ಬೆಳಗಾವಿ: ಬಿಜೆಪಿ ಹಾಗೂ ಜೆಡಿಎಸ್ ಗೆ ನನ್ನನ್ನು ಕಂಡರೆ ಭಯ. ಅದಕ್ಕೆಂದೇ ಮೇಲಿಂದ ಮೇಲೆ ನನ್ನ ಹೆಸರು ಪ್ರಸ್ತಾಪ ಮಾಡುತ್ತಲೇ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.
ಉಪಚುನಾವಣೆ ಸಮೀಕ್ಷೆಗಳನ್ನು ನಾನು ನಂಬುವದಿಲ್ಲ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಸಮೀಕ್ಷೆಗಳು ಏನಾಗಿವೆ ಎಂದು ಎಲ್ಲರಿಗೂ ಗೊತ್ತಿದೆ. ಅಂದಾಜಿನ ಮೇಲೆ ಸಮೀಕ್ಷೆ ಮಾಡಿರುತ್ತಾರೆ. ಹೀಗಾಗಿ ಇದನ್ನು ನಾನು ನಂಬುವುದಿಲ್ಲ ಎಂದರು.
ನೆರೆ ಪರಿಹಾರದ ಬಗ್ಗೆ ಸರ್ಕಾರ ಇಂದಿನವರೆಗೂ ತಲೆಕೆಡಿಸಿಕೊಂಡಿಲ್ಲ. ಹತ್ತು ಸಾವಿರ ಮತ್ತು ಒಂದು ಲಕ್ಷ ಕೊಟ್ಟು ಕೈ ತೊಳೆದು ಕೊಂಡಿದ್ದಾರೆ. ಅನೇಕ ಜನರಿಗೆ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂದು ಟೀಕಿಸಿದರು.
ಚುನಾವಣೆ ನಂತರ ಕಾಂಗ್ರೆಸ್ ಕಥೆ ಮುಗಿಯುತ್ತೆ ಎಂಬ ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇನೆ ಅಂತಾರೆ ಅದು ಭ್ರಮೆ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದಿಂದ ಜಿಎಸ್‌ಟಿ ಯ ಬಾಕಿ ಹಣ 5600 ಕೋಟಿ ಬರಬೇಕು. ನಮ್ಮ ಪಾಲನ್ನುಇನ್ನೂ ಕೇಂದ್ರ ಸರ್ಕಾರ ಕೊಟ್ಟಿಲ್ಲ ಅದರಿಂದ ತೊಂದರೆಯಾಗಿದೆ. ಈ ಹಣವನ್ನು ತರುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರ ಉರುಳಿಸಲು ಭಜನೆ ಮಾಡಿಕೊಂಡು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು