Advertisement

CM Siddaramaiah ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ಸಂಸದರ ಪ್ರತಿಭಟನೆ

08:10 PM Jul 26, 2024 | Team Udayavani |

ಬೆಂಗಳೂರು: ವಾಲ್ಮೀಕಿ ನಿಗಮದ ಹಣವನ್ನು ದುರುಪಯೋಗ ಮತ್ತು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದ (MUDA) ಖಾಲಿ ನಿವೇಶನಗಳನ್ನು ಕಾನೂನಾತ್ಮಕವಾಗಿ ಹರಾಜು ಮಾದಿರುವುದನ್ನು ಖಂಡಿಸಿ ಶುಕ್ರವಾರ ಸಂಸತ್ ಭವನದ ಆವರಣದಲ್ಲಿ ಕರ್ನಾಟಕದ NDA ಸಂಸದರು ಪ್ರತಿಭಟನೆ ನಡೆಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದರು.

Advertisement

ಕರ್ನಾಟಕದ ಬಿಜೆಪಿ ಮತ್ತು ಜೆಡಿಎಸ್ ನ ಎರಡೂ ಸದನಗಳ ಸಂಸದರು ದೆಹಲಿಯಲ್ಲಿ ಸರ್ಕಾರದ ಅಕ್ರಮಗಳನ್ನು ಪ್ರತಿಭಟಿಸುವ ಮೂಲಕ ಸರಕಾರದ ಕಾರ್ಯವೈಖರಿಯನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದರು.

”ಕರ್ನಾಟಕದ ದಲಿತರ ಹಣವನ್ನು ಕಾಂಗ್ರೆಸ್ ಪಕ್ಷ ಲೂಟಿ ಮಾಡುತ್ತಿದೆ. ರಾಹುಲ್ ಗಾಂಧಿ ಎಲ್ಲಿದ್ದಾರೆ ಎಲ್ಲಿದ್ದಾರೆ” ಎಂಬರ್ಥವುಳ್ಳ ಹಿಂದಿ ಘೋಷಣೆ ಕೂಗಿದರು. ‘ಹಠಾವೋ, ಹಠಾವೋ ಭ್ರಷ್ಟ ಮುಖ್ಯಮಂತ್ರಿ ಕೋ ಹಠಾವೋ’ ಎಂಬ ಘೋಷಣೆಯನ್ನೂ ಕೂಗಿದರು.

‘ರಿಟರ್ನ್ ದಿ ಲೂಟೆಡ್ ಮನಿ ಬಿಲಾಂಗಿಂಗ್ ಟು ಎಸ್‍ಟಿ ಕಮ್ಯುನಿಟಿ’, ಮುಡಾ ಹಗರಣದಲ್ಲಿ ಕೋಟಿ ಕೋಟಿ ನುಂಗಿದ ಸಿದ್ದರಾಮಯ್ಯನವರಿಗೆ ಧಿಕ್ಕಾರ’ ಎಂಬ ಪೋಸ್ಟರ್ ಹಿಡಿದು ಸಂಸದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಂಸದ ಜಗದೀಶ ಶೆಟ್ಟರ್ ಅವರು ಮಾಧ್ಯಮಗಳ ಜತೆ ಮಾತನಾಡಿ, ಮುಖ್ಯಮಂತ್ರಿಗಳು ಮೂಡಾ ಹಗರಣ ಕುರಿತು ಸದನದಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಇದು ಹಗರಣ ಮುಚ್ಚಿ ಹಾಕುವ ಕೆಲಸ. ನಮ್ಮ ಶಾಸಕರು ಅಹೋರಾತ್ರಿ ಧರಣಿ ಮಾಡಿದ್ದಾರೆ. ನಾವೂ ಇಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದರು.

Advertisement

‘ವಾಲ್ಮೀಕಿ ನಿಗಮದ ದುಡ್ಡು ರಾಹುಲ್ ಗಾಂಧಿ ಜೇಬಿಗೋಗಿದ್ದೆಷ್ಟು? ‘ ಎಂಬ ಪೋಸ್ಟರ್ ಹಿಡಿದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಗಮನ ಸೆಳೆದರು.

ಸಂಸದ ಗೋವಿಂದ ಕಾರಜೋಳ ಅವರು ಮಾತನಾಡಿ, ವಾಲ್ಮೀಕಿ ನಿಗಮದಲ್ಲಿ 187 ಕೋಟಿಯ ಹಗರಣ ನಡೆದಿದೆ. ನಕಲಿ ಖಾತೆಗಳಿಗೆ ಹಣ ಹೋಗಿದೆ. ಹಣಕಾಸು ಇಲಾಖೆ ನಿರ್ವಹಿಸುವ ಮುಖ್ಯಮಂತ್ರಿಗಳೇ ಇದಕ್ಕೆ ಜವಾಬ್ದಾರರು. ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಿ.ಸಿ.ಮೋಹನ್ ಅವರು ಮಾತನಾಡಿ, ವಾಲ್ಮೀಕಿ ನಿಗಮದ ಹಗರಣ- MUDA ಹಗರಣದಲ್ಲಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next