ಬೆಂಗಳೂರು: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆಯನ್ನು ತಡೆಗಟ್ಟಲು ತೈಲದ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ನಿರಂತರ ಏರಿಕೆಯಾಗಿದ್ದು ಹತ್ತು ದಿನಗಳಲ್ಲಿ 5.5 ರೂಪಾಯಿ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾಗುತ್ತಿದ್ದರೂ ಕೇಂದ್ರ ಸರ್ಕಾರ ನಿರಂತರ ತೈಲ ಬೆಲೆ ಏರಿಕೆ ಮಾಡಿ ಸಂಕಷ್ಟದಲ್ಲಿದ್ದ ಮೇಲೆ ಮತ್ತಷ್ಟು ಬರೆ ಎಳೆಯುವ ಕೆಲಸ ಮಾಡುತ್ತಿದೆ.
ಈ ವರ್ಷ ಮಾರ್ಚ್, ಏಪ್ರಿಲ್ ಮೇ ತಿಂಗಳಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರು, ಕೇಂದ್ರ ಸರ್ಕಾರ ಅದರ ಪ್ರಯೋಜನವನ್ನು ದೇಶದ ಜನತೆಗೆ ವರ್ಗಾವಣೆ ಮಾಡುವ ಬದಲು ತೆರಿಗೆ ಹೆಚ್ಚಳ ಮಾಡಲಾಗಿದೆ. ದೇಶದಲ್ಲಿ ಪೆಟ್ರೋಲ್ ಮೇಲೆ 32 ರೂ. ಡಿಸೇಲ್ ಮೇಲೆ 31 ರೂ. ಹಾಕಲಾಗುತ್ತಿದೆ. ಯುಪಿಎ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 9.21 ರೂ. ಡಿಸೇಲ್‌ಗೆ 3.45 ರೂ. ತೆರಿಗೆ ವಿಧಿಸಲಾಗುತ್ತಿತ್ತು. ಕಳೆದ ಆರು ವರ್ಷದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆಯನ್ನು 23.78ರೂ. ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು 28.37 ರೂ. ಗೆ ಹೆಚ್ಚಳ ಮಾಡಿದೆ. ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆಯಿಂದ ಕೇಂದ್ರ ಸರ್ಕಾರ ಕಳೆದ ಆರು ವರ್ಷದಲ್ಲಿ 17.80 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ. ಇದು ಶ್ರಮಿಕರ ಹಾಗೂ ಮುಗ್ಧ ಜನರ ಶೋಷಣೆ ಅಲ್ಲದೇ ಮತ್ತೇನು ಅಲ್ಲ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ತೈಲ ಬೆಲೆ ಹೆಚ್ಚಳ ಸಮಾಜದ ಎಲ್ಲ ವರ್ಗದವರ ಮೇಲೂ ಪರಿಣಾಮ ಬೀರಲಿದೆ. ರೈತರೂ ಇದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. . ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಸಿಗದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತೈಲ ಬೆಲೆ ಏರಿಕೆ ಅವರ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ.
ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಅದರ ಲಾಭವನ್ನು ದೇಶದ ಜನತೆಗೆ ವರ್ಗಾಯಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.