Advertisement
ಅಂತೂ ಇಂತೂ ರಾಜ್ಯ ರಾಜಕಾರಣದಲ್ಲಿ ಒಂದು ಹಂತದ “ಕ್ಲೈಮಾಕ್ಸ್’ ಮುಗಿದಂತಾಗಿದ್ದು, ಆಪರೇಷನ್ ಕಮಲ, ಆಡಿಯೋ ಬಾಂಬ್, ಸ್ಪೀಕರ್ ಮೇಲೆಯೇ ಆರೋಪ ಸೇರಿದಂತೆ ಕಳೆದ ಹತ್ತು ಹದಿನೈದು ದಿನಗಳಲ್ಲಿ ನಡೆದ ವಿದ್ಯಮಾನಗಳು ರಾಷ್ಟ್ರಮಟ್ಟದಲ್ಲೂ ಸುದ್ದಿಯಾಗಿ ಕರ್ನಾಟಕ ವಿಧಾನಮಂಡಲ ಇತಿಹಾಸದಲ್ಲೂ ಕಪ್ಪು ಚುಕ್ಕೆಯಾಗಿ ದಾಖಲಾಗುವಂತಾಯಿತು.
Related Articles
Advertisement
ಇದು ಎಲ್ಲದರ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಆಂತರಿಕ ಅಸಮಾಧಾನ ಭುಗಿಲೆದ್ದಿತ್ತು. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಸಿಗಲಿಲ್ಲ, ಬಯಸಿದ ನಿಗಮ ಮಂಡಳಿ ಅಧ್ಯಕ್ಷಗಿರಿ ಸಿಗಲಿಲ್ಲ ಎಂದು ಅಸಮಾಧಾನಗೊಂಡವರನ್ನೇ ಬಂಡವಾಳ ಮಾಡಿಕೊಂಡು ಅವರ ಮೇಲೂ ಬಂಡವಾಳ ಹಾಕಿ ಸರ್ಕಾರಕ್ಕೆ ಕಂಟಕ ತರಬಹುದು ಎಂಬ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದೆ.
ಮೊದಲಿಗೆ ಇಬ್ಬರು ಪಕ್ಷೇತರರನ್ನು ಕಾಂಗ್ರೆಸ್-ಜೆಡಿಎಸ್ ತೆಕ್ಕೆಯಿಂದ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾದ ಬಿಜೆಪಿ ನಂತರದ “ಆಟ’ ರಕ್ಷಣಾತ್ಮವಾಗಿ ಆಡಲೇ ಇಲ್ಲ. ಕಾಂಗ್ರೆಸ್ ನಂಟು ಕಳೆದುಕೊಳ್ಳಲು ಪೂರ್ಣ ಮನಸ್ಸು ಇಲ್ಲದ, ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರ ವಿರುದ್ಧ ಅಸಮಾಧಾನಗೊಂಡವರನ್ನು ನಂಬಿ ಸರ್ಕಾರ ಪತನಗೊಳ್ಳಲಿದೆ ಎಂಬ ಕನಸು ಕಂಡಿದ್ದು ಬಿಜೆಪಿ ನಾಯಕರು. ಮಧ್ಯೆ, ಆಡಿಯೋ ಬಾಂಬ್‌ನಲ್ಲಿ ಟ್ರ್ಯಾಪ್ ಆಗುವಂತಾಯಿತು.
ಆಪರೇಷನ್ ಆಡಿಯೋದಲ್ಲಿ ಸ್ಪೀಕರ್ 50 ಕೋಟಿ ರೂ.ಗೆ ಬುಕ್ ಆಗಿದ್ದಾರೆ ಎಂಬ ಮಾತುಗಳು. ಸ್ಪೀಕರ್, ಸಿದ್ದರಾಮಯ್ಯ, ದೇವೇ ಗೌಡರು ಬಗ್ಗೆ ಲಘು ಮಾತುಗಳು ಬಹಿರಂಗಗೊಂಡಿದ್ದು, ರಾಜ್ಯ ವಿಧಾನಮಂಡಲದ ಇತಿಹಾಸಕ್ಕೂ ಕಪ್ಪು ಚುಕ್ಕೆಯೇ ಸರಿ. ಅಧಿವೇಶನದಲ್ಲಿ ಈ ಬಗ್ಗೆಯೇ ಮೂರ್‍ನಾಲ್ಕು ದಿನ ಚರ್ಚೆ ನಡೆದು ಇಡೀ ನಾಡಿನ ಜನತೆ ನಮ್ಮ ಶಾಸಕಾಂಗ ವ್ಯವಸ್ಥೆ ಬಗ್ಗೆಯೇ ಬೇಸರಪಟ್ಟುಕೊಳ್ಳುವಷ್ಟು ಮಟ್ಟಿಗೆ ಹೋಗಿದ್ದು ದುರ್ದೈವದ ಸಂಗತಿ.
ಮರ್ಮಒಂದು ಹಂತದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗೇ ಹೋಯ್ತು. ಕಾಂಗ್ರೆಸ್ ಶಾಸಕರು ಬರದಿದ್ದರೂ ಜೆಡಿಎಸ್‌ನ ಅರ್ಧಕ್ಕೂ ಶಾಸಕರು ಬರ್ತಾರೆ. ಜೆಡಿಎಸ್‌ನ ಸಚಿವ ಎಚ್.ಡಿ.ರೇವಣ್ಣ ಉಪ ಮುಖ್ಯಮಂತ್ರಿ, ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಎಂಬ ವದಂತಿ ಸಹ ಎಬ್ಬಿಸಲಾಯಿತು. ಆದರೆ, ಸಮ್ಮಿಶ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಯತಂತ್ರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಆಂತರಿ ಕ ವಾಗಿ ಎಷ್ಟೇ ಅಸಮಾಧಾನವಿದ್ದರೂ ಸಚಿವರಾದ ಡಿ.ಕೆ.ಶಿವ ಕುಮಾರ್, ಜಮೀರ್ ಆಹಮದ್ ಸೇರಿದಂತೆ ಎಲ್ಲರೂ ಸರ್ಕಾರದ ರಕ್ಷಣೆಗೆ ನಿಲ್ಲುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಮೊದಲಿನಷ್ಟು ದುರ್ಬ ಲವೂ ಅಲ್ಲ ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಳ್ಳಲೇ ಇಲ್ಲ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ದೆಹಲಿಗೆ ಹೋದಾಗ ಲೆಲ್ಲಾ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಎಚ್.ಡಿ. ರೇವಣ್ಣ, ಒಮ್ಮೆ ಡಿ.ಕೆ.ಶಿವಕುಮಾರ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಬಳಿ ಕರೆದೊಯ್ದು ಮಾತುಕತೆ ನಡೆಸುವ ಹಿಂದಿನ ಮರ್ಮವನ್ನೂ ರಾಜ್ಯ ಬಿಜೆಪಿ ನಾಯಕರಿಗೆ ಗೊತ್ತೇ ಆಗಲಿಲ್ಲ. ಅತ್ತ ದೆಹಲಿಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಎದುರಾದಾಗಲೆಲ್ಲಾ ಮ್ಯಾನೇಜ್ ಮಾಡುತ್ತಿದ್ದ ದೇವೇಗೌಡರು, ಇತ್ತ ಕಾಂಗ್ರೆಸ್ ಶಾಸಕರು ಮುಂಬೈ ಸೇರಿ ರಾಜ್ಯ ಬಿಟ್ಟು ಹೋದಾಗಲೆಲ್ಲಾ ಗುಟುರು ಹಾಕಿ ವಾಪಸ್ ಕರೆಸಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಲೋಕಸಭೆ ಚುನಾವಣೆ ವರೆಗೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವಲ್ಲಿ ಪ್ರಯತ್ನ ಹಾಕುತ್ತಲೇ ಇದ್ದಾರೆ. ಕೇಂದ್ರ ಬಿಜೆಪಿಯ ಒಂದೇ ಅಜೆಂಡಾ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿ ಇರಬಾರದು. ಇಲ್ಲಿಂದ ಲೋಕಸಭೆ ಚುನಾವ ಣೆಗೆ ಸಂಪನ್ಮೂಲ ರವಾನೆಯಾಗಬಾರದು. ಅದಕ್ಕಾಗಿಯಾದರೂ ಸರ್ಕಾರ ಹೋಗಬೇಕು. ಬಿಜೆಪಿಯ ಕೇಂದ್ರ ನಾಯಕರಿಗೆ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಬೇಕು ಎಂಬ ಹಠವೇನೂ ಇದ್ದಂತಿಲ್ಲ. ತಕ್ಷಣಕ್ಕೆ “ಕಾನೂನು ಸುವ್ಯವಸ್ಥೆ ಕುಸಿತ,” ಕುದುರೆ ವ್ಯಾಪಾರ, ಸಂವಿಧಾನಿಕ ಬಿಕ್ಕಟ್ಟು ಸ್ಥಿತಿ ನಿರ್ಮಾಣವಾಗಿ 6 ತಿಂಗಳ ಮಟ್ಟಿಗೆ ವಿಧಾನಸಭೆ ಅಮಾನತಿನಲ್ಲಿದ್ದರೂ ಸಾಕು. ಆ ನಂತರ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಬಂದರೆ ಜೆಡಿಎಸ್-ಬಿಜೆಪಿ ಸರ್ಕಾರವೇ ರಚನೆಯಾಗಬಹುದು ಎಂಬ ನಿರೀಕ್ಷೆ ಅವರದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ರಾಜ್ಯ ಬಿಜೆಪಿ ನಾಯಕರದು ಬೇರೆಯೇ ಯೋಚನೆ. ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನವಾದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಿಲ್ಲ. ಹೀಗಾಗಿ, ಈಗಲೇ ಸರ್ಕಾರ ಬಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಯಾಗುತ್ತಾರೆ. ಲೋಕಸಭೆ ಚುನಾವಣೆ ನಂತರವೂ ಅವರೇ ಮುಂದು ವರಿಯಬಹುದು ಎಂಬುದು ಯಡಿಯೂರಪ್ಪ ಬೆಂಬಲಿಗರ ಆಸೆ. ಇದಕ್ಕೆ ಪಕ್ಷದಲ್ಲಿ ಎಲ್ಲರ ಸಹಮತ ಇಲ್ಲ ಎಂಬುದು ವಿಧಾನಮಂಡಲ ಅಧಿವೇಶನ ಸಂದರ್ಭದಲ್ಲಿ ಮೊಗಸಾಲೆಯಲ್ಲಿ ಬಿಜೆಪಿ ಸದಸ್ಯರ ಮಾತುಗಳೇ ಸಾಕ್ಷಿ.
ಸದ್ಯಕ್ಕೆ ಲೋಕಸಭೆ ಚುನಾವಣೆವರೆಗೂ ಸಮ್ಮಿಶ್ರ ಸರ್ಕಾರಕ್ಕೆ ಆತಂಕವಿದ್ದಂತಿಲ್ಲ. ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಲೋಕಸಭೆ ಚುನಾವಣೆವರೆಗೂ ತಾಳಿ. ರಾಹುಲ್‌ಗಾಂಧಿಯವರಿಗೆ ಮಾತು ಕೊಟ್ಟಿದ್ದೇನೆ ಎಂದು ಹೇಳಿ ಸಮಾಧಾನ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ನಂತರವೂ ಸಮ್ಮಿಶ್ರ ಸರ್ಕಾರ ಇರುತ್ತಾ ಎಂಬುದರ ಬಗ್ಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರಲ್ಲಿ ಯಾವುದೇ ವಿಶ್ವಾಸವಂತೂ ಇಲ್ಲ. ಆಮೇಲೆ ನೋಡಬೇಕು ಎಂದೇ ಹೇಳುತ್ತಾರೆ. ಇದಕ್ಕೂ ಮುನ್ನ ಸಮ್ಮಿಶ್ರ ಸರ್ಕಾರಕ್ಕೆ ಆಪರೇಷನ್ ಕಮಲ ಕಾರ್ಯಾಚರಣೆಗಿಂತ ಲೋಕಸಭೆ ಚುನವಣೆಯಲ್ಲಿ ಮೈತ್ರಿ ಸಂಬಂಧ ಸೀಟು ಹಂಚಿಕೆ ದೊಡ್ಡ ಕಗ್ಗಂಟಾಗಿ ಪರಿಣಮಿಸಬಹುದು ಎಂಬ ವಾಖ್ಯಾನಗಳು ಇವೆ. ಸೀಟು ಹಂಚಿಕೆಯಲ್ಲಿನ ಅಸಮಾಧಾನ ಫಲಿತಾಂಶದ ಮೇಲೂ ಪರಿಣಾಮ ಬೀರಿ ಎರಡೂ ಪಕ್ಷಗಳು ಒಟ್ಟುಗೂಡಿದರೂ ಪ್ರಯೋಜನವಾಗದಿದ್ದರೆ ಅಥವಾ ಕಾಂಗ್ರೆಸ್‌ಗೆ ನಷ್ಟವಾದರೆ ಮೈತ್ರಿ ಖತಂಗೊಳ್ಳುವುದು ನಿಶ್ಚಿತ ಎಂದೂ ಹೇಳಲಾಗುತ್ತಿದೆ. ನಂಬರ್‌ಗೆಮ್
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಂತರ ಅತಂತ್ರ ಸ್ಥಿತಿ ನಿರ್ಮಾಣವಾಗಿ ಬಿಜೆಪಿ-104 ಕಾಂಗ್ರೆಸ್‌ಗೆ 80, ಜೆಡಿಎಸ್‌ಗೆ 37, ಬಿಎಸ್‌ಪಿ-1, ಪಕ್ಷೇತರರು-2 ಸ್ಥಾನ ಗಳಿಸಿದೆ. ಇದು ಒಂದು ರೀತಿಯಲ್ಲಿ ಮಿರಾಕಲ್ ರಿಸಲ್ಟ್ ಎನ್ನಬಹುದು. ಬಹುಮತಕ್ಕೆ ಬೇಕಾಗಿದ್ದು 113. ಬಿಜೆಪಿ 104 ಸ್ಥಾನ ಗಳಿಸಿ ಹತ್ತಿರ ಬಂದರೂ ಸರ್ಕಾರ ರಚಿಸಲು ಆಗಲಿಲ್ಲ. ಇದು ಬಿಜೆಪಿಗೆ ನಿತ್ಯ ನೋವು ಕಾಡುತ್ತಲೇ ಇದೆ. ಆದರೆ, 113 ಮ್ಯಾಜಿಕ್ ಸಂಖ್ಯೆ ತಲುಪುವುದು ಸುಲಭವಲ್ಲ. ಏಕೆಂದರೆ, ಕಾಂಗ್ರೆಸ್-ಜೆಡಿಎಸ್-ಬಿಎಸ್‌ಪಿ ಸೇರಿದರೆ 118. ಈ ಬಹುಮತ ಕಡಿತ ಮಾಡಬೇಕಾದರೆ ಕನಿಷ್ಠ 15 ಶಾಸಕರ ಕೈಲಿ ರಾಜೀನಾಮೆ ಕೊಡಿಸಬೇಕಿತ್ತು. ಬಿಜೆಪಿ ಎಂಟು ತಿಂಗಳಲ್ಲಿ ನಾಲ್ಕು ಅಟೆಂಪ್ಟ್ ಮಾಡಿದರೂ ಎರಡೂ ಪಕ್ಷಗಳ ಅತೃಪ್ತರ ಸಂಖ್ಯೆ 10 ದಾಟುತ್ತಿಲ್ಲ. ಎಲ್ಲರೂ ನಿಮ್ಮಲ್ಲಿ 14 ಸಂಖ್ಯೆ ಇರುವುದು ತೋರಿಸಿ, ಹದಿನೈದನೆಯವನಾಗಿ ನಾನು ಬರುತ್ತೇನೆ ಎಂದು ಹೇಳುವವರೆ. ಆದರೆ, ನೀವು ಬಂದರೆ 14 ರಿಂದ 15 ಆಗುತ್ತದೆ ಬನ್ನಿ ಎಂದರೆ ಜತೆಗೂಡಲು ಯಾರೂ ಸಿದ್ಧರಿರಲಿಲ್ಲ.
ಜತೆಗೆ, ನಾನು ಪಕ್ಷ ಬಿಡುತ್ತೇನೆ ಎಂದು ಹೇಳುವ ಧೈರ್ಯ ರಮೇಶ್ ಜಾರಕಿಹೊಳಿ, ಮಹೇಶ ಕುಮಟಳ್ಳಿ, ನಾಗೇಂದ್ರ, ಬಿ.ಸಿ.ಪಾಟೀಲ್, ಉಮೇಶ್ ಜಾಧವ್ ಸೇರಿದಂತೆ ಯಾರಿಗೂ ಇಲ್ಲ. ಆನಂದ್‌ಸಿಂಗ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಕಂಪ್ಲಿ ಗಣೇಶ್ ಅವರೂ ಪಕ್ಷ ಬಿಡುವ ಬಗ್ಗೆ ಮಾತನಾಡಿಲ್ಲ. ಹೀಗಿರುವಾಗ ಸರ್ಕಾರ ಪತನಕ್ಕೆ ಬೇಕಾದ ಸಂಖ್ಯೆ ಬಿಜೆಪಿಗೆ ಸಿಗಲು ಹೇಗೆ ಸಾಧ್ಯ? ಒಂದು ಹಂತದಲ್ಲಿ ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ, ಉಮೇಶ ಜಾಧವ್, ಬಿ.ಸಿ.ಪಾಟೀಲ್ ರಾಜೀ ನಾಮೆ ಕೊಟ್ಟೇ ಬಿಡ್ತಾರೆ ಎಂದು ಹೇಳಲಾಗುತ್ತಿತ್ತು. ಆಗಲೂ ಮುಖ್ಯ ಮಂತ್ರಿ ಕುಮಾರಸ್ವಾಮಿ ನಿರಾಳವಾಗಿದ್ದರು. ಅವರ ಲೆಕ್ಕಾಚಾರ ಪ್ರಕಾರ ಯಾರೂ ರಾಜೀನಾಮೆ ಕೊಡಲ್ಲ. ಒಂದೊಮ್ಮೆ ಐವರು ಕೊಟ್ಟರೂ ಸರ್ಕಾರದ ಬಲ 113 ಕ್ಕೆ ಇರಲಿದೆ. ಐವರು ರಾಜೀನಾಮೆ ಕೊಟ್ಟರೆ 224 ಸಂಖ್ಯಾಬಲದ ವಿಧಾನಸಭೆಯಲ್ಲಿ 219 ಕ್ಕೆ ಬಲ ಕುಸಿಯುತ್ತದೆ. ಆಗ ಬಹುಮತಕ್ಕೆ 110 ಸಾಕು. ಇನ್ನೂ 3 ಹೆಚ್ಚುವರಿ ಇರುತ್ತದೆ ಎಂಬ ಧೈರ್ಯ ಅವರದಾಗಿತ್ತು. ಬಿಜೆಪಿಯು ಜೆಡಿಎಸ್ ಬುಟ್ಟಿಗೂ ಕೈ ಹಾಕಿ ನಾರಾಯಣಗೌಡ, ಶ್ರೀನಿವಾಸಗೌಡ ಅವರನ್ನು ಸೆಳೆಯಲು ಸರ್ವಪ್ರಯತ್ನ ನಡೆಸಿತಾದರೂ ಅದು ಫಲ ಕೊಡಲಿಲ್ಲ. ಇದೆಲ್ಲದರ ನಡುವೆಯೂ, ಅತೃಪ್ತರು ಒಂದು ಹಂತದಲ್ಲಿ ಸರ್ಕಾರ ಕೆಡವಲು ಮನಸ್ಸು ಮಾಡಿದರಾದರೂ ಅಷ್ಟರಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಡಿಸಿದ ಆಡಿಯೋ ಬಾಂಬ್ ಬಿಜೆಪಿಯನ್ನು ದಂಗಾಗಿಸಿತು. ಆಡಿಯೋ ಪಾರ್ಟ್-1 ಹಾಗೂ ಪಾರ್ಟ್-2 ರಿಲೀಸ್ ಆಗುತ್ತಿದ್ದಂತೆ ಮುಂಬೈನಲ್ಲಿದ್ದ ಅತೃಪ್ತರು ಅಧಿವೇಶನಕ್ಕೆ ಹಾಜರಾದರು. ಅವರ “ತಲೆ’ಕಾಯುತ್ತಿದ್ದ ಬಿಜೆಪಿ ಶಾಸಕರೂ ಮುಂಬೈ ಬಿಟ್ಟು ಬೆಂಗಳೂರಿಗೆ ಮರಳಿದರು. ಈ ಬೆಳವಣಿಗೆಗಳ ನಡುವೆ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದ ಇಬ್ಬರು ಪಕ್ಷೇತರÃ ಪೈಕಿ ನಾಗೇಶ್ ಮತ್ತೆ ತಮ್ಮ ನಿಷ್ಠೆ ಬದಲಿಸಿ ಕಾಂಗ್ರೆಸ್ ಸಹ ಸದಸ್ಯನಾಗುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಜತೆಗೂಡಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪತ್ರ ಕೊಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ಹಾಗೂ ನಾಗೇಂದ್ರ ಸಚಿವ ಜಮೀರ್ ಅಹಮದ್ ಜತೆ ಬಂದು ಸಿದ್ದರಾಮಯ್ಯ ಭೇಟಿ ಮಾಡಿ ಹೋಗಿದ್ದಾರೆ. ಇವೆಲ್ಲವನ್ನೂ ಗಮನಿಸಿದರೆ ಸದ್ಯಕ್ಕೆ ಆಪರೇಷನ್ ಕಮಲಕ್ಕೆ “ಬ್ರೇಕ್’ ಬಿದ್ದಿರುವುದಂತೂ ಹೌದು. ಆದರೆ, ದಿಢೀರ್ ಅತೃಪ್ತರ ಬೇಡಿಕೆಗಳು ಎದ್ದು ನಿಂತರೆ ಮತ್ತೆ ಅಸಹಕಾರ ಚಳವಳಿ ಪ್ರಾರಂ ಭವಾಗಬಹುದು ಎಂಬ ಗುಮಾನಿಯೂ ಕಾಂಗ್ರೆಸ್ ಹೈಕಮಾಂಡ್‌ಗೆ ಇದೆ. ಆದರೆ, ಈಗ ಜೆಡಿಎಸ್-ಕಾಂಗ್ರೆಸ್ ನೀಡಿರುವ ಹೊಡೆತ ಲೋಕಸಭೆ ಚುನಾವಣೆ ನಂತರವೂ ಬಿಜೆಪಿ ಸರ್ಕಾರ ರಚನೆ ಪ್ರಯತ್ನಕ್ಕೆ ಕೈ ಹಾಕಲು ಯೋಚಿಸುವಂತಾಗಿದೆ ಎಂಬ ಮಾತುಗಳೂ ಇವೆ. – ಎಸ್.ಲಕ್ಷ್ಮಿನಾರಾಯಣ