ಬೀದರ್ : ಕೇವಲ ಟೀಕೆಗಳಿಂದ ಮಾತ್ರ ಬದಲಾವಣೆ ಮಾಡುತ್ತೇವೆ ಎಂಬ ಚಟ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೊಂದಿದ್ದಾರೆ. ಇಂಥ ಕೀಳು ಮಟ್ಟದ ರಾಜಕಾರಣವನ್ನು ಅವರು ಮೊದಲು ಬಿಡಲಿ ಎಂದು ಕೇಂದ್ರ ಸಚಿವ ಸದಾನಂದಗೌಡ ಹೇಳಿದರು.
ಬಸವಕಲ್ಯಾಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ತಮ್ಮ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ ಅವರೊಂದಿಗಿನ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಲಿ. ಬೇರೆಯವರ ಬಗ್ಗೆ ಟೀಕೆ ಮಾಡುವ ಮೊದಲು ನಿಮ್ಮ ತಟ್ಟೆಯಲ್ಲಿ ಬಿದ್ದಿರುವ ದೊಡ್ಡ ಹೆಗ್ಗಣ ನೋಡಿ, ನಂತರ ಬೇರೊಬ್ಬರ ತಟ್ಟೆಯಲ್ಲಿನ ನೋಣದ ಬಗ್ಗೆ ವಿಚಾರ ಮಾಡಲಿ ಎಂದು ಸಲಹೆ ನೀಡಿದರು.
ದೇಶದಲ್ಲಿ ನಾಯಕತ್ವ, ಪ್ರಜಾತಂತ್ರ ಮೌಲ್ಯಕ್ಕೆ ಒತ್ತು ಕೊಡುವಂಥ ವಿಚಾರಗಳು ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಕಾಂಗ್ರೆಸ್ ಐಸಿಯುನಲ್ಲಿ ಕೊನೆಯ ಉಸಿರಿನಲ್ಲಿದ್ದು, ಬಿಜೆಪಿ ವಿರುದ್ಧ ಟೀಕೆ ಮಾಡಲು ಸೂಕ್ತವಲ್ಲ ಎಂದು ಹೇಳಿದರು.
ಬಿಜೆಪಿಗೆ ಒಳ್ಳೆಯ ನಾಯಕತ್ವ ಇದೆ. ಸಮಾಜದಲ್ಲಿ ಪರಿವರ್ತನೆ ತರುವ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುವಂಥ ಪಕ್ಷ ಎಂದು ಮೆಚ್ಚಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಬಿಜೆಪಿಗೆ ಸೇರುತ್ತಿದ್ದಾರೆ. ಅವರೆಲ್ಲರು ಸ್ವಯಂ ಆಗಿದ್ದಾಗಿ ಪಕ್ಷಕ್ಕೆ ಬರುತ್ತಿದ್ದಾರೆ ಹೊರತು ಒತ್ತಾಯಪೂರ್ವಕ ಅಲ್ಲ ಎಂದು ಎಂದು ಸ್ಪಷ್ಟಪಡಿಸಿದರು.
ಬಸವಕಲ್ಯಾಣ ಸೇರಿದಂತೆ ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಭಾರಿ ಅಂತರದಿಂದ ಜಯ ಸಾಧಿಸಲಿದೆ. ಕ್ಷೇತ್ರದ ಮತದಾರರು ಆಶೀರ್ವಾದ ಮಾಡಬೇಕು, ಯಾವುದೇ ಚ್ಯುತಿ ತರದಂತೆ ಉತ್ತಮ ಆಡಳಿತ ನಡೆಸುತ್ತೇವೆ ಎಂದು ಹೇಳಿದರು.