಮಹಾದೇವ ಅವರಿಗೆ ಹೇಳಿ ಆರ್‌ಎಸ್‌ಎಸ್ ಆಳ ಮತ್ತು ಅಗಲ… ಎಂದು ನಾನೇನು ಪುಸ್ತಕ ಬರೆಸಿಲ್ಲ. ದೇವನೂರು ಮಹಾದೇವ ನಮ್ಮ ಪಕ್ಷದವರೇ ಅಲ್ಲ. ಅವರು ಸಾಹಿತಿ ಮತ್ತು ನನ್ನ ಒಳ್ಳೆಯ ಸ್ನೇಹಿತರು. ನಾನು ಹೇಳಿ ಪುಸ್ತಕ ಬರೆಸಲು ಆಗೊಲ್ಲ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next