Advertisement

ಸಮ್ಮಿಶ್ರ ಪತನಕ್ಕೆ ಪೆಗಾಸಸ್‌ ಅಸ್ತ್ರ? ಸಿದ್ದು , ಪರಂ, ಎಚ್‌ ಡಿಕೆ ಮೇಲೆ ಕಣ್ಗಾವಲು : ವರದಿ

07:26 AM Jul 21, 2021 | Team Udayavani |

ಹೊಸದಿಲ್ಲಿ / ಬೆಂಗಳೂರು : ಪೆಗಾಸಸ್‌ ಬೇಹುಗಾರಿಕೆಯ ಕಬಂಧ ಬಾಹುಗಳು ರಾಜ್ಯಕ್ಕೂ ಚಾಚಿರುವುದು ಈಗ ಬಹಿರಂಗವಾಗಿದೆ. 2019ರಲ್ಲಿ ಸಮ್ಮಿಶ್ರ ಸರಕಾರದ ಪತನಕ್ಕೂ ಇದನ್ನು ಬಳಸಿಕೊಳ್ಳಲಾಗಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

Advertisement

2019ರ ಮಧ್ಯಭಾಗದಲ್ಲಿ ಸಿದ್ದರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತ ಸಹಾಯಕರು ಮತ್ತು ಡಾ| ಜಿ. ಪರಮೇಶ್ವರ ಅವರ ಫೋನ್‌ ಮೇಲೂ ಪೆಗಾಸಸ್‌ ಕಣ್ಗಾವಲು ನಡೆಸಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ ಆಂಗ್ಲ ವೆಬ್‌ಸೈಟ್‌ “ದಿ ವೈರ್‌’ ವರದಿ ಮಾಡಿದೆ.

ಸಂಬಂಧ ದಿಲ್ಲಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಕರ್ನಾಟಕದ ಕಾಂಗ್ರೆಸ್‌ ನಾಯಕರ ಜತೆ ರಾಹುಲ್‌ ಗಾಂಧಿ ಚರ್ಚಿಸಿದ್ದಾರೆ. ಬಳಿಕ ಸಾಮೂಹಿಕವಾಗಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಪ್ರಜಾಸತ್ತಾತ್ಮಕವಾಗಿ ರಚಿಸಲ್ಪಟ್ಟ ಸರಕಾರಗಳನ್ನು ಉರುಳಿಸುವ ಸಲುವಾಗಿ ಕೇಂದ್ರವು ಪೆಗಾಸಸ್‌ ಸಾಫ್ಟ್ವೇರ್‌ ಬಳಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಗುರಿ – 1 – ಡಾ| ಪರಮೇಶ್ವರ
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಆಪ್ತರ ದೂರವಾಣಿ ಸಂಖ್ಯೆಗಳನ್ನು ಗುರಿ ಮಾಡಲಾಗಿದ್ದರೆ, ಡಾ| ಪರಮೇಶ್ವರ ಅವರ ದೂರವಾಣಿ ಸಂಖ್ಯೆಯನ್ನೇ ಗುರಿ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಅವರನ್ನು ಸಂಪರ್ಕಿಸಿದಾಗ ಪೆಗಾಸಸ್‌ ಪಟ್ಟಿಯಲ್ಲಿರುವ ದೂರವಾಣಿ ಸಂಖ್ಯೆಯನ್ನು 2019ರಲ್ಲಿ ಬಳಸುತ್ತಿದ್ದುದಾಗಿ ಅವರು ಒಪ್ಪಿಕೊಂಡಿದ್ದಾರೆ. ಆದರೆ ಬಳಿಕ ಈ ಸಂಖ್ಯೆ ಬಳಸಿಲ್ಲ ಎಂದು “ದಿ ವೈರ್‌’ಗೆ ಮಾಹಿತಿ ನೀಡಿದ್ದಾರೆ.

ಗುರಿ 2 – ಎಚ್‌ ಡಿಕೆ ಆಪ್ತ
“ದಿ ವೈರ್‌’ ಪ್ರಕಾರ, ಪೆಗಾಸಸ್‌ ಸ್ಪೈವೇರನ್ನು ಎಚ್‌.ಡಿ.ಕೆ. ಅವರ ಆಪ್ತ ಕಾರ್ಯದರ್ಶಿ ಸತೀಶ್‌ ಅವರ ಎರಡು ಫೋನ್‌ಗಳಿಗೆ ಸೇರಿಸಲಾಗಿತ್ತು. 2019ರ ಮಧ್ಯಭಾಗದಲ್ಲಿ ಈ ಬೇಹುಗಾರಿಕೆ ನಡೆದಿತ್ತು. ಈ ಬಗ್ಗೆ ವೆಬ್‌ಸೈಟ್‌ ಸತೀಶ್‌ ಅವರನ್ನು ಸಂಪರ್ಕಿಸಿದ್ದು, ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಎರಡೂ ದೂರವಾಣಿ ಸಂಖ್ಯೆಳನ್ನು ಬಳಸುತ್ತಿದ್ದುದಾಗಿ ಅವರು ಒಪ್ಪಿಕೊಂಡಿದ್ದಾರೆ.

Advertisement

ಗುರಿ 3 – ಸಿದ್ದು ಆಪ್ತ
ಆಗ ಆಡಳಿತ ಪಕ್ಷದಲ್ಲೇ ಇದ್ದ ಸಿದ್ದರಾಮಯ್ಯ ಅವರ ಆಪ್ತ ವೆಂಕಟೇಶ್‌ ಎಂಬವರ ದೂರವಾಣಿ ಸಂಖ್ಯೆಯನ್ನು ಬೇಹಿಗಾಗಿ ಆರಿಸಿಕೊಳ್ಳಲಾಗಿದೆ. ವೆಂಕಟೇಶ್‌ ಕೂಡ 2019ರಲ್ಲಿ ಈ ದೂರವಾಣಿ ಸಂಖ್ಯೆಯನ್ನು ಬಳಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಜತೆ 27 ವರ್ಷಗಳಿಂದ ಇದ್ದೇನೆ. ಬೇಹು ನಡೆದಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇಂಥ ಕೃತ್ಯಗಳನ್ನು ಖಂಡಿಸುತ್ತೇನೆ ಎಂದಿದ್ದಾರೆ.

ಗುರಿ 4 – ದೇವೇಗೌಡರ ಭದ್ರತೆ ಸಿಬಂದಿ
ಎಚ್‌.ಡಿ.ದೇ ವೇಗೌಡರ ಭದ್ರತೆಯಲ್ಲಿದ್ದ ಪೊಲೀಸ್‌ ಸಿಬಂದಿ ಮಂಜುನಾಥ್‌ ಮುದ್ದೇಗೌಡ ಅವರ ಫೋನ್‌ ಅನ್ನೂ ಟ್ರ್ಯಾಪ್‌ ಮಾಡಲಾಗಿದೆ. ಈ ಬಗ್ಗೆ ಮಾತನಾಡಲು ಮಂಜುನಾಥ್‌ ನಿರಾಕರಿಸಿದ್ದಾರೆ.

ಸುಪ್ರೀಂ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆಗ್ರಹ
2019ರಲ್ಲಿ ಎಚ್‌.ಡಿ.ಕೆ. ಸರಕಾರ ಪತನವಾಗಲು ಮೋದಿ ಸರಕಾರವೇ ಕಾರಣ ಎಂಬುದು ಕಾಂಗ್ರೆಸ್‌ನ ಎಲ್ಲ ನಾಯಕರ ಆರೋಪ. ಆಗ ಕರ್ನಾಟಕದ ವಿಧಾನಸಭೆ ಸ್ಪೀಕರ್‌ ಪಕ್ಷ ಬದಲಿಸಿದ್ದ 17 ಶಾಸಕರನ್ನು ಅನರ್ಹಗೊಳಿಸಿದ್ದರೂ ಸುಪ್ರೀಂಕೋರ್ಟ್‌ ಇವರನ್ನು ಖುಲಾಸೆಗೊಳಿಸಿತ್ತು. ಇದು ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಮಾತನಾಡಿ, ಇಡೀ ಬೇಹುಗಾರಿಕೆ ಪ್ರಕರಣ ಅಪರಾಧವಾಗಿದ್ದು, ಈ ಬಗ್ಗೆ ಕೇಂದ್ರ ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಎರಡೂ ಸದನಗಳಲ್ಲಿ ಚರ್ಚೆಯಾಗಬೇಕು. ಇದು ಕೆಟ್ಟ ರಾಜಕಾರಣ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸಮ್ಮಿಶ್ರ ಸರಕಾರದ ಪತನದ ಸಂದರ್ಭದಲ್ಲಿ ಫೋನ್‌ ಕದ್ದಾಲಿಕೆ ಆರೋಪಗಳು ಎದ್ದಿದ್ದವು. ಮುಖ್ಯಮಂತ್ರಿ ಯಡಿಯೂರಪ್ಪ ಈ ಬಗ್ಗೆ ಅವಸರದಲ್ಲಿ ಸಿಬಿಐ ತನಿಖೆಗೆ ಆದೇಶಿಸಿದ್ದರು. ಆದರೆ ತನಿಖೆ ಪೂರ್ಣಗೊಂಡಿಲ್ಲ. ನನ್ನ ಪ್ರಕಾರ ಆಗಿನ ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೂ ಈಗಿನ ಪೆಗಾಸಸ್‌ ಪ್ರಕರಣಕ್ಕೂ ಸಂಬಂಧವಿದೆ. ಹೀಗಾಗಿ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸರಕಾರ ತರಲು ಅಸ್ತ್ರ
ಪೆಗಾಸಸ್‌ ಗೂಢಾಚಾರಿಕೆ ಪ್ರಕರಣದಲ್ಲಿ ಕೇಂದ್ರ ಸರಕಾರ ಸಿಲುಕಿದೆ. ಇದು ಒಂದು ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣ. ಇತ್ತೀಚೆಗೆ ಕೇಂದ್ರ ಸರಕಾರ ಆದ್ಯತೆಯ ಮೇರೆಗೆ ಗೂಢಚರ್ಯೆ ನಡೆಸುತ್ತಿರುವುದು ಸುಳ್ಳೇನಲ್ಲ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರದಲ್ಲಿ ಅಧಿಕಾರ ಉಳಿಸಿಕೊಳ್ಳಲು, ರಾಜ್ಯಗಳಲ್ಲಿ ಸರಕಾರಗಳನ್ನು ಕೆಡವಲು ಬಿಜೆಪಿ ಪ್ರಯೋಗಿಸುವ ಅಸ್ತ್ರಗಳಲ್ಲಿ ಇದೂ ಒಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next