Advertisement
ಜಿಲ್ಲೆಯಲ್ಲಿ 7 ವಿಧಾನಸಭೆ ಕ್ಷೇತ್ರಗಳಿದ್ದು, ಅದರಲ್ಲಿ ಬಾದಾಮಿ, ಜಮಖಂಡಿ ಕ್ಷೇತ್ರಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಉಳಿದ 5 ಕ್ಷೇತ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಎರಡು ಕ್ಷೇತ್ರ ಪ್ರತಿನಿಧಿಸುವ ಮುಧೋಳದ ಗೋವಿಂದ ಕಾರಜೋಳ, ಬೀಳಗಿಯ ಮುರುಗೇಶ ನಿರಾಣಿ ಸರ್ಕಾರ ದಲ್ಲಿ ಪ್ರಬಲ ಖಾತೆ ಸಚಿವರೂ ಆಗಿದ್ದಾರೆ. ಹಿರಿಯ ರಾಜಕಾರಣಿ ಎಸ್.ಆರ್.ಪಾಟೀಲ್‌ಗೆ ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ತಪ್ಪಿದ್ದೇ ತಡ ಅವರೀಗ ಕಾಂಗ್ರೆಸ್‌ನ ರಾಜ್ಯ ಮಟ್ಟದ ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅದರಲ್ಲೂ ಜಿಲ್ಲೆ ಪ್ರತಿನಿಧಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗಿನ ಅವರ ಸಂಬಂಧ ಕೊಂಚ ಹಳಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಪ್ರಭಾವಿ ಸಚಿವರಾದ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ ಅವರದೇ ಪ್ರತ್ಯೇಕ ಬೆಂಬಲಿಗರ ಪಡೆ ಇದೆ. ಬಿಜೆಪಿ ಶಾಸಕರಲ್ಲೂ ಎರಡೂ ಗುಂಪುಗಳಿದ್ದು, ಅಸಮಾಧಾನದ ವಿಷಯದಲ್ಲಿ ಕಾಂಗ್ರೆಸ್ಸಿಗೇನೂ ಬಿಜೆಪಿ ಕಮ್ಮಿ ಇಲ್ಲ.
Related Articles
Advertisement
ಬೀಳಗಿಯಲ್ಲಿ ನಿರಾಣಿ: ಸಚಿವ ಮುರುಗೇಶ ನಿರಾಣಿ ಈ ಬಾರಿಯೂ ಬೀಳಗಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ನಿಶ್ಚಿತ. ಆದರೆ, ಜಮಖಂಡಿ ಕ್ಷೇತ್ರದ ಮೇಲೂ ಒಂದು ಕಣ್ಣಿಟ್ಟಿದ್ದಾರೆ ಎಂಬ ಮಾತಿದೆ. ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಟಿ.ಪಾಟೀಲ, ಬಸವಪ್ರಭು ಸರನಾಡಗೌಡ ಹಾಗೂ ಎಂ.ಎನ್.ಪಾಟೀಲ ಹೆಸರು ಕೇಳಿ ಬರುತ್ತಿವೆ. ಹಳೆ ಹುಲಿಗಳ ಮಧ್ಯೆ ಕಾಳಗ ಏರ್ಪಟ್ಟರೆ, ಬಸವಪ್ರಭು ಸರನಾಡಗೌಡರ ನಡೆ ಏನಿರುತ್ತದೆ ಎಂಬ ಕುತೂಹಲವೂ ಪಕ್ಷದಲ್ಲಿದೆ.
ಮುಧೋಳದಲ್ಲಿ ಕಾರಜೋಳ: ಕಾರಜೋಳ ಪ್ರತಿನಿಧಿಸುತ್ತಿರುವ ಮುಧೋಳಕ್ಕೆ ಈ ಬಾರಿ ಅವರ ಪುತ್ರ ಅರುಣ ಕಾರಜೋಳ ಸ್ಪರ್ಧೆ ಮಾಡುತ್ತಾರೆಂಬ ಸುದ್ದಿ ದಟ್ಟವಾಗಿದೆ. ಬಿಜೆಪಿಯಲ್ಲಿ ಕಾರಜೋಳ ಇಲ್ಲವೇ ಅವರ ಪುತ್ರ ಮಾತ್ರ ಸ್ಪರ್ಧೆ ಮಾಡ್ತಾರೆಂಬ ಮಾತಿದೆ. ಕಾಂಗ್ರೆಸ್ಸಿನ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ, ಮುಖಂಡ ಸತೀಶ ಬಂಡಿವಡ್ಡರ ಮಧ್ಯೆ ಟಿಕೆಟ್‌ಗೆ ಪೈಪೋಟಿ ಇದೆ. ಈ ಬಾರಿ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಹೋರಾಟದ ಬಿಸಿ ಕಾರಜೋಳರಿಗೆ ತಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಮಖಂಡಿಗೆ ಆನಂದ: ಕಾಂಗ್ರೆಸ್‌ನಿಂದ ಆನಂದ ನ್ಯಾಮಗೌಡರ ಸ್ಪರ್ಧೆ ಸಾಧ್ಯತೆ ಇದೆ. ಪಕ್ಷದಲ್ಲಿ ಇನ್ನಿಬ್ಬರು ಟಿಕೆಟ್ ಕೇಳುತ್ತಿದ್ದಾರಾದರೂ, ತಾವಾಯಿತು, ತಮ್ಮ ಕ್ಷೇತ್ರದ ಕೆಲಸ ವಾಯಿತು ಎಂಬ ಮನಸ್ಥಿತಿಯ ನ್ಯಾಮಗೌಡರಿಗೆ ಪಕ್ಷದಲ್ಲೂ ಉತ್ತಮ ಹೆಸರಿದೆ. ಬಿಜೆಪಿ ಯಿಂದ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ 2013ರಿಂದ ನಿರಂತರ ಸೋಲು ಅನುಭವಿಸಿದ್ದಾರೆ. ಉದ್ಯಮಿಗಳಾದ ಸಂಗಮೇಶ ನಿರಾಣಿ, ಜಗದೀಶ ಗುಡಗುಂಟಿ, ಏಗಪ್ಪ ಸವದಿ ಹೀಗೆ ಹಲವರು ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ.
– ಶ್ರೀಶೈಲ ಕೆ. ಬಿರಾದಾರ