ಬೆಂಗಳೂರು: ಕಾಂಗ್ರೆಸ್ ನಲ್ಲಿ ಈಗ ನಾಯಕತ್ವದ ಕುರಿತು ಚರ್ಚೆ ಆರಂಭವಾಗಿದೆ. ರಾಹುಲ್ ಗಾಂಧಿಯೇ ಅಧ್ಯಕ್ಷರಾಗಬೇಕೆ ಅಥವಾ ಗಾಂಧಿಯೇತರ ನಾಯಕರು ಅಗ್ರ ಸ್ಥಾನ ಅಲಂಕರಿಸಬೇಕೆ ಎನ್ನುವುದರ ಚರ್ಚೆ ಆರಂಭವಾಗಿದೆ. ಈ ಕುರಿತು ಇಂದು ಹೊಸದಿಲ್ಲಿಯಲ್ಲಿ ಕಾರ್ಯಕಾರಣಿ ಸಭೆ ನಡೆಯಲಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಪರ ಒಲವು ತೋರಿದ್ದು, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿಯೇ ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದ ಹಿತದೃಷ್ಟಿಯಿಂದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವದಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ, ಕಾರ್ಯಕರ್ತರಲ್ಲಿ ಹುರುಪು ಮತ್ತು ದೇಶದ ಜನತೆಯಲ್ಲಿ ಭರವಸೆ ಮೂಡಲಿದೆ ಎಂದಿದ್ದಾರೆ.
ಇದನ್ನೂ ಓದಿ; ಬೆಳ್ತಂಗಡಿ: ವಾಕಿಂಗ್ ಮಾಡುವಾಗ ಟ್ಯಾಕ್ಸಿ ಚಾಲಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಸೋನಿಯಾಗಾಂಧಿ ಮತ್ತು ಹಿರಿಯ ನಾಯಕರ ಅನುಭವಪೂರ್ಣ ಮಾರ್ಗದರ್ಶನದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪಕ್ಷವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಇದು ಪಕ್ಷದ ಕೋಟ್ಯಂತರ ಕಾರ್ಯಕರ್ತರ ಆಶಯವೂ ಹೌದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.