Advertisement
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಎಂಜಿನಿಯರಿಂಗ್ ಮುಂತಾದ ಪದವಿ, ಸ್ನಾತಕೋತ್ತರ ಪದವಿ ಮುಗಿಸಿರುವ ದೇಶದ ಯುವ ಜನತೆ ಕೆಲಸ ಕೇಳಿದರೆ ಮೋದಿಯವರು ಪಕೋಡ ಮಾರಿ ಎನ್ನುತ್ತಾರೆ. ಒಬ್ಬ ಇಂಜಿನಿಯರ್ ಅನ್ನು ಸಿದ್ಧಪಡಿಸಲು ದೊಡ್ಡ ಮೊತ್ತದ ತೆರಿಗೆ ಹಣವನ್ನು ಆತನ ಮೇಲೆ ವಿನಿಯೋಗಿಸಲಾಗಿರುತ್ತದೆ. ಇಂದು ದೇಶದ ಕೋಟ್ಯಾನುಕೋಟಿ ಪದವೀಧರರು ಹಳ್ಳಿಗಳಲ್ಲಿ ಅವಮಾನ ಅನುಭವಿಸುತ್ತಿದ್ದಾರೆ. ನಗರಗಳಲ್ಲಿ ಸೆಕ್ಯುರಿಟಿ ಗಾರ್ಡುಗಳಾಗಿ, ಟ್ಯಾಕ್ಸಿ ಚಾಲಕರಾಗಿ, ಸ್ವಿಗ್ಗಿ, ಝೊಮ್ಯಾಟೊ ಮುಂತಾದ ಕಡೆ ಸೇಲ್ ಮಾಡುವವರಾಗಿ, ಗಾರ್ಮೆಂಟುಗಳಲ್ಲಿ 8-10 ಸಾವಿರಕ್ಕೆ ದುಡಿಯುತ್ತಿದ್ದಾರೆ.
Related Articles
Advertisement
ಇತ್ತ ಸರ್ಕಾರಿ ಉದ್ಯೋಗಗಳನ್ನೂ ತುಂಬುತ್ತಿಲ್ಲ. 8.72 ಲಕ್ಷ ಉದ್ಯೋಗಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ. ರಾಜ್ಯಗಳು ಸುಮಾರು 45 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಕೂಲಿ ರೂ.590. ನರೇಗಾ ಕಾರ್ಮಿಕರಿಗೂ ಇಷ್ಟೆ ಕೂಲಿಯನ್ನು ಕೊಡಬೇಕು. ಆದರೆ ಕಳೆದ ವರ್ಷ ಕರ್ನಾಟಕದ ನರೇಗಾ ಕೂಲಿ ಕಾರ್ಮಿಕರಿಗೆ 289 ರೂಪಾಯಿಗಳನ್ನು ನಿಗಧಿಪಡಿಸಿದ್ದರು. ಈ ವರ್ಷ ಇನ್ನೂ ರಿವೈಸ್ ಮಾಡಿಲ್ಲ. 2022-23 ರ ಆರ್ಥಿಕ ವರ್ಷದಲ್ಲಿ 11 ಕೋಟಿ ಜನ ಕೆಲಸ ಬೇಕೆಂದು ಅರ್ಜಿ ಹಾಕಿದ್ದಾರೆಂದು ನರೇಗಾ ಸಂಘರ್ಷ ಸಮಿತಿಗಳು ಮತ್ತು ಪಿಎಐಜಿ ಮಾಡಿರುವ ಸಮೀಕ್ಷೆಗಳ ವರದಿಗಳು ಹೇಳುತ್ತಿವೆ. 11 ಕೋಟಿ ಜನರಿಗೆ ಕನಿಷ್ಟ 100 ದಿನ ಉದ್ಯೋಗ ನೀಡಬೇಕೆಂದರೆ ಕನಿಷ್ಟ ಅಂದರೂ ರೂ.2.65 ಲಕ್ಷ ಕೋಟಿ ಅನುದಾನವನ್ನು ನೀಡಬೇಕು. ಆದರೆ ಬಜೆಟ್ನಲ್ಲಿ ಕೇವಲ ರೂ.73,000 ಕೋಟಿ ಅನುದಾನ ಒದಗಿಸಲಾಗಿದೆ. ಇದರಲ್ಲಿ ಹಳೆಯ ಬಾಕಿ ಮೊತ್ತವಾದ 18000 ಕೋಟಿಯನ್ನು ಕಳೆದರೆ ನೈಜವಾಗಿ ನರೇಗಾಕ್ಕೆ ಸಿಗುವುದು ರೂ.55,000 ಕೋಟಿ ಮಾತ್ರ. ಇದರಲ್ಲಿ ದಿನಕ್ಕೆ ರೂ.334 ರೀತಿ ಕೂಲಿ ಕೊಟ್ಟರೆ 10 ಕೋಟಿ ಕುಟುಂಬಗಳಿಗೆ ಕೇವಲ 16 ದಿನಗಳಿಗೆ ಮಾತ್ರ ಸಾಕಾಗುತ್ತದೆ.
ಕೇಂದ್ರ ಸರ್ಕಾರ ನಿರಂತರವಾಗಿ ಸರ್ಕಾರಿ ಸಂಸ್ಥೆ, ಕಂಪನಿ, ಕಾರ್ಖಾನೆಗಳನ್ನು ಮುಚ್ಚುತ್ತಿರುವುದರಿಂದ 2018 ರ ಹೊತ್ತಿಗೆ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಸಂಖ್ಯೆ ಸುಮಾರು 2.5 ಲಕ್ಷದಷ್ಟು ಕಡಿಮೆಯಾಗಿದೆ. 2013-14 ರಲ್ಲಿ 16.50 ಲಕ್ಷದಷ್ಟಿದ್ದ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೌಕರರ ಸಂಖ್ಯೆ 2018 ರ ವೇಳೆಗೆ 14 ಲಕ್ಷಕ್ಕೆ ಇಳಿದಿದೆ. 2021 ರಲ್ಲಿ ಈ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ.
2021 ರ ಮಾರ್ಚ್ ನಲ್ಲಿ ಕೇಂದ್ರ ಸರ್ಕಾರದ ಪರ್ಸನಲ್ & ಲಾ ಕುರಿತಾದ ಸ್ಟ್ಯಾಂಡಿಂಗ್ ಕಮಿಟಿಯು ಪಾರ್ಲಿಮೆಂಟ್ನಲ್ಲಿ ಮಂಡಿಸಿದ ವರದಿಯಂತೆ ಭಾರತೀಯ ರೈಲ್ವೆಯಲ್ಲಿ 29541 ಹುದ್ದೆಗಳನ್ನು ಎಸ್ಸಿ/ಎಸ್ಟಿ ಮತ್ತು ಓಬಿಸಿ ಗುಂಪಿನ ಯುವಜನರಿಗಾಗಿ ಮೀಸಲಿರಿಸಲಾಗಿದೆ. ಅದರಲ್ಲಿ 17769 ಹುದ್ದೆಗಳು ಖಾಲಿ ಇವೆ. ಗೃಹ ಇಲಾಖೆಯಲ್ಲಿ 3943 ಹುದ್ದೆಗಳು ಈ ವರ್ಗದವರಿಗಾಗಿ ಮೀಸಲಿವೆ. ಆದರೆ 2021 ರ ಮಾರ್ಚ್ ವೇಳೆಗೆ 17493 ಹುದ್ದೆಗಳು ಖಾಲಿ ಇದ್ದವು. ಹಣಕಾಸು ಇಲಾಖೆಯಲ್ಲಿ ಶೇ.70 ರಷ್ಟು ಮೀಸಲಾತಿ ಹುದ್ದೆಗಳಲ್ಲಿ ಶೇ.70 ರಷ್ಟು ಹುದ್ದೆಗಳು ಖಾಲಿ ಇದ್ದವು. ಈ ಇಲಾಖೆಯಲ್ಲಿ 10921 ಹುದ್ದೆಗಳು ಮೀಸಲಾತಿ ವರ್ಗದವರಿಗೆ ಮೀಸಲಿದ್ದರೆ, 7040 ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಸಿಎಂಐಇ [ದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಪ್ರಸ್ತುತ ವರದಿಗಳ ಪ್ರಕಾರ ಈಗ ನಗರ ನಿರುದ್ಯೋಗ ಶೇ.7.9 ರಷ್ಟಿದೆ ಹಾಗೂ ಗ್ರಾಮೀಣ ನಿರುದ್ಯೋಗ ಶೇ. 7.0 ರಷ್ಟಿದೆ. ಈ ಪ್ರಮಾಣದ ನಿರುದ್ಯೋಗ 100 ವರ್ಷಗಳಲ್ಲೆ ಅಧಿಕ ಎಂದರು.
ಕರ್ನಾಟಕದ ವಿದ್ಯಾವಂತ ಯುವಜನರ ನಿರುದ್ಯೋಗದ ಪ್ರಮಾಣ ತನ್ನೆಲ್ಲ ಮಿತಿಗಳನ್ನು ಮೀರಿದೆ. ಬಿಜೆಪಿ ಮತ್ತು ಮೋದಿಯವರ ದುರಾಡಳಿತದಿಂದಾಗಿಯೇ ಈ ದುಸ್ಥಿತಿ ಬಂದೊದಗಿದೆ. ರೊಚ್ಚಿಗೆದ್ದ ನಿರುದ್ಯೋಗಿ ಪದವೀಧರರ ರಟ್ಟೆಯ ಸಿಟ್ಟು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತಿರುಗದಂತೆ ತಡೆಯುವ ಸಲುವಾಗಿಯೇ ನಿರುದ್ಯೋಗಿ ಯುವ ಸಮೂಹದ ಕೈಗೆ ತ್ರಿಶೂಲ, ಮಾರಕಾಸ್ತ್ರಗಳನ್ನು ನೀಡಿ ಜಾತಿ-ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡಿಸುತ್ತಿದೆ ಎಂದು ಸರಕಾರದ ವಿರುದ್ಧ ಗುಡುಗಿದ್ದಾರೆ.