ಮೈಸೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಮತ್ತೆ ಹಿರಿಯ ಸಚಿವರು ಮಾತನಾಡಿದ್ದಾರೆ. ಸಿದ್ದರಾಮಯ್ಯ ಆಪ್ತ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಎಚ್ ಸಿ ಮಹದೇವಪ್ಪ ಈ ಬಾರಿ ಹೇಳಿಕೆ ನೀಡಿದ್ದು, ‘ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆ ಆಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ’ ಎಂದು ಮೂರು ಮೂರು ಬಾರಿ ಪುನರುಚ್ಚರಿಸಿದ್ದಾರೆ.
ಈ ಹಿಂದೆ ಮೈಸೂರಿನಲ್ಲೇ ಸಚಿವ ಎಂ ಬಿ ಪಾಟೀಲ್ ಅವರು, ‘ಸಿದ್ದರಾಮಯ್ಯ ಐದು ವರ್ಷ ಸಿಎಂ’ ಎಂದಿದ್ದರು. ಇದೀಗ ಸಿದ್ದರಾಮಯ್ಯ ಆಪ್ತ ಸಚಿವ ಡಾ ಮಹದೇವಪ್ಪ ಅವರೂ ಸಿದ್ದು ಪರ ಬ್ಯಾಟಿಂಗ್ ಮಾಡಿದ್ದಾರೆ.
ಸಿದ್ದರಾಮಯ್ಯಗೆ ದನ ಮೇಯಿಸುವ ಬಗ್ಗೆ ಗೊತ್ತು: ನಾವೆಲ್ಲರೂ ಸಂವಿಧಾನದ ಹೆಸರಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದವರು. ಸಂವಿಧಾನ ಹೇಳಿದ ಹಾಗೆ ನಡೆದುಕೊಳ್ಳುತ್ತೇವೆ. ಪಠ್ಯದಲ್ಲಿ ಚರಿತ್ರೆಯನ್ನು ಸರಿಯಾಗಿ ಹೇಳಬೇಕು. ಚರಿತ್ರೆ ತಪ್ಪಾಗಿ ಹೇಳಿದರೆ ಯುವಕರು ದಾರಿ ತಪ್ಪುತ್ತಾರೆ. ಗೋಹತ್ಯೆ ನಿಷೇಧ ಕಾಯ್ದೆ 1964ರಿಂದಲೇ ಇದೆ. ಗೋ ಹತ್ಯೆ ವಿಚಾರ ಎಲ್ಲವನ್ನೂ ಪ್ರಸ್ತಾಪಿಸಲಾಗಿದೆ. ದನ ಮೇಯಿಸದೇ, ಗಂಜಲ ಹಿಡಿಯದ ಯಾರ್ಯಾರೋ ಮಾತನಾಡುತ್ತಾರೆ. ಆದರೆ ಸಿದ್ದರಾಮಯ್ಯ, ನಾನು ಬಿದ್ದು ಒದ್ದಾಡಿದವರು. ದನ ಮೇಯಿಸುವ ಹಾಗೂ ಅದರ ಗಂಜಲದ ಬಗ್ಗೆ ಸಿದ್ದರಾಮಯ್ಯ, ನನಗೆ ಚೆನ್ನಾಗಿ ಗೊತ್ತು. ಇಂದು ಯಾರು ಯಾರೋ ಕೇಳಲು ಬರುತ್ತಿದ್ದಾರೆ ಎಂದರು.
ಧರ್ಮ ಆಧಾರಿತ ರಾಷ್ಟ್ರ ಬೇಕಿಲ್ಲ: ಶ್ರೀರಂಗಪಟ್ಟಣದಲ್ಲಿ ಒಂದು ಕಡೆ ದೇವಸ್ಥಾನದ ಗಂಟೆ, ಇನ್ನೊಂದು ಕಡೆ ಮಸೀದಿ ಇದೆ. ಇದು ಸೌಹಾರ್ದತೆಯನ್ನು ಸೂಚಿಸುತ್ತದೆ. ನಮಗೆ ಬೇಕಿರೋದು ಧರ್ಮ ಆಧಾರಿತ ರಾಷ್ಟ್ರವಲ್ಲ. ಸಮೃದ್ಧ ರಾಷ್ಟ್ರದ ಗುರಿ ನಮ್ಮದು ಎಂದು ಸಚಿವ ಡಾ ಮಹದೇವಪ್ಪ ಹೇಳಿದರು.