Advertisement

MUDA Scam: ಸರ್ಕಾರದ ತನಿಖೆಯಿಂದ ನ್ಯಾಯ ಸಿಗಲ್ಲ: ಎಚ್‌.ಡಿ.ಕುಮಾರಸ್ವಾಮಿ

12:34 AM Jul 14, 2024 | Team Udayavani |

ಬೆಂಗಳೂರು: ಮೈಸೂರಿನ ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಸರ್ಕಾರದ ತನಿಖೆಯಿಂದ ನ್ಯಾಯ ಸಿಗುವ ಸಾಧ್ಯತೆಗಳಿಲ್ಲ. ಇಲ್ಲಿ ಸತ್ತವರ ಹೆಸರಲ್ಲಿ ಡಿನೋಟಿಫಿಕೇಷನ್‌ ಆಗಿದೆ. ಆದ್ದರಿಂದ ರಾಜ್ಯಪಾಲರ ಅನುಮತಿ ಪಡೆದು ಹೈಕೋರ್ಟ್‌ನಲ್ಲಿ ದೂರು ಸಲ್ಲಿಸುವ ಮೂಲಕ ಪ್ರಜ್ಞಾವಂತರು ಹೋರಾಟ ಮಾಡಬೇಕು ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಪಕ್ಷದ ಪ್ರಧಾನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಮುಖ್ಯಮಂತ್ರಿಗಳ ಧರ್ಮಪತ್ನಿ ಪರಿಹಾರ ಪಡೆದಿರುವ ಜಮೀನು ಮುಡಾಗೆ ಸೇರಿದ ಸ್ವತ್ತು. ಡಿನೋಟಿಫಿಕೇಷನ್‌ ಬಳಿಕ ನಾಲ್ಕು ವರ್ಷ ಏನೂ ಬೆಳವಣಿಗೆಯೇ ಆಗಿಲ್ಲ. ಸತ್ತವರ ಹೆಸರಿನಲ್ಲಿ ಜಮೀನು ಡಿ ನೋಟಿಫಿಕೇಷನ್‌ ಆಗಿದೆ ಎಂದು ಆರೋಪಿಸಿದ ಅವರು ಕೆಲ ದಾಖಲೆಗಳನ್ನು ಪ್ರದರ್ಶಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದ ಖರೀದಿ ಮಾಡಿರುವ ಮೈಸೂರಿನ ಕೆಸರೆ ಬಳಿಯ ಜಮೀನಿಗೆ ಮುಡಾ ಭೂಸ್ವಾಧೀನ ಮಾಡಿ ಪರಿಹಾರ ನೀಡಲಾಗಿದೆ. ಹೀಗಿರುವಾಗ ಇದು ಖಂಡಿತವಾಗಿಯೂ ಮುಡಾಗೆ ಸೇರಿದ ಜಮೀನು ಆಗುತ್ತದೆ. ಈ ಜಮೀನನ್ನು ಡಿ ನೋಟಿಫಿಕೇಷನ್‌ ಮಾಡಿ ಖರೀದಿಸಲಾಗಿದೆ. ಇದು ಕಾನೂನುಬಾಹಿರ ಎಂದು ಕೇಂದ್ರ ಸಚಿವರು ದೂರಿದರು.

ಸರಕಾರದಿಂದಲೇ ಚಂದ್ರಶೇಖರ್‌ ಜೀವಹರಣ: ಕುಮಾರಸ್ವಾಮಿ
ವಾಲ್ಮೀಕಿ ನಿಗಮಕ್ಕೆ ಸಂಬಂಧಪಟ್ಟಂತೆ ಭಾರೀ ಅವ್ಯವಹಾರ ಆಗಿದೆ. ಚುನಾವಣೆ ನೀತಿಸಂಹಿತೆ ಇರುವ ಸಂದರ್ಭದಲ್ಲೇ  94 ಕೋಟಿ ರೂ. ವರ್ಗಾವಣೆಯಾಗಿದೆ. ನಿಗಮದ ಅಧೀಕ್ಷಕ ಚಂದ್ರಶೇಖರ್‌ ಅವರದ್ದು ಆತ್ಮಹತ್ಯೆ ಅಲ್ಲ. ಅದು ಈ ಸರಕಾರವೇ ಮಾಡಿದ ಕೊಲೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಆಡಳಿತದಲ್ಲಿ ಬಿಗಿ ಇದ್ದಿದ್ದರೆ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗುತ್ತಿರಲಿಲ್ಲ ಎಂದರು. ನ್ಯಾ| ನಾಗಮೋಹನ್‌ ದಾಸ್‌ ಅವರಿಂದ ಶೇ. 40 ಕಮಿಷನ್‌ ತನಿಖೆ ಮಾಡಿಸುತ್ತಿದ್ದೀರಿ. ದಾಖಲೆ ಇಲ್ಲದೆ ಡಂಗೂರ ಹೊಡೆದಿರಿ ಅಲ್ಲವೇ? ಸಾಕ್ಷಿ ಇಲ್ಲದೆ ಈಗ ಹುಡುಕುತ್ತಾ ಇದ್ದೀರಾ? ಕೆಂಪಣ್ಣ ಆಯೋಗದ ವರದಿಯನ್ನು ಏನು ಮಾಡಿದ್ದೀರಿ? ಎಂದು ರಾಜ್ಯ ಸಕಾರವನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next