Advertisement

ಸಿದ್ದರಾಮಯ್ಯ ಲೋಕಾಯುಕ್ತದ ಹಲ್ಲು ಕಿತ್ತು ಹಾಕಿದವರು; ಸಿಎಂ ಬೊಮ್ಮಾಯಿ

04:32 PM Mar 07, 2023 | Team Udayavani |

ಮೈಸೂರು: ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ಬಂದ್ ಮಾಡಲಿಲ್ಲ. ಬದಲಿಗೆ, ಅದರ ಹಲ್ಲುಗಳನ್ನೆಲ್ಲಾ ಕಿತ್ತು ಹಾಕಿದರು. ಹಲ್ಲು ಕಿತ್ತ ಮೇಲೆ ಇದ್ದರೆಷ್ಟು, ಇಲ್ಲದಿದ್ದರೆಷ್ಟು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಲೋಕಾಯುಕ್ತವನ್ನು ಬಂದ್ ಮಾಡಿದ್ದೆ ಎಂಬುದನ್ನು ಬಿಜೆಪಿಯವರು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ತಮ್ಮ ಕಾಲದಲ್ಲೇಕೆ ಲೋಕಾಯುಕ್ತದಲ್ಲಿನ ಕೇಸ್‌ಗಳನ್ನು ಎಸಿಬಿಗೆ ವರ್ಗಾಯಿಸುತ್ತಿದ್ದರು ? ಎಂದು ಪ್ರಶ್ನಿಸಿದರು.

ಬಂದ್‌ ಗೆ ಯಾವ ಬೆಲೆಯೂ ಇಲ್ಲ: ಮಾ.9ರಂದು ಕಾಂಗ್ರೆಸ್‌ ನಿಂದ ಬಂದ್‌ಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬಂದ್‌ಗೆ ಯಾವ ಬೆಲೆಯೂ ಇಲ್ಲ. 2 ಗಂಟೆ ಬಂದ್ ಎಂದರೆ ಏನರ್ಥ? ಎಂದು ಪ್ರಶ್ನಿಸಿದರು. ಯಾವತ್ತಾದರೂ ಇಂಥ ಬಂದ್ ಬಗ್ಗೆ ಕೇಳಿದ್ದೀರಾ. ಇದನ್ನು ಬಂದ್ ಎನ್ನುತ್ತಾರಾ? ಭ್ರಷ್ಟಾಚಾರ ಮಾಡಿದವರು, ಜೈಲಿಗೆ ಹೋಗಿ ಬಂದವರು ಕರೆ ಕೊಟ್ಟರೆ ಜನರ ಮುಂದೆ ನಡೆಯುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಅಂದು ಪರೀಕ್ಷೆಗಳಿವೆ. ವಿದ್ಯಾಾರ್ಥಿಗಳು ಸೇರಿದಂತೆ ಎಲ್ಲರಿಗೂ ತೊಂದರೆಯಾಗುತ್ತದೆ. ಇದು ಕಾಂಗ್ರೆಸ್‌ ನವರಿಗೆ ಅರ್ಥವಾಗುವುದಿಲ್ಲ. ಬಂದ್ ಮಾಡದಂತೆ ಸುಪ್ರೀಂ ಕೋರ್ಟ್ ಆದೇಶವೂ ಇದೆ ಎಂದರು.

ಸಿದ್ದರಾಮಯ್ಯ ಮಾತಿಗೆ ಜನ ನಗುತ್ತಿದ್ದಾರೆ: ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿ ನಿರ್ಮಾಣವಾಗಿರುವುದು ನಮ್ಮ ಸರ್ಕಾರದ ಅವಧಿಯಲ್ಲಿ. ನಿರ್ಮಿಸಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ. ಆದರೂ, ಸಿದ್ದರಾಮಯ್ಯ ಹೆದ್ದಾರಿ ನಿರ್ಮಾಣ ಮಾಡಿದ್ದು ನಾವು. ನಮಗೆ ಕ್ರೆಡಿಟ್ ಸಲ್ಲಬೇಕು ಎನ್ನುತ್ತಿರುವುದನ್ನು ಕೇಳಿ ಜನ ನಗುತ್ತಿದ್ದಾರೆ. ಹಾಗೆ ನೋಡಿದರೆ, ರಸ್ತೆ ವಿಸ್ತರಣೆ ಆಗಬೇಕೆಂಬ ಪ್ರಸ್ತಾವ 20 ವರ್ಷಗಳ ಹಿಂದಿನಿಂದಲೂ ಇತ್ತು. ಪ್ರಸ್ತಾಪಕ್ಕೂ ಹಣ ಬಿಡುಗಡೆ ಮಾಡಿ ಅನುಷ್ಠಾನಕ್ಕೆ ತರುವುದಕ್ಕೂ ವ್ಯತ್ಯಾಸವಿದೆ ಎಂದರು.

ಇದನ್ನೂ ಓದಿ:ಯಕೃತ್ತಿನ ಸಮಸ್ಯೆ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಲಯಾಳಂ ನಟ ಬಾಲ

Advertisement

ಸಿದ್ದರಾಮಯ್ಯ ಹೆದ್ದಾರಿ ಪರಿಶೀಲನೆ ನಡೆಸಲು ನಮ್ಮ ತಕರಾರೇನಿಲ್ಲ. ಈಗಾಗಲೇ ಅಲ್ಲಿ ಸಾವಿರಾರು ಜನರು ಓಡಾಡುತ್ತಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು ಎಂದು ಲೇವಡಿ ಮಾಡಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಹೈಕೋರ್ಟ್ ತೀರ್ಮಾನವನ್ನು ನಾನು ವಿಶ್ಲೇಷಣೆ ಮಾಡಲು ಬಯಸುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next