Advertisement

Siddaramaiah; ಸಚಿವರೆದುರು ದುಗುಡ ತೋರಿಸಿಕೊಳ್ಳದ ಸಿಎಂ

12:43 AM Aug 19, 2024 | Team Udayavani |

ಬೆಂಗಳೂರು: ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬಳಿಕವೂ ರಾಜೀನಾಮೆ ಕೊಡುವುದಿಲ್ಲ, ಕಾನೂನು ಹೋರಾಟ ಮಾಡುತ್ತೇನೆ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಬೆನ್ನಿಗೆ ಶಾಸಕರು, ಸಚಿವರು ನಿಂತಿದ್ದು, ರವಿವಾರ ಕೂಡ ಸಂಪುಟ ಸಹೋದ್ಯೋಗಿಗಳು, ಶಾಸಕರು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಈ ವೇಳೆ ಎಲ್ಲರೊಂದಿಗೆ ನಗುತ್ತಲೇ ಮಾತನಾಡಿದ ಅವರು, ದುಗುಡ ತೋರಿಸಿಕೊಂಡಿಲ್ಲ ಎನ್ನಲಾಗಿದೆ.

Advertisement

ಶನಿವಾರ ಅಭಿಯೋಜನೆಗೆ ಅನುಮತಿ ಕೊಟ್ಟ ವಿಚಾರ ತಿಳಿದು ಆಪ್ತ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ, ಸಿಎಂ ಕಾನೂನು ಸಲಹೆಗಾರರು ಕಾವೇರಿ ನಿವಾಸಕ್ಕೆ ದೌಡಾಯಿಸಿದ್ದರು. ವಿಚಲಿತಗೊಂಡಿರುವುದನ್ನು ತೋರಿಸಿಕೊಳ್ಳದ ಸಿಎಂ, ಎಲ್ಲರೊಂದಿಗೂ ನಗುತ್ತಲೇ ಮಾತನಾಡಿದ್ದರು. ಅಲ್ಲದೆ, ಕೆಲ ಕಾಲ ಸಮಾಲೋಚನೆ ಅನಂತರ, ರಾಜ್ಯ ಸರಕಾರಿ ನೌಕರರ ಸಂಘ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನ ಸಮಾರಂಭಕ್ಕೆ ತಡವಾಗಿಯಾದರೂ ತೆರಳಿದ್ದರಲ್ಲದೆ, ಸಂಜೆ ಸಂಪುಟ ಸಭೆಯನ್ನೂ ನಡೆಸಿದ್ದರು.

ಕಾವೇರಿ ನಿವಾಸದಲ್ಲೇ ಕಾಲ ಕಳೆದ ಸಿಎಂ
ರವಿವಾರ ಸರಕಾರಿ ರಜಾ ದಿನವಾದ್ದರಿಂದ ಇಡೀ ದಿನವನ್ನು ಕಾವೇರಿ ನಿವಾಸದಲ್ಲೇ ಕಳೆದರು. ಬೆಳಗ್ಗೆ ಸಚಿವರಾದ ಪ್ರಿಯಾಂಕ್‌ ಖರ್ಗೆ, ಕೃಷ್ಣ ಬೈರೇಗೌಡ, ಲಕ್ಷ್ಮೀ ಹೆಬ್ಟಾಳ್ಕರ್‌, ಬೈರತಿ ಸುರೇಶ್‌, ಡಾ| ಎಚ್‌.ಸಿ. ಮಹದೇವಪ್ಪ ಅವರು ಭೇಟಿ ನೀಡಿದರು. ಎಲ್ಲರೊಂದಿಗೂ ಮಾತುಕತೆ ನಡೆಸಿದ ಸಿಎಂ, ವಕೀಲರ ತಂಡ ಬರಲಿದ್ದು, ಮುಂದಿನ ಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡುತ್ತೇನೆ ಎಂದು ಸಂಪುಟ ಸಹೋದ್ಯೋಗಿಗಳಿಗೆ ತಿಳಿಸಿದ್ದಾರೆ.

ಸಿಎಂ ಆಪ್ತ ವಲಯದಲ್ಲಿ ಕಾರ್ಮೋಡ
ಸಿಎಂ ಆಪ್ತವಲಯದಲ್ಲಿ ಒಂದು ರೀತಿಯ ಕಾರ್ಮೋಡ ಕವಿದಂತಾಗಿದ್ದು, ಕಾವೇರಿ ನಿವಾಸಕ್ಕೆ ಭೇಟಿ ನೀಡಬೇಕೆ, ಬೇಡವೇ, ಭೇಟಿಗೆ ಅವಕಾಶ ಸಿಗುತ್ತದೆಯೇ ಇಲ್ಲವೇ ಎಂಬ ಗೊಂದಲದಲ್ಲಿಯೂ ಅನೇಕರಿದ್ದಾರೆ. ಆದರೆ, ರವಿವಾರ ಹಲವು ಶಾಸಕರು ಭೇಟಿ ಮಾಡಿದ್ದು, ಎಲ್ಲರೊಂದಿಗೂ ಆತ್ಮೀಯವಾಗಿಯೇ ಮಾತನಾಡಿ ಕಳುಹಿಸಿರುವ ಸಿಎಂ, ಯಾರೊಂದಿಗೂ ಮನದಾಳದ ದುಗುಡವನ್ನು ಹಂಚಿಕೊಂಡಿಲ್ಲ. ಜೆಡಿಎಸ್‌ ಪಾಳಯದಲ್ಲಿದ್ದ ಸಿ.ಎಂ. ಇಬ್ರಾಹಿಂ ಕೂಡ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು ಅಚ್ಚರಿಗೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next