Advertisement

ಸಿದ್ದರಾಮೋತ್ಸವ ಕಾಂಗ್ರೆಸ್ ಮನೆಯಲ್ಲಿ ದುಖಕ್ಕೆ ಕಾರಣವಾಗಿದೆ: ಕಾರಜೋಳ ಟೀಕೆ

12:40 PM Aug 01, 2022 | Team Udayavani |

ವಿಜಯಪುರ: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75 ಜನ್ಮ ದಿನದ ಆಚರಣೆ ಕಾಂಗ್ರೆಸ್ ನ ಸಿದ್ದರಾಮಯ್ಯ ಬಣ ಮಾತ್ರ ಸಂಭ್ರಮಿಸುತ್ತಿದೆ. ಆದರೆ ಇನ್ನೆರಡು ಬಣಗಳು ದುಖಿಸುತ್ತಿವೆ. ಸಿದ್ದರಾಮೋತ್ಸವ ಕಾರ್ಯಕ್ರಮದಿಂದ ಕಾಂಗ್ರೆಸ್ ಮೂರು ಗುಂಪಾಗಿ ಒಡೆದು ಹೋಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.

Advertisement

ಸೋಮವಾರ ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳ ವೀಕ್ಷಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯದ ಕಾರಣದಿಂದ ಕಾಂಗ್ರೆಸ್ ಪರಿಸ್ಥಿತಿ ಸರಿ ಇಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಕುಟುಕಿದರು.

ಜನ್ಮೋತ್ಸವಕ್ಕೆ ನನಗೆ ಆಹ್ವಾನ ಬಂದಿಲ್ಲ. ವೈಯಕ್ತಿಕ ಬಾಂಧವ್ಯ ಬೇರೆ, ರಾಜಕೀಯ ಸ್ನೇಹ ಬೇರೆ. ಆಹ್ವಾನವೇ ಬಂದಿಲ್ಲವಾದ ಕಾರಣ ಕಾರ್ಯಕ್ರಮಕ್ಕೆ ಹೋಗುವ ಪ್ರಶ್ನೆಯೇ ಅಪ್ರಸ್ತುತ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ನಿವೃತ್ತಿ, ಪುತ್ರ ವಿಜಯೇಂದ್ರ ಅವರಿಗೆ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಟ್ಟ ವಿಷಯದ ಕುರಿತು ಅವರೇ ಸ್ಪಷ್ಟಪಡಿಸಿರುವ ಕಾರಣ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದರು.

ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಉತ್ತಮ ಸರ್ಕಾರ ನೀಡುತ್ತಿದೆ. ಹೀಗಾಗಿ ಚುನಾವಣೆ ಪೂರ್ವ ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್ ನಾಯಕರು ಆರ್.ಎಸ್.ಎಸ್. ಬಗ್ಗೆ ತಿಳಿಯದೇ ಸಲ್ಲದ ರೀತಿಯಲ್ಲಿ ಆರೋಪ ಮಾಡುವುದು ಸರಿಯಲ್ಲ. ಆರ್.ಎಸ್.ಎಸ್. ಎಂದರೆ ಅದು ದೇಶ ಭಕ್ತರ ಸಂಘ, ರಾಷ್ಟ್ರೀಯ ವಾದದ ಸಂಘಟನೆ. ಸಮಾಜದಲ್ಲಿ ದೇಶಭಕ್ತಿಯ ಬೀಜ ಬಿತ್ತಲು ಮನೆಯನ್ನೇ ತೊರೆದು, ಪೂರ್ವಾಶ್ರಮದ ಬಾಂಧವ್ಯಗಳನ್ನೂ ಕಳಚಿ ಸಂತರಂತೆ ಆರ್.ಎಸ್.ಎಸ್. ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಹೀಗಿದ್ದರೂ ಸಂಘ ಪರಿವಾರವನ್ನು ಟೀಕಿಸುವ ಕಾಂಗ್ರೆಸ್ ಕ್ರಮ ಸರಿಯಲ್ಲ ಎಂದರು.

ಇದನ್ನೂ ಓದಿ:ಅಗಲಿದ ಮಣಿಪಾಲದ ಹಿರಿಯ ಚೇತನ ಟಿ.ಮೋಹನದಾಸ್ ಪೈ ಪಂಚಭೂತಗಳಲ್ಲಿ ಲೀನ

ಕೆಳ ಹಂತದ ಕಾರ್ಯಕರ್ತರನ್ನು ಸಂತರಂತೆ ದುಡಿಸಿಕೊಂಡರೂ ಪೀಠಾಧಿಪತಿ ಮಾಡುವುದಿಲ್ಲ ಎಂಬ ಆರೋಪವೂ ಸರಿಯಲ್ಲ. ಸಂತರಿಗೂ, ಪೀಠಾಧಿಪತಿಗಳಿಗೂ ವ್ಯತ್ಯಾಸವೇನೂ ಇಲ್ಲ ಎಂದು ಮೇಲ್ವರ್ಗದವರ ಹೊರತಾದ ಸಮುದಾಯದವರಿಗೆ ಆರ್.ಎಸ್.ಎಸ್. ನಾಯಕತ್ವ ನೀಡುತ್ತಿಲ್ಲ ಎಂಬುದಕ್ಕೆ ಸಮಜಾಯಿಷಿ ನೀಡಿದರು.

ಹಿಂದೂ ಕಾರ್ಯಕರ್ತರ ಹತ್ಯೆ ವಿಷಯದಲ್ಲಿ ಬಿಜೆಪಿ ಕಾರ್ಯಕರ್ತ ನಡೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಲಾಗುತ್ತಿದೆ. ಪಕ್ಷದ ಪ್ರಮುಖರು, ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿದ್ದು, ದೇಶದ್ರೋಹಿ ಸಂಘಟನೆಗಳನ್ನು ತ್ವರಿತವಾಗಿ ನಿಷೇಧಿಸುವ ಆಗ್ರಹವಾಗಿದೆಯೇ ಹೊರತು, ಸರ್ಕಾರದ ವಿರುದ್ಧ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಕಟಿಬದ್ಧವಾಗಿ ಕೆಲಸ ಮಾಡುತ್ತಿದೆ. ಜನಾಗ್ರಹದ ಮೇರೆಗೆ ಎನ್ಐಎ ಸಂಸ್ಥೆಗೆ ತನಿಖೆ ನಡೆಸಲು ವಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next