ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿರುವ ಬಹು ನಿರೀಕ್ಷಿತ ಬಸ್ ಯಾತ್ರೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲು ಕಾಂಗ್ರೆಸ್ ನಿರ್ಧರಿಸಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಂಡ್ಯದಲ್ಲಿ ಈ ವಿಚಾರ ತಿಳಿಸಿದ್ದಾರೆ.
ರಥಯಾತ್ರೆಯನ್ನು ಈ ಹಿಂದೆ ಅಕ್ಟೋಬರ್ ಅಥವಾ ನವೆಂಬರ್ ಮಾಸಾಂತ್ಯದಲ್ಲಿ ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಕೆಲ ಕಾರಣಗಳಿಂದ ದಿನಾಂಕ ನಿಗದಿಗೊಳಿಸಲು ವಿಳಂಬವಾಗಿದೆ. ಬಸ್ ಯಾತ್ರೆ ಕುರಿತು ಪೂರ್ವಭಾವಿ ಸಭೆ ಈ ತಿಂಗಳು ಕೊನೆಯಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಸ್ ಯಾತ್ರೆ ನಡೆಯಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ನಾನು ಎರಡು ತಂಡಗಳಾಗಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇವೆ. ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ಬಸ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ವರಿಷ್ಠರನ್ನು ಸದ್ಯದಲ್ಲೇ ಭೇಟಿ ಮಾಡಿ ಅವರ ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಮತ್ತೆ ಆರಂಭ: ರಾಹುಲ್ ಗೆ ಸಾಥ್ ನೀಡಿದ ಸೋನಿಯಾ
ಈ ಬಸ್ ಯಾತ್ರೆಯ ಸ್ವರೂಪವನ್ನು ಸಂಪೂರ್ಣವಾಗಿ ಸಿದ್ದರಾಮಯ್ಯ ಬಣವೇ ನಿರೂಪಿಸಲಿದೆ ಎಂಬ ಮಾತು ಕಾಂಗ್ರೆಸ್ ನಲ್ಲಿ ಕೇಳಿ ಬಂದಿದೆ. ಹೀಗಾಗಿ ಪಕ್ಷದ ಅಧ್ಯಕ್ಷರಿಂದ ವಿರೋಧ ವ್ಯಕ್ತವಾಗಬಾರದೆಂಬ ಕಾರಣಕ್ಕೆ ಡಿಕೆ ಶಿವಕುಮಾರ್ ಅವರನ್ನು ಒಳಗೊಂಡಂತೆ ಯಾತ್ರೆ ನಡೆಸಲಾಗುತ್ತದೆ. ವರಿಷ್ಠರು ಒಪ್ಪಿಗೆ ನೀಡಿದರೆ ಯಾರಿಂದಲೂ ವಿರೋಧ ವ್ಯಕ್ತವಾಗುವುದಿಲ್ಲ ಎಂಬುದು ಸಿದ್ದರಾಮಯ್ಯ ಬಣದ ಲೆಕ್ಕಾಚಾರವಾಗಿದೆ.