Advertisement

ರಾಜ್ಯದಲ್ಲಿ ಹೆಚ್ಚಿದ ಮೀಸಲಾತಿ ಹೋರಾಟದ ಕಿಚ್ಚು..ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಗುಡುಗು  

12:41 PM Feb 14, 2021 | Ganesh Hiremath |

ಬೆಂಗಳೂರು: ಮೀಸಲಾತಿಯನ್ನು ವಿರೋಧಿಸುತ್ತಲೇ ಬಂದಿರುವ ಕರ್ನಾಟಕ ಬಿಜೆಪಿ ನಾಯಕರು ಸಾಲುಸಾಲಾಗಿ ನಿಂತು ಮೀಸಲಾತಿಗಾಗಿ ಕೂಗೆಬ್ಬಿಸಿರುವುದು ಪ್ರಾಮಾಣಿಕ ಜ್ಞಾನೋದಯವೇ? ಸಾಮಾಜಿಕ ನ್ಯಾಯದ ಹೋರಾಟದ ದಿಕ್ಕುತಪ್ಪಿಸುವ ಇನ್ನೊಂದು ರಾಜಕೀಯ ಷಡ್ಯಂತ್ರವೇ ? ಎಂದು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Advertisement

ಇಂದು ಟ್ವಿಟರ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಮಂಡಲ್ ವರದಿಯನ್ನು ವಿರೋಧಿಸಿ ಮೈಗೆ ಬೆಂಕಿಹಚ್ಚಿಕೊಂಡವರು ಯಾರು? ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ವಿರೋಧಿಸಿ ಬೀದಿಗಿಳಿದವರು ಯಾರು? ಸ್ಥಳೀಯ ಸಂಸ್ಥೆಗಳಲ್ಲಿನ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ರಾಮಾ ಜೋಯಿಸ್ ಯಾವ ಪಕ್ಷದವರು? ಉತ್ತರಿಸುವಿರಾ ಬಿಜೆಪಿ ನಾಯಕರೇ ಎಂದು ಗುಡುಗಿದ್ದಾರೆ.

ಜಾತಿಯಿಂದಲೇ ನರಕ, ಧರ್ಮದಿಂದಲೇ ಸ್ವರ್ಗ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂದು ಹಿಂದೂ ಸಮಾಜೋತ್ಸವ ನಡೆಸುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ? ಯಾರಾದರೂ ಉತ್ತರಿಸುವಿರಾ?.

ಮೀಸಲಾತಿಯನ್ನು ನೇರವಾಗಿ ವಿರೋಧಿಸಲಿಕ್ಕಾಗದ ಸಂಘ ಪರಿವಾರದ ನಾಯಕರು ವಿವಾದ ಸೃಷ್ಟಿಸಿ, ಸಮುದಾಯಗಳನ್ನು ಪರಸ್ಪರ ಕಾದಾಟಕ್ಕಿಳಿಸಿ ಸಾಮಾಜಿಕ ನ್ಯಾಯದ ಹೋರಾಟದ ಹಾದಿ ತಪ್ಪಿಸುವ ಕುಟಿಲ ಕಾರಸ್ಥಾನಕ್ಕೆ ಅಮಾಯಕ ಜನತೆ ಬಲಿಯಾಗಬಾರದು. ರಾಜ್ಯದಲ್ಲಿ ಆಡಳಿತ ಪಕ್ಷದವರೇ ಮೀಸಲಾತಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ? ಮರೆತುಬಿಟ್ಟಿದ್ದರೆ ನೆನಪಿಸಬಯಸುತ್ತೇನೆ: ಕೇಂದ್ರ ಮತ್ತು ರಾಜ್ಯದಲ್ಲಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರ. ಅಲ್ಲಿನ ಪ್ರಧಾನಿ ನರೇಂದ್ರ ಮೋದಿ, ಇಲ್ಲಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.

ಇದನ್ನೂ ಓದಿ :ಮಸ್ಕಿ: ಪ್ರಥಮ ಸಾಹಿತ್ಯ ಸಮ್ಮೇಳನ ಸಡಗರ

Advertisement

ಈಗಿನ ಮೀಸಲಾತಿ ಬದಲಾವಣೆ-ಹೆಚ್ಚಳದ ಬೇಡಿಕೆಗೆ ತಮಿಳುನಾಡಿನ ಮಾದರಿಯಲ್ಲಿ ಕರ್ನಾಟಕದ ಮೀಸಲಾತಿಯನ್ನು ಶೇಕಡಾ 73ಕ್ಕೆ ಹೆಚ್ಚಿಸಬೇಕೆಂದು ಕಾಂಗ್ರೆಸ್ ಸರ್ಕಾರವೇ ಮಾಡಿರುವ ಕಾನೂನು ಮಾತ್ರ ಪರಿಹಾರ. ಅದರ ಅನುಷ್ಠಾನ ಕೇಂದ್ರದ ಬಿಜೆಪಿ ಕೈಯಲ್ಲಿದೆ. ಮೀಸಲಾತಿ ಹೆಚ್ಚಳಕ್ಕಾಗಿ ಆಧಾರ ಕೋರುತ್ತಿರುವ ನ್ಯಾಯಾಲಯಕ್ಕೆ ಕರ್ನಾಟಕದಲ್ಲಿ ನಡೆದಿರುವ ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯೇ ಉತ್ತರ. ರಾಜ್ಯ  ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳದ ಪರವಾಗಿದ್ದರೆ ಮೊದಲು ನಡೆಸಿದ್ದ ಈ ಸಮೀಕ್ಷೆಯನ್ನು ಸ್ವೀಕರಿಸಿ, ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next