Advertisement

ರಾಜ್ಯ ಸಾಲದ ಸುಳಿಗೆ ಸಿಲುಕುವ ಆತಂಕ: ಸಿದ್ದರಾಮಯ್ಯ

09:49 AM Mar 20, 2020 | sudhir |

ವಿಧಾನಸಭೆ: ರಾಜ್ಯ ಸರ್ಕಾರದ ಸಾಲ ಪ್ರಮಾಣ ಹೆಚ್ಚುತ್ತಿದ್ದು, ಇದೇ ರೀತಿ ಮುಂದುವರಿದರೆ 2023-24ರ ಹೊತ್ತಿಗೆ ರಾಜ್ಯದ ಒಟ್ಟು ಸಾಲ ಪ್ರಮಾಣ 5.65 ಕೋಟಿ ರೂ. ಏರಿಕೆಯಾಗುವ ಅಂದಾಜು ಇದೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಆರ್ಥಿಕತೆಗೆ ಕತ್ತಲು ಆವರಿಸುವ ಲಕ್ಷಣ ಕಾಣುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.

Advertisement

ಬಜೆಟ್‌ ಮೇಲಿನ ಚರ್ಚೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, 2020-21ನೇ ಸಾಲಿನಲ್ಲಿ ಸಾಲ ಪ್ರಮಾಣ 3.68 ಕೋಟಿ ರೂ. ನಷ್ಟಕ್ಕೆ ಏರಿಕೆಯಾಗಲಿದೆ. ವಿತ್ತೀಯ ಶಿಸ್ತಿನ ಮಿತಿಯೊಳಗೆ ಸಾಲ ಪಡೆಯುತ್ತಿದ್ದರೂ ಒಟ್ಟು ಸಾಲ ಪ್ರಮಾಣ ಹೆಚ್ಚಾಗುತ್ತಿರುವುದು ಉತ್ತಮ ಆರ್ಥಿಕತೆಯ ಲಕ್ಷಣವಲ್ಲ. ಹಾಗಾಗಿ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ ಎಂದು ಹೇಳಿದರು.

2022-23ನೇ ಸಾಲಿನಲ್ಲಿ ಅಂದಾಜು ಆದಾಯ, ವೆಚ್ಚಕ್ಕೆ ಹೋಲಿಸಿದರೆ 30,743 ಕೋಟಿ ರೂ. ಕೊರತೆ ಉಂಟಾಗುವ ನಿರೀಕ್ಷೆ ಇದೆ. ಹಾಗೆಯೇ 2023-24ನೇ ಸಾಲಿಗೆ 46,832 ಕೋಟಿ ರೂ. ಕೊರತೆಯಾಗುವ ಅಂದಾಜು ಇದೆ. ಹೀಗೆ ಆದಾಯಕ್ಕಿಂತ ವೆಚ್ಚ ಹೆಚ್ಚಾಗುತ್ತಾ ಹೋದರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾದರೂ ಹೇಗೆ. ಇದಕ್ಕಾಗಿ ನಾವೆಲ್ಲಾ ಕಷ್ಟಪಟ್ಟು ಇಲ್ಲಿಗೆ ಬರಬೇಕೆ ಎಂದು ಮಾರ್ಮಿಕವಾಗಿ ನುಡಿದರು.

ಬದ್ಧತಾ ವೆಚ್ಚ ತಗ್ಗಿಸಿ
2020-21ನೇ ಸಾಲಿನಲ್ಲಿ 1.77 ಲಕ್ಷ ಕೋಟಿ ರೂ. ಆದಾಯ ನಿರೀಕ್ಷಿಸಿದ್ದರೆ ಅದರಲ್ಲಿ ಬದ್ಧತಾ ವೆಚ್ಚ ಪ್ರಮಾಣ 1.55 ಕೋಟಿ ರೂ.ನಷ್ಟಿರಲಿದೆ ಎಂದು ಅಂದಾಜಿಸಲಾಗಿದೆ. ಅದರಂತೆ ಒಟ್ಟು ಆದಾಯದಲ್ಲಿ ಶೇ. 90ರಷ್ಟು ಹಣ ಬದ್ಧತಾ ವೆಚ್ಚಗಳಿಗೆ ವಿನಿಯೋಗವಾಗಲಿದೆ. ಬದ್ಧತಾ ವೆಚ್ಚ ಪ್ರಮಾಣವನ್ನು ಶೇ. 75ರಷ್ಟಕ್ಕೆ ಇಳಿದರೆ 22,000 ಕೋಟಿ ರೂ.ನಷ್ಟು ಹಣ ಇತರೆ ಕಾರ್ಯಗಳಿಗೆ ಬಳಸಲು ಅವಕಾಶವಾಗಲಿದೆ. ಈ ಬಗ್ಗೆ ಗಮನ ಹರಿಸಬೇಕು. ಇಲ್ಲದಿದ್ದರೆ ಕೃಷ್ಣಾ ಮೇಲ್ದಂಡೆ ಯೋಜನೆಗೆ 10,000 ಕೋಟಿ ರೂ. ಎಲ್ಲಿಂದ ಹೊಂದಿಸುತ್ತೀರಿ. ಇತರೆ ಅಭಿವೃದ್ಧಿ ಕಾರ್ಯ ಹೇಗೆ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದರು.

ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ವಿಶ್ವ ಬ್ಯಾಂಕ್‌ನಿಂದ ಸಾಲ ತರುತ್ತೇವೆ. ಬುಧವಾರ ನಬಾರ್ಡ್‌ ಅಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಸಾಧ್ಯವಿರುವ ಕಡೆ ಸಾಲ ತರೋಣ. ನೀರಾವರಿ ಯೋಜನೆಗಳು ಸೇರಿದಂತೆ ಅಗತ್ಯವಿರುವ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮುಂದಿನ ಮೂರು ವರ್ಷದಲ್ಲಿ ಮಾಡಿ ತೋರಿಸುತ್ತೇನೆ. ಹೇಗೆ ಮಾಡುತ್ತೇವೆ ಎಂದು ಮುಂದೆ ನೋಡಿ. ಸಲಹೆಗಳಿದ್ದರೆ ಕೊಡಿ ಎಂದು ಹೇಳಿದರು. ಆಗ ಸಿದ್ದರಾಮಯ್ಯ, ನಾನೂ ಎಲ್ಲಿಯೂ ಓಡಿ ಹೋಗಲ್ಲ. ಇಲ್ಲೇ ಇರುತ್ತೇನೆ, ನೋಡುತ್ತೇನೆ. ಕಷ್ಟಪಟ್ಟು ಈ ಸ್ಥಾನಕ್ಕೆ ಬಂದಿದ್ದೀರಿ. ಉತ್ತಮವಾಗಿ ನಿಭಾಯಿಸಿ ತೋರಿಸಿ ಎಂದರು.

Advertisement

ಸರಿಪಡಿಸಲು ಪ್ರಯತ್ನಿಸೋಣ
ಮುಂದಿನ ದಿನಗಳಲ್ಲಿ ಕರ್ನಾಟಕದ ಆರ್ಥಿಕತೆ ಕತ್ತಲು ಆವರಿಸುವ ಲಕ್ಷಣ ಕಾಣುತ್ತಿದೆ. ಹಾಗಾಗಿ ನಾವೆಲ್ಲಾ ಪಕ್ಷಭೇದ ಮರೆತು ಸರಿಪಡಿಸಲು ಪ್ರಯತ್ನ ನಡೆಸಬೇಕಿದೆ. ಬದ್ಧತಾ ವೆಚ್ಚವನ್ನು ಶೇ. 70ಕ್ಕೆ ಇಳಿಸಬೇಕು. ಜಿಎಸ್‌ಟಿ ವ್ಯವಸ್ಥೆಯಲ್ಲಿನ ನ್ಯೂನತೆ ಸರಿಪಡಿಸಬೇಕು. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡುವ ತೆರಿಗೆ ಪಾಲು ಭಿಕ್ಷೆಯಲ್ಲ. ಕೇಂದ್ರೀಯ ತೆರಿಗೆ ಪಾಲು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸಬೇಕು ಎಂದು ಒತ್ತಡ ಹಾಕಬೇಕು ಎಂದು ಸಲಹೆ ನೀಡಿದರು.

ಹೋರಾಟ ಮಾಡಿ
14ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಕ್ಕೆ ನಿಗದಿಪಡಿಸಿದ್ದ ಶೇ.4.71ರಷ್ಟು ಪಾಲಿನ ಮೊತ್ತವನ್ನೇ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ನಿಗದಿಪಡಿಸಬೇಕು ಎಂದು ಹೋರಾಟ ಮಾಡಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಪ್ರಶ್ನಿಸಬೇಕು. “ಏನಪ್ಪ, 15ನೇ ಹಣಕಾಸು ಆಯೋಗ ರಾಜ್ಯಕ್ಕೆ ಶಿಫಾರಸು ಮಾಡಿರುವ 5,495 ಕೋಟಿ ರೂ. ವಿಶೇಷ ಪರಿಹಾರವನ್ನು ಯಾಕಮ್ಮ ಪುನರ್‌ ಪರಿಶೀಲಿಸಿ ಅಂತಿರಿ. ವಿಶೇಷ ಪರಿಹಾರ ಕೊಡಿ’ ಎಂದು ಒತ್ತಾಯಿಸಿ. ರಾಜ್ಯದ ಹಿತದೃಷ್ಟಿಯಿಂದ ಇಂತಹ ಕ್ರಮಗಳನ್ನೆಲ್ಲಾ ಮಾಡಬೇಕಾಗುತ್ತದೆ ಎಂದು ಹೇಳಿದರು.

ಬಾಕಿ ತೆರಿಗೆ ವಸೂಲಿ ಮಾಡಿ
ವಾಣಿಜ್ಯ ತೆರಿಗೆಗೆ ಸಂಬಂಧಪಟ್ಟಂತೆ ಪ್ರಕರಣಗಳು ನ್ಯಾಯಾಲಯದಲ್ಲಿದ್ದು, 17,000 ಕೋಟಿ ರೂ. ಬಾಕಿ ತೆರಿಗೆ ವಸೂಲಿ ಮಾಡಿ. ಹಾಗೆಯೇ ಅಬಕಾರಿ ತೆರಿಗೆಯಿಂದ 762 ಕೋಟಿ ರೂ. ಬಾಕಿಯಿದ್ದು, ಸಂಗ್ರಹಿಸಿ. ತೆರಿಗೆ ಆದಾಯದ ಜತೆಗೆ ತೆರಿಗೆಯೇತರ ಆದಾಯ ಹೆಚ್ಚಳಕ್ಕೂ ಗಮನ ಹರಿಸಿ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next