Advertisement

MUDA; ಸಿದ್ದರಾಮಯ್ಯ ಪತ್ನಿ ವಿರುದ್ಧ ಕ್ರಯಪತ್ರ ತಿದ್ದುಪಡಿ ಆರೋಪ

12:01 AM Oct 20, 2024 | Team Udayavani |

ಮೈಸೂರು: ಮುಡಾ 50:50ರ ಅನುಪಾತದ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರ ಮೇಲೆ ಕ್ರಯಪತ್ರ ತಿದ್ದುಪಡಿ ಮಾಡಿದ ಆರೋಪ ಕೇಳಿಬಂದಿದೆ.

Advertisement

ನಗರದ ಕೆಆರ್‌ಎಸ್‌ ರಸ್ತೆಯಲ್ಲಿರುವ ಹೆಬ್ಟಾಳ ಕೈಗಾರಿಕಾ ಪ್ರದೇಶದಲ್ಲಿನ ಸರ್ವೇ ನಂಬರ್‌ 445ರ ಜಮೀನಿನಲ್ಲಿ 20 ಗುಂಟೆ ಜಾಗವನ್ನು ಎ.ಎಸ್‌. ಗಣೇಶ್‌ ದೀಕ್ಷಿತ್‌ ಅವರಿಂದ 29-9-2023ರಂದು 1.86 ಕೋಟಿ ರೂ.ಗೆ ಪಾರ್ವತಿ ಅವರು ಖರೀದಿಸಿದ್ದರು. ಆದರೆ, ಈ 20 ಗುಂಟೆ ಜಾಗದ ಗಡಿ ಗುರುತಿಸಲು ಹೋದಾಗ ಕೂರ್ಗಳ್ಳಿ ಗ್ರಾ.ಪಂ. ಖಾತೆಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೂ ನೀಡಿರುವ ವಿನ್ಯಾಸ ನಕ್ಷೆಗೂ ವ್ಯತ್ಯಾಸ ಕಂಡುಬಂದಿದೆ.

ಈ ಬಗ್ಗೆ ಆರೋಪ ಮಾಡಿರುವ ಆರ್‌ಟಿಐ ಕಾರ್ಯಕರ್ತ ಗಂಗರಾಜು, ಭೂ ಮಾಲಕ ರಾಮಕೃಷ್ಣ 2014ರಲ್ಲಿ 4.11 ಎಕರೆ ಭೂಮಿಯಲ್ಲಿ 20 ಗುಂಟೆ ಭೂಮಿ ಮಾತ್ರ ವಸತಿ ಉದ್ದೇಶಕ್ಕೆ ಭೂಮಿ ಪರಿವರ್ತನೆ ಮಾಡಿ ಪಪ್ಪುರಾಜ್‌ ಅವರಿಗೆ ಮಾರಾಟ ಮಾಡಿದ್ದರು. ಆ ಬಳಿಕ ಭೂ ಪರಿವರ್ತನೆ ಮತ್ತು ನಕ್ಷೆ ಅನುಮೋದನೆ ವೇಳೆ 20 ಗುಂಟೆ ಜಾಗದಲ್ಲಿ 7 ಗುಂಟೆಯಷ್ಟು ಜಾಗವನ್ನು ರಸ್ತೆ ಮತ್ತು ವಾಟರ್‌ ಪೈಪ್‌ಲೈನ್‌ಗೆ ಅಗತ್ಯವಿದ್ದ ಕಾರಣ ಮುಡಾ ಸ್ವಾಧೀನಪಡಿಸಿಕೊಂಡಿತ್ತು. ಆದರೆ, 2019ರಲ್ಲಿ ಪಪ್ಪುರಾಜ್‌ ಅವರು ತಮ್ಮ ಹೆಸರಿನಲ್ಲಿದ್ದ 13 ಗುಂಟೆ ಜಾಗದ ಬದಲಿಗೆ 20 ಗುಂಟೆ ಜಾಗವನ್ನೇ ಗಣೇಶ್‌ ದೀಕ್ಷಿತ್‌ಗೆ ಮಾರಾಟ ಮಾಡಿದ್ದರು. ಬಳಿಕ 2023 ಸೆ. 29ರಂದು ಬಿ.ಎಂ. ಪಾರ್ವತಿ ಅವರಿಗೆ ಗಣೇಶ್‌ ದೀಕ್ಷಿತ್‌ 20 ಗುಂಟೆ ಭೂಮಿ ಮಾರಾಟ ಮಾಡಿದ್ದಾರೆ. ಇದರಲ್ಲಿ ಮುಡಾ ಸ್ವಾಧೀನಪಡಿಸಿಕೊಂಡ 7 ಗುಂಟೆ ಭೂಮಿಯೂ ಒಳಗೊಂಡಿದೆ. ಹೀಗಿದ್ದರೂ ಸಿಎಂ ಪತ್ನಿ ಹೇಗೆ 20 ಗುಂಟೆ ಜಾಗ ಖರೀದಿಸಿದರು ಎಂದು ಗಂಗರಾಜು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next