Advertisement

ಕಾಂಗ್ರೆಸ್‌ಗೆ ಮತ ನೀಡಿ ಪ್ರಗತಿಗೆ ಸಹಕರಿಸಲು ಸಿದ್ದರಾಮಯ್ಯ ಮನವಿ

03:22 PM Oct 19, 2021 | Shwetha M |

ಸಿಂದಗಿ: ಸುಳ್ಳು ಹೇಳುವಂತ ಹಾಗೂ ಭ್ರಷ್ಟ ಆಡಳಿತ ನಡೆಸುತ್ತಿರುವ ಬಿಜೆಪಿಯನ್ನು ನಂಬಬೇಡಿ. ದೇಶದ ಅಭಿವೃದ್ಧಿಗಾಗಿ ಕಂಕಣಬದ್ಧವಾಗಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ದೇಶದ ಪ್ರಗತಿಗೆ ಸಹಕರಿಸಿ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ಸೋಮವಾರ ಉಪಚುನಾವಣೆ ಪ್ರಚಾರ ನಿಮಿತ್ತ ಮೋರಟಗಿ, ಯಂಕಂಚಿ ಮತ್ತು ಆಲಮೇಲ ಪಟ್ಟಣದಲ್ಲಿ ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.

ಬಿಜೆಪಿ ಹಿಂಬಾಗಿಲ ಕುದುರೆ ವ್ಯಾಪಾರದಿಂದ ಅಧಿಕಾರ ಪಡೆಯುವ ಪಕ್ಷ. ಸಂವಿಧಾನ ಬದ್ದ ಜನ ಮತದಿಂದ ಅಧಿಕಾರ ನಡೆಸುವ ಹಣೆಬರಹ ಅವರಿಗಿಲ್ಲ. ಅಪ್ಪ ಮಗನ ಭ್ರಷ್ಟಾಚಾರ ಅವರ ಸಾಧನೆಯಾಗಿದೆ. ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿ ಇರುವಾಗ ಬಡವರಿಗಾಗಿ ಪ್ರತಿ ಸಲ ಮನೆಗಳ ಮಂಜೂರು ಮಾಡುತ್ತಿದ್ದೇವು. ಈಗ ಬಿಜೆಪಿ ಸರಕಾರ ಒಂದು ಮನೆಯನ್ನೂ ಮಂಜೂರು ಮಾಡುತ್ತಿಲ್ಲ ಹಿಂದಿನ ಮನೆಗಳ ಬಿಲ್‌ ಕಂತುಗಳು ಸಹಿತ ಕೊಟ್ಟಿಲ್ಲ. ದೇಶದ ಜನರಿಗೆ ಸುಳ್ಳು ಸಂದೇಶಗಳನ್ನು ಹೇಳಿ ಕೋಟಿ ಕೋಟಿ ಹಣ ಲೂಟಿ ಹೊಡೆದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು.

ಅನ್ನ ಭಾಗ್ಯ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್‌ ಎಲ್ಲಿ ಹೋದವು? ಬಿಜೆಪಿ ದುರಾಡಳಿತದಿಂದ ಚಾಮರಾಜ ಪೇಟೆಯಲ್ಲಿ ಕೊರೊನಾ ದಿಂದ 36 ಜನ ಪ್ರಾಣ ಬಿಟ್ಟರು. ಆಗ 3 ಜನ ಅಂತ ಸುಳ್ಳು ಹೇಳಿದರು. ಕೊರೊನಾ ಕಂಟಕ ಜನರಿಗೆ ಬಂದಾಗ ಲಾಕ್‌ಡೌನ್‌ ಮಾಡಿದ ಸರಕಾರ ಮನೆಯಲ್ಲಿ ಇರುವಂತೆ ಹೇಳಿತು. ಬಡವರ ಬವಣೆಗೆ ಒಂದು ಪೈಸೆ ನೀಡಲಿಲ್ಲ. ಕಾಂಗ್ರೆಸ್‌ ಪಕ್ಷದ ವತಿಯಿಂದ ಆಗ್ರಹ ಮಾಡಿದೆವು, ಬಡವರಿಗೆ ಹತ್ತು ಸಾವಿರ ಹಣ ಹಾಕಿ ಅಂತ ಒತ್ತಾಯಿಸಿದೆವು. ಆದರೆ ಬಿಜೆಪಿಗರು ನಮ್ಮಲ್ಲಿ ಹಣವಿಲ್ಲ ಆಗಲ್ಲ ಎಂದರು. ಆದ್ದರಿಂದ ಬಿಜೆಪಿಗೆ ಮತ ಹಾಕಬೇಡಿ. ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಅವರಿಗೆ ಮತ ನೀಡುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ನೀಡಿ ಎಂದು ಮನವಿ ಮಾಡಿದರು.

ರಾಜ್ಯ ಸಭಾ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, 136 ವರ್ಷಗಳ ಇತಿಹಾಸ ಹೊಂದಿರುವ ಕಾಂಗ್ರೆಸ್‌ ಪಕ್ಷ ಅಭಿವೃದ್ಧಿ ಪರ್ವ ಹರಿಸಿದೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ಎಂದು ಹೇಳಿದರು. ಪಕ್ಷದ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡಿ ನನ್ನನ್ನು ಚುನಾಯಿಸಿ ಎಂದು ಮನವಿ ಮಾಡಿಕೊಂಡರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಚಿವ ಎಂ.ಬಿ. ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಅಜಯಸಿಂಗ್‌, ಜಿಪಂ ಮಾಜಿ ಸದಸ್ಯ ನರಸಿಂಹಪ್ರಸಾದ ತಿವಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಮಲ್ಲಣ್ಣ ಸಾಲಿ, ಮಂಜುಳಾ ಗೋವರ್ಧನ, ಯೋಗಪ್ಪಗೌಡ ಪಾಟೀಲ, ಮುತ್ತಪ್ಪ ಸಿಂಗೆ, ಬಸಣ್ಣ ಸಾಹು ಮಸಳಿ, ವೀರನಗೌಡ ಪಾಟೀಲ, ಮೈಬೂಬ ಸಾಬ ಕಣ್ಣಿ, ಗುರುಪಾದ ನೆಲ್ಲಗಿ, ರಜಾಕ್‌ ಭಾಗವಾನ, ಪ್ರಕಾಶ ಅಡಗಲ್‌, ಬಂದೇನವಾಜ್‌ ಕಣ್ಣಿ, ಸಿದ್ದರಾಮ ಮಂದೇವಾಲಿ, ಎಂ.ಟಿ. ಸಿಂಗೆ, ಭೂತಾಳಿ ವಸ್ತಾರಿ, ಗೊಲ್ಲಾಳಪ್ಪ ಕೆರಿಗೊಂಡ ಸೇರಿದಂತೆ ಅಪಾರ ಜನಸಂಖ್ಯೆ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next