Advertisement
ಹೀಗೊಂದು ಚರ್ಚೆ ಈಗ ಮಾಧ್ಯಮದಲ್ಲಿ ಮಾತ್ರವಲ್ಲ, ಕಾಂಗ್ರೆಸ್ ನ ಆಂತರಿಕ ವಲಯದಲ್ಲೇ ಪ್ರಾರಂಭವಾಗಿದೆ. ಸಿದ್ದರಾಮಯ್ಯ ಅಂಕೆ ತಪ್ಪಿ ನೀಡುತ್ತಿರುವ ಹೇಳಿಕೆಗಳು ವೈಯಕ್ತಿಕವಾಗಿ ಮಾತ್ರವಲ್ಲ ಪಕ್ಷಕ್ಕೂ “ದುಬಾರಿ ಹೊಡೆತ”ವಾಗಿ ಬಿಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಇದು ಪಕ್ಷಕ್ಕೆ ಅನಪೇಕ್ಷಿತ ಬೆಳವಣಿಗೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
Related Articles
Advertisement
ಈ ಕಾರಣಕ್ಕಾಗಿಯೇ ಪಕ್ಷದ ಒಂದು ವರ್ಗ ಸಿದ್ದರಾಮಯ್ಯ ಅವರನ್ನು ಪಕ್ಕಕ್ಕಿಟ್ಟು ಪ್ರತ್ಯೇಕ ಜಾತಿ ಹಾಗೂ ಪ್ರಾದೇಶಿಕ ಲೆಕ್ಕಾಚಾರದೊಂದಿಗೆ ಚುನಾವಣಾ ಸಿದ್ಧತೆಗೆ ಇಳಿಯುವುದು ಸೂಕ್ತ ಎಂದು ವಾದಿಸಲಾರಂಭಿಸಿದ್ದು, ವಿಧಾನಸಭಾ ಅಧಿವೇಶನದ ಬಳಿಕ ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರ ಜತೆಗೆ ಚರ್ಚೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಅಧಿಕಾರದಲ್ಲಿ ಇಲ್ಲದೇ ಇದ್ದರು ದಕ್ಷಿಣ ಭಾರತದಲ್ಲಿ ಕರ್ನಾಟಕ ಹಾಗೂ ಕೇರಳದಲ್ಲಿ ಕಾಂಗ್ರೆಸ್ ಗೆ ಪುನಶ್ಚೇತನಗೊಳ್ಳಬಹುದಾದಷ್ಟು ಕಾರ್ಯಕರ್ತರ ಬಲವಿದೆ. ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದಲ್ಲೂ ಅಸ್ಥಿತ್ವವಿದೆ. ಕಾಂಗ್ರೆಸ್ ಕತೆ ಮುಗಿದೇ ಹೋಯಿತು ಎಂದು ವಾದಿಸುವವರಿಗೆ ಇಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಮೂಲಕ ಉತ್ತರ ನೀಡಬಹುದು. ಆದರೆ ಅದಕ್ಕೂ ಮೊದಲು “ತುಟ್ಟಿʼʼ ಹೇಳಿಕೆ ನೀಡುವ ನಾಯಕರ ಬಾಯಿಗೆ ಬೀಗ ಹಾಕಬೇಕೆಂಬುದು ಕೆಲ ನಾಯಕರ ವಾದವಾಗಿದೆ.
ಜಾರಿದ ಹಿಡಿತ: ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಗುಂಪಿನ ಪ್ರಕಾರ, “ಸಿದ್ದರಾಮಯ್ಯ ಕಳೆದ ಕೆಲ ತಿಂಗಳಿಂದ ರಾಜಕೀಯ ಹಿಡಿತ ಕಳೆದುಕೊಂಡಿದ್ದಾರೆ. ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ಅದು ಸಾಬೀತಾಗಿದೆ. ಮತಾಂತರ ನಿಷೇಧ ಕಾಯಿದೆ ವಿಚಾರದಲ್ಲಿ ಅವರು ಬಿಜೆಪಿಯ ಬಲೆಗೆ ಬಿದ್ದ ರೀತಿಯೇ ಅದಕ್ಕೊಂದು ಉದಾಹರಣೆ. ವಿರೋಧಿಸಬೇಕೆಂಬ ಕಾರಣಕ್ಕೆ ಸೂಕ್ತ ದಾಖಲೆ, ಆಧಾರವಿಲ್ಲದೇ ವಿರೋಧಿಸಿ ಸಿಕ್ಕಿ ಬೀಳುತ್ತಾರೆ. ಹಿಜಾಬ್ ಮುಸ್ಲಿಂರ ಸಂವಿಧಾನಿಕ ಹಕ್ಕು ಎಂದು ಪ್ರತಿಪಾದಸಿದ್ದು, ಹೈಕೋರ್ಟ್ ತೀರ್ಪಿನ ಬಳಿಕ ಸೋತು ಹೋಯ್ತು. ಜೇಮ್ಸ್ ಚಿತ್ರ ಪ್ರದರ್ಶನ ರದ್ದುಪಡಿಸಿ ಕಾಶ್ಮೀರ್ ಫೈಲ್ ಗೆ ಅವಕಾಶ ನೀಡುವಂತೆ ಬಿಜೆಪಿ ಶಾಸಕರು ಚಿತ್ರಮಂದಿರ ಮಾಲೀಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಅವರ ಹೇಳಿಕೆ ಈಗ ಮಾನನಷ್ಟ ಮೊಕದ್ದಮೆಯ ಹಂತಕ್ಕೆ ಬಂದು ನಿಂತರೆ, ಧಾರ್ಮಿಕ –ದತ್ತಿ ಇಲಾಖೆಯ ಆವರಣದಲ್ಲಿ ಹಿಂದುಯೇತರರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದೆಂದು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಸೃಷ್ಟಿಸಿದ ನಿಯಮಗಳು ಅವರ ಕೈ ಕಟ್ಟಿ ಹಾಕಿದೆ. ಇದೆಲ್ಲವೂ ಕಾಂಗ್ರೆಸ್ ನಲ್ಲಿರುವ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಬಲ ನೀಡುತ್ತಿದ್ದು, ಸಿದ್ದರಾಮಯ್ಯ ಮೌನ ವಹಿಸಿದರೆ ಮಾತ್ರ ಕಾಂಗ್ರೆಸ್ ನ ಸೀಟು ಗಳಿಕೆ ಪ್ರಮಾಣ ಹೆಚ್ಚುತ್ತದೆ ಎಂದು ವಾದಿಸುತ್ತಿದ್ದಾರೆ.
ಸಿದ್ದರಾಮಯ್ಯ ಎಂದರೆ “ಕ್ರೌಡ್ ಪುಲ್ಲರ್” ಎಂದು ಪ್ರಶಂಸೆ ಮಾಡುತ್ತಿದ್ದ ಕಾಂಗ್ರೆಸ್ ನಾಯಕರು ಅವರ ಮಾತುಗಳನ್ನು “ನಗೆಹಬ್ಬ” ಹಾಗೂ “ಹಾಸ್ಯೋತ್ಸವ”ಕ್ಕೆ ಹೋಲಿಕೆ ಮಾಡುತ್ತಿದ್ದು, ಅಂಕೆ ಇಲ್ಲದ ಹೇಳಿಕೆ ಈಗ ಸಿದ್ದರಾಮಯ್ಯನವರ ಕೈ ಕಟ್ಟಿ ಹಾಕುವ ಸಾಧ್ಯತೆ ಇದೆ. ವಿಧಾನ ಮಂಡಲದ ಅಧಿವೇಶನದ ಬಳಿಕ ಕಾಂಗ್ರೆಸ್ ನಲ್ಲಿರುವ ಸಿದ್ದು ವಿರೋಧಿ ಬಣ ಎಸೆಯುವ ಗೂಗ್ಲಿ ಹೇಗಿರಲಿದೆ ಎಂಬ ಕುತೂಹಲ ಈಗ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟು ಹಾಕಿದೆ.
ರಾಘವೇಂದ್ರ ಭಟ್