Advertisement

MUDA ಪ್ರಕರಣದಲ್ಲಿ ರಾಜ್ಯಪಾಲರಿಂದ ಅಪಚಾರ; ವಿವೇಚನಾರಹಿತ ತೀರ್ಮಾನ: ಸಿಂಘ್ವಿ

11:57 PM Sep 12, 2024 | Team Udayavani |

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ, ತರ್ಕರಹಿತ, ವಿವೇಚನಾರಹಿತವಾಗಿದ್ದು, ಪೂರ್ವಾಗ್ರಹ ಪಕ್ಷಪಾತದ ಜತೆಗೆ ಸ್ಪಷ್ಟವಾದ ಪಕ್ಷಪಾತದಿಂದ ಕೂಡಿದೆ. ಅಷ್ಟೇ ಅಲ್ಲ, ಇದರಲ್ಲಿ ರಾಜ್ಯಪಾಲರಿಂದ ಸಂವಿಧಾನಕ್ಕೆ ಅಪಚಾರವಾಗಿದೆ ಎಂದು ಮುಖ್ಯಮಂತ್ರಿ ಪರ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಗುರುವಾರ ಹೈಕೋರ್ಟ್‌ನಲ್ಲಿ ಪ್ರತಿಪಾದಿಸಿದ್ದಾರೆ.

Advertisement

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ಸಿಎಂ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ರಾಜ್ಯಪಾಲರ ಕ್ರಮವನ್ನು ಬಲವಾಗಿ ಆಕ್ಷೇಪಿಸಿದರು. ಬೇರೆ ಜನಸೇವಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ ಮನವಿಗಳನ್ನು ರಾಜ್ಯಪಾಲರು ವರ್ಷಗಟ್ಟಲೇ ತಮ್ಮ ಬಳಿ ಇಟ್ಟುಕೊಂಡು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ವಿಚಾರದಲ್ಲಿ ಮಾತ್ರ ಅತೀವೇಗ ತೋರಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕನ್ನಡ ಭಾಷೆಯಲ್ಲಿ ಇದ್ದ 100 ಪುಟಗಳ ಮಾಹಿತಿಗಳನ್ನು ಒಂದೇ ದಿನದಲ್ಲಿ ಪರಿಶೀಲಿಸಿ ಶೋಕಾಸ್‌ ನೋಟಿಸ್‌ ನೀಡಿರುವ ರಾಜ್ಯಪಾಲರು, ಮಾಜಿ ಸಚಿವ ಮುರುಗೇಶ್‌ ನಿರಾಣಿ ವಿರುದ್ಧದ ಪ್ರಾಸಿಕ್ಯೂಷನ್‌ ಅನುಮತಿಯನ್ನು ಕನ್ನಡ ಅನುವಾದದ ಕಾರಣಕ್ಕೆ ವಾಪಸ್‌ ಕಳಿಸಿದ್ದಾರೆ. ಶಶಿಕಲಾ ಜೊಲ್ಲೆ ವಿರುದ್ಧದ ದೂರನ್ನು ಎರಡು ವರ್ಷಗಳ ಬಳಿಕ ತಿರಸ್ಕರಿಸಲಾಗಿದೆ. ರಾಜ್ಯಪಾಲರದ್ದು ಇದ್ಯಾವ ಸಹಜ ನ್ಯಾಯ ಎಂದು ಸಿಂಘ್ವಿ ಪ್ರಶ್ನಿಸಿದರು.

ಸೂಕ್ತ ಉಲ್ಲೇಖವೇ ಇಲ್ಲ
ಸಿದ್ದರಾಮಯ್ಯ ಪ್ರಾಸಿಕ್ಯೂಷನ್‌ ಅನುಮತಿಯನ್ನು ಏಕೆ ಕೊಡಲಾಗಿದೆ ಎಂಬ ಅಂಶವೇ ರಾಜ್ಯಪಾಲರ ಆದೇಶದಲ್ಲಿ ಇಲ್ಲ. ಸಿದ್ದರಾಮಯ್ಯ ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದಾರೆ? ಅವರು ಪರಿಶೀಲಿಸಿದ ಕಡತಗಳ‌ ಉಲ್ಲೇಖವಿಲ್ಲ. ಯಾವ ಟಿಪ್ಪಣಿಗಳ ಆಧಾರದ ಮೇಲೆ ನಿರ್ಧಾರ ಕೈಗೊಂಡಿದ್ದೇನೆಂದು ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆಯೂ ಉಲ್ಲೇಖಿಸಿಲ್ಲ.

Advertisement

ಪಕ್ಷಪಾತದಿಂದ ರಾಜ್ಯಪಾಲರು ಕೇವಲ 6 ಪುಟಗಳ ಆದೇಶ ನೀಡಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆಗೆ ಸೆಕ್ಷನ್‌ 17ಎ ಸೇರ್ಪಡೆಗೆ ಕಾರಣವಿದೆ ಮೊದಲಿಗೆ ಲೋಕಾಯುಕ್ತ, ಲೋಕಪಾಲರ ಅನುಮತಿಗೆ ಪ್ರಸ್ತಾಪವಿತ್ತು. ಆದರೆ ಅನಂತರ ಸಕ್ಷಮ ಪ್ರಾಧಿಕಾರಕ್ಕೆ ಇದರ ಹೊಣೆ ನೀಡಲಾಯಿತು. ತನಿಖಾಧಿಕಾರಿಯಿಂದ ಮಾತ್ರ 17ಎ ಅನುಮತಿ ಕೇಳಬೇಕು. ಅದನ್ನು ಮೀರಿ ಆದೇಶ ಮಾಡಲು ಸಾಧ್ಯವಿಲ್ಲ. ರಾಜ್ಯಪಾಲರು ಅತಿ ವಿರಳ ಸಂದರ್ಭದಲ್ಲಿ ಮಾತ್ರ ವಿವೇಚನಾಧಿಕಾರ ಬಳಸಬೇಕು ಎಂದು ಸಿಂಘ್ವಿ ವಾದಿಸಿದರು.

ಎಲ್ಲವೂ ಬಿಜೆಪಿ ಆಡಳಿತದಲ್ಲಿ ನಡೆದಿದೆ
ಕೆಸರೆ ಗ್ರಾಮದ ಜಮೀನು 1992ರಲ್ಲಿ ಮುಡಾಗೆ ಭೂಮಿ ಸ್ವಾಧೀನವಾಗಿತ್ತು. ದೇವರಾಜು ಅವರು ಜಮೀನಿನ ಮಾಲೀಕರಾಗಿದ್ದರು ಎಂದು ಸಿಂಘ್ವಿ ಹೇಳಿದಾಗ, ದೇವರಾಜು ಜಮೀನಿನ ಮಾಲಕರು ಹೇಗಾದರು ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಆಗ 10.04.1993ರಲ್ಲಿ ದೇವರಾಜುವಿನ ಹೆಸರಲ್ಲಿ ಪೌತಿ ಖಾತೆಯಾಗಿದೆ. ಅನಂತರ ಜಮೀನು ಕಾನೂನಿನ ಪ್ರಕ್ರಿಯೆಯಂತೆ ಡಿನೋಟಿಫೈ ಆಗಿದೆ. 23 ವರ್ಷಗಳ ಹಗರಣದಂತೆ ದೊಡ್ಡದಾಗಿ ಬಿಂಬಿಸಲಾಗಿದೆ. 2004ರಲ್ಲಿ ಭಾಮೈದನಿಗೆ ಕ್ರಯ ಪತ್ರವಾಗಿದೆ. 2005ರಲ್ಲಿ ಭೂಪರಿವರ್ತನೆ ಮಾಡಲಾಗಿದೆ. 2010ರಲ್ಲಿ ಸಿದ್ದರಾಮಯ್ಯ ಪತ್ನಿಗೆ ದಾನಪತ್ರವಾಗಿದೆ. ಅಕ್ರಮವಾಗಿದ್ದರೆ 5 ವರ್ಷಗಳ ಅನಂತರ ಯಾರಾದರೂ ದಾನಪತ್ರ ಮಾಡಿಸಿಕೊಳ್ಳುತ್ತಾರಾ? ಎಂದರು. ಇಡೀ ಪ್ರಕರಣ ಬಿಜೆಪಿಯ ಆಡಳಿತದಲ್ಲಿ ನಡೆದಿದೆ ಎಂದು ಸಿಂಘ್ವಿ ವಾದಿಸಿದರು.

ಅಬ್ರಹಾಂ ಮೇಲಿನ ಪ್ರೀತಿ
ಸ್ನೇಹಮಯಿ ಮೇಲೆ ಯಾಕಿಲ್ಲ?
ದೂರುದಾರ ಟಿ.ಜೆ. ಅಬ್ರಹಾಂ ಅವರನ್ನು 90 ನಿಮಿಷ ಕೂರಿಸಿಕೊಂಡು ಮಾತನಾಡಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಹಾಗಾದರೆ, ಸ್ನೇಹಮಯಿ ಕೃಷ್ಣ ಅವರ ಪಾಡೇನು ಎನ್ನುವುದೇ ನಮ್ಮ ಪ್ರಶ್ನೆ. ಅಬ್ರಹಾಂ ಮೇಲಿನ ಪ್ರೀತಿ ಸ್ನೇಹಮಯಿ ಮೇಲೆ ಯಾಕಿಲ್ಲ? ಸಿಎಂ ವಿರುದ್ಧದ ಆದೇಶದಲ್ಲಿ ರಾಜ್ಯಪಾಲರು 25 ಸೆಕ್ಷನ್‌ಗಳನ್ನು ಉಲ್ಲೇಖಿಸಿದ್ದಾರೆ. ಆದರೆ, ಅದು ಯಾವುದು ಅಂತ ಒಂದೂ ಹೇಳಿಲ್ಲ. ಕೆಸರೆ ಗ್ರಾಮ ಕಣ್ಮರೆ ಆಗಿಲ್ಲ. 2011ರಲ್ಲಿ ಜನಗಣತಿಯಲ್ಲಿ ಗ್ರಾಮದ ಜನಸಂಖ್ಯೆ ಮತ್ತಿತರ ವಿವರಗಳು ದಾಖಲಾಗಿವೆ ಎಂದು ಹಿರಿಯ ವಕೀಲ ಪ್ರೊ| ರವಿವರ್ಮ ಕುಮಾರ್‌ ಹೇಳಿದರು. ನಿವೇಶನ ಜುಜುಬಿ ಎಂದು ರವಿವರ್ಮ ಕುಮಾರ್‌ ಹೇಳಿದಾಗ, ಹಾಗೆಲ್ಲ ಹೇಳಬೇಡಿ, ಇಲ್ಲಿರುವುದು 55 ಕೋಟಿ ರೂ. ಹಣದ ಪ್ರಶ್ನೆ ಎಂದು ನ್ಯಾಯಪೀಠ ಹೇಳಿತು.

Advertisement

Udayavani is now on Telegram. Click here to join our channel and stay updated with the latest news.