ಹುಬ್ಬಳ್ಳಿ: ರಾಜ್ಯದಲ್ಲಿ ಹಿಜಾಬ್ ನಿಷೇಧವೇ ಆಗಿಲ್ಲ. ಇಲ್ಲದ ನಿಷೇಧವನ್ನು ರದ್ದುಪಡಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದು ಮುಠ್ಠಾಳತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಜಾಬ್ ವಿಚಾರವಾಗಿ ಅನಗತ್ಯ ಪ್ರಸ್ತಾಪಿಸುವ ಮೂಲಕ ಮುಖ್ಯಮಂತ್ರಿ ಅವರು ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡಿದ್ದಾರೆ ಎಂದರು.
ಶಾಲೆಗಳಲ್ಲಿ ಸಮವಸ್ತ್ರ ಸಂಹಿತೆ ಇರಬೇಕೆಂಬುದು ಕೋರ್ಟ್ ಆದೇಶವಾಗಿಯೇ ವಿನಃ ಅದನ್ನು ಯಾರು ನಿಷೇಧ ಮಾಡಿಲ್ಲ. ಇದನ್ನು ಅರಿಯದ ಅಥವಾ ಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಸಿಎಂ ಬೌದ್ಧಿಕ ದಿವಾಳಿತನ ತೋರಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳು ಯೋಜನೆ ಮಾಡಿ ಮಾತನಾಡಬೇಕು ಅದು ಬಿಟ್ಟು ಕೇವಲ ಮತ ತುಷ್ಟಿಕರಣಕ್ಕೆ ಇಲ್ಲವೇ ಸರಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಹೇಳಿಕೆಗಳನ್ನು ಕೊಡಬಾರದು ಎಂದರು.
ಬಿಜೆಪಿಯವರ ವಿರುದ್ಧ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರ ಆರೋಪಕ್ಕೆ ಪ್ರತಿಕ್ರಿಸಿದ ಅವರು, ಹರಿಪ್ರಸಾದರನ್ನು ಕಾಂಗ್ರೆಸ್ ನಲ್ಲಿ ಬೂಟಿಗಿಂತಲೂ ಕಡೆಯಾಗಿ ಕಾಣಲಾಗುತ್ತಿದ್ದು ಸಚಿವ ಸ್ಥಾನ ಸಿಕ್ಕಿಲ್ಲವೆಂಬ ಹತಾಶೆಯಲ್ಲಿ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದು ನುಡಿದರು.
ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರ ಅಮಾನತು ಕುರಿತಾಗಿ ಪ್ರತಿಕ್ರಿಯಿಸಿದವರು ಐದು ರಾಜ್ಯಗಳ ಸೋಲಿನ ನಂತರ ಕಾಂಗ್ರೆಸ್ ಹತಾಶಗೊಂಡಿದ್ದು ಇಲ್ಲಸಲ್ಲದ ಗದ್ದಲಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.
ಲೋಕಸಭೆಯಲ್ಲಿ ನಡೆದ ಘಟನೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದು ತಕ್ಕ ತನಿಖೆ ನಡೆಸುತ್ತಿದ್ದೇವೆ. ಆದರೆ ಕಾಂಗ್ರೆಸ್ ಸೇರಿದಂತೆ ವಿವಿಧ ವಿಪಕ್ಷಗಳ ಸಂಸದರು ಬಯಸಿ, ಬಯಸಿ ಅಮಾನತ್ತಿಗೆ ಮುಂದಾಗುತ್ತಿದ್ದು ಅನಿವಾರ್ಯವಾಗಿ ಅವರ ಅನುಪಸ್ಥಿತಿಯಲ್ಲಿ ಐಪಿಸಿ ಕೋಡ್ ಸೇರಿದಂತೆ ವಿವಿಧ ತಿದ್ದುಪಡಿ ಮಸೂದೆಗಳಿಗೆ ಅಂಗೀಕಾರ ನೀಡಲಾಗಿದೆ ಎಂದು ಜೋಶಿ ತಿಳಿಸಿದರು