Advertisement

ಶುಲ್ಕ ವಿಚಾರದ ಸಂಘರ್ಷವನ್ನು ತಕ್ಷಣ ನಿವಾರಿಸಿ: ಸಿಎಂ ಗೆ ಸಿದ್ದರಾಮಯ್ಯ ಪತ್ರ

01:20 PM Jun 15, 2021 | Team Udayavani |

ಬೆಂಗಳೂರು: ವಿದ್ಯಾರ್ಥಿಗಳ ಶುಲ್ಕ ವಿಚಾರದಲ್ಲಿ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಉಂಟಾಗಿರುವ ಸಂಘರ್ಷವನ್ನು ತಕ್ಷಣ ನಿವಾರಿಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಪೋಷಕರು ಪಾವತಿಸಬೇಕಾದ ರಿಯಾಯತಿ ಶುಲ್ಕವನ್ನು ಸರ್ಕಾರವೇ ನಿರ್ಧರಿಸಬೇಕು ಮತ್ತು ಸರ್ಕಾರದ ನಿರ್ಧಾರ ಕಟ್ಟುನಿಟ್ಟಿನ ಜಾರಿ ಆಗುವಂತೆ ಕ್ರಮ ವಹಿಸಬೇಕು. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ತಡೆ ಹಿಡಿದಿರುವ ಸಂಬಳ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಖಾಸಗಿ ಶಾಲಾ ಆಡಳಿತ ಮಂಡಳಿಗಳು ಬ್ಯಾಂಕ್‍ಗಳಿಗೆ ಪಾವತಿಸಬೇಕಾದ ಕೋವಿಡ್ ಅವಧಿಯಲ್ಲಿನ ಸಾಲದ ಮೇಲಿನ ಬಡ್ಡಿ ಮುಂತಾದ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅವರಿಗಾಗುವ ಹೊರೆ ತಗ್ಗಿಸಲು ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ಕೋವಿಡ್ ಕಾರಣದಿಂದಾಗಿ ಕಳೆದ ವರ್ಷದಿಂದ ಮಕ್ಕಳು ಶಾಲೆಗಳಿಗೆ ಹೋಗಲು ಸಾಧ್ಯವಾಗಲೇ ಇಲ್ಲ. ತರಗತಿಗಳು ನಡೆಯಲಿಲ್ಲವೆಂದು ಖಾಸಗಿ ಶಾಲೆ-ಕಾಲೇಜುಗಳು ಶಿಕ್ಷಕರಿಗೆ ಸಂಬಳವನ್ನು ನೀಡಿಲ್ಲ. ಸಂಬಳವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಶಿಕ್ಷಕರು ನರೇಗಾ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಹಣ್ಣು ತರಕಾರಿ ವ್ಯಾಪಾರಿಗಳಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳ ಶುಲ್ಕದಲ್ಲಿ ವಿನಾಯಿತಿ ನೀಡಬೇಕೆಂದು ಪೋಷಕರು ಒತ್ತಾಯ ಮಾಡುತ್ತಿದ್ದಾರೆ. ಪೋಷಕರ ಒತ್ತಾಯಕ್ಕೆ ಮಣಿದ ಸರ್ಕಾರ ಕಳೆದ ವರ್ಷ ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ವಿನಾಯತಿ ನೀಡಿ ಶೇ 70 ರಷ್ಟು ಶುಲ್ಕ ಕಟ್ಟಬೇಕೆಂದು ಆದೇಶ ಹೊರಡಿಸಿತ್ತು. ಆದರೆ ಈ ಆದೇಶ ಜಾರಿಗೆ ಬರಲಿಲ್ಲ ಎಂದಿದ್ದಾರೆ.

ವಾಹನ ಶುಲ್ಕ ಸೇರಿ ಇತರೆ ಶುಲ್ಕವನ್ನೂ ಕಟ್ಟಿಸಿಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ನಿಷ್ಕ್ರಿಯವಾಗಿ ಕೂರುವುದು ಅಸಾಮರ್ಥ್ಯದ, ಲಾಬಿಗೆ ಮಣಿದಿರುವುದರ ಲಕ್ಷಣ. ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೊಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಕುರಿತು ಯಾವ ಕ್ರಮ ವಹಿಸಲಾಗಿದೆ? ಪೂರ್ತಿ ಶುಲ್ಕವನ್ನು ಕಟ್ಟಲಾಗದ ಮಕ್ಕಳಿಗೆ ಮುಂದಿನ ತರಗತಿಗಳಿಗೆ ಪ್ರವೇಶ ನೀಡದೆ ಶೋಷಿಸುತ್ತಿರುವ ಶಾಲೆಗಳ ವಿಚಾರದಲ್ಲಿ ಯಾವ ಕ್ರಮ ವಹಿಸಲಾಗಿದೆ ಎಂದು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

Advertisement

ಜು. 1 ರಿಂದ ಶೈಕ್ಷಣಿಕ ವರ್ಷದ ತರಗತಿಗಳನ್ನು ಆರಂಭಿಸಲು ಹಾಗೂ ಜೂ.15 ರಿಂದಲೇ  ದಾಖಲಾತಿ ಪ್ರಕ್ರಿಯೆ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಅಧಿಸೂಚನೆ ಹೊರಡಿಸಿದೆ. ಆದರೆ, ಶುಲ್ಕ ವಸೂಲಿ ಬಗ್ಗೆ ಇಲಾಖೆ ಯಾವುದೇ ಸ್ಪಷ್ಟ ಸೂಚನೆ ನೀಡಿಲ್ಲ. ಹೀಗಾಗಿ ಕಳೆದ ವರ್ಷದಂತೆಯೇ ಈ ಶೈಕ್ಷಣಿಕ ವರ್ಷದಲ್ಲೂ ಪೋಷಕರು ಮತ್ತು ಶಾಲಾ ಆಡಳಿತ ಮಂಡಳಿಗಳ ನಡುವೆ ಸಂಘರ್ಷದ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಶಾಲೆಗೆ ಮಕ್ಕಳು ಕಾಲಿಡಲು ಸಾಧ್ಯವಾಗದಿದ್ದರೂ ಬಸ್ ಶುಲ್ಕವನ್ನೂ ವಸೂಲಿ ಮಾಡಿದ ಶಾಲೆಗಳೂ ಇವೆ. ಈ ವರ್ಷವೂ ಇದೇ ಪರಿಸ್ಥಿತಿ ಮುಂದುವರೆದಿದೆ. ಸಾಲದ್ದಕ್ಕೆ ಸರ್ಕಾರ ಶೇ 30 ರಷ್ಟು ಶುಲ್ಕ ಕಡಿತ ಮಾಡಿದ್ದು ಹಿಂದಿನ ವರ್ಷಕ್ಕೆ ಮಾತ್ರ, ಈ ವರ್ಷ ಸರ್ಕಾರವೇ ಪೂರ್ಣ ಶುಲ್ಕ ವಸೂಲಿ ಮಾಡಲು ಒಪ್ಪಿಗೆ ಕೊಟ್ಟಿದೆ ಎಂದು ಆಡಳಿತ ಮಂಡಳಿಗಳು ಪೋಷಕರಿಗೆ ಹೇಳುತ್ತಿವೆ. ಹೀಗಾಗಿ ತಕ್ಷಣ ಸರ್ಕಾರ ಈ ವಿಚಾರದಲ್ಲಿ ತನ್ನ ನಿಲುವು ಏನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಮತ್ತು ಶುಲ್ಕದ ಪ್ರಮಾಣವನ್ನು ಸರ್ಕಾರವೇ ನಿರ್ಧರಿಸಿ ತನ್ನ ನಿರ್ಧಾರ ಕಟ್ಟುನಿಟ್ಟಾಗಿ ಜಾರಿ ಆಗುವಂತೆ ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next