ಬೆಂಗಳೂರು: ಬಿಜೆಪಿಯತ್ತ ಕಣ್ಣು ಹಾಯಿಸಿರುವ ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಆ ಮೂಲಕ ಪರೋಕ್ಷವಾಗಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ಕುಗ್ಗಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಜೆಡಿಎಸ್ ಶಾಸಕರಾದ ಚಾಮುಂಡೇಶ್ವರಿ ಕ್ಷೇತ್ರದ ಜಿ.ಟಿ.ದೇವೇಗೌಡ, ಗುಬ್ಬಿ ಕ್ಷೇತ್ರದ ಎಸ್.ಆರ್. ಶ್ರೀನಿವಾಸ್, ಪಿರಿಯಾಪಟ್ಟಣ ಮಹದೇವ್ ಸೇರಿ ಆರು ಮಂದಿ ಬಿಜೆಪಿಯತ್ತ ಚಿತ್ತ ಹರಿಸಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ಹೋಗುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದಾರೆ. ಇದರ ಸುಳಿವು ಅರಿತಿರುವ ಸಿದ್ದರಾಮಯ್ಯ “ಬರುವುದಾದರೆ ಕಾಂಗ್ರೆಸ್‌ಗೆ ಬನ್ನಿ’ ಎಂದು ಆಹ್ವಾನ ನೀಡಿದ್ದಾರೆ.
ಸದ್ಯಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ. ಮುಂದಿನ ಮಾರ್ಚ್ ಒಳಗೆ ರಾಜ್ಯ ವಿಧಾನಸಭೆಗೆ ಹೊಸದಾಗಿ ಚುನಾವಣೆ ನಡೆಸುವ ಸಾಧ್ಯತೆಯಿದೆ. ಅಲ್ಲಿಯವರೆಗೂ ತಟಸ್ಥವಾಗಿದ್ದು ಕಾಂಗ್ರೆಸ್‌ಗೆ ಬಂದು ಬಿಡಿ ಎಂದು ತಮ್ಮ ಆಪ್ತರ ಮೂಲಕ ಸಂದೇಶ ರವಾನಿಸಿದ್ದಾರೆ. ಜಿ.ಟಿ.ದೇವೇಗೌಡರ ಜತೆ ಖುದ್ದು ಮಾತನಾಡಿದ್ದಾರೆಂದು ಮೂಲಗಳು ತಿಳಿಸಿವೆ. ಮೈಸೂರು ಭಾಗದಲ್ಲಿ ತಮ್ಮ ಬಲ ಹೆಚ್ಚಿಸಿಕೊಂಡು ಒಕ್ಕಲಿಗರ ವಿರೋಧಿ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಸಿದ್ದರಾಮಯ್ಯ ಈ ತಂತ್ರಗಾರಿಕೆ ರೂಪಿಸಿದ್ದಾರೆ. ಜಿ.ಟಿ.ದೇವೇಗೌಡರ ವಿಚಾರದಲ್ಲಂತೂ ಒಂದೇ ಕಲ್ಲಿಗೆ ಎರಡು ಹಕ್ಕಿ ಉರುಳಿಸಲು ಮುಂದಾಗಿದ್ದಾರೆ.
ಜಿ.ಟಿ.ದೇವೇಗೌಡರನ್ನು ಬಿಜೆಪಿಗೆ ಸೆಳೆಯಲು ಖುದ್ದು ಯಡಿಯೂರಪ್ಪ ಆಸಕ್ತರಾಗಿ ಎಚ್.ವಿಶ್ವನಾಥ್, ವಿ.ಶ್ರೀನಿವಾಸಪ್ರಸಾದ್ ಸಮ್ಮುಖದಲ್ಲಿ ಒಂದು ಸುತ್ತು ಮಾತುಕತೆ ಸಹ ನಡೆದಿದೆ. ಜಿ.ಟಿ.ದೇವೇಗೌಡರು ಬಿಜೆಪಿಗೆ ಬಂದರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅವರ ಪುತ್ರ ಹರೀಶ್‌ಗೆ ಬಿಜೆಪಿಯಿಂದ ಟಿಕೆಟ್ ನೀಡುವುದು. ಪಕ್ಕದ ವರುಣಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿತ್ತು.
ಒಂದೊಮ್ಮೆ ಜಿ.ಟಿ.ದೇವೇಗೌಡರು ಬಿಜೆಪಿಗೆ ಹೋದರೆ ತಮ್ಮ ಪುತ್ರ ಯತೀಂದ್ರ ಪ್ರತಿನಿಧಿಸುವ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಬಂದರೆ ತಮ್ಮ ರಾಜಕೀಯ ಪ್ರಾಬಲ್ಯ ಕಡಿಮೆಯಾಗಬಹುದು. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಮತ್ತೆ ಸ್ಪರ್ಧೆ ಮಾಡುವ ಆನಿವಾರ್ಯತೆ ಎದುರಾದರೆ ವರುಣಾ ಕ್ಷೇತ್ರವನ್ನೇ ತಾವು ಆಯ್ಕೆ ಮಾಡಿಕೊಳ್ಳಬೇಕಾಗಬಹುದು. ಆಗ, ಒಕ್ಕಲಿಗ ಸಮುದಾಯದ ಬೆಂಬಲ ಬೇಕಾಗುತ್ತದೆಂಬ ದೂರ ದೃಷ್ಟಿಯಿಂದ ಜಿ.ಟಿ.ದೇವೇಗೌಡರಿಗೆ ಗಾಳ ಹಾಕಲು ಸಿದ್ದರಾಮಯ್ಯ ಮುಂದಾಗಿ ಮಾತುಕತೆ ನಡೆಸಿದ್ದಾರೆ.
ಜಿ.ಟಿ.ದೇವೇಗೌಡ ಪುತ್ರ ಹರೀಶ್‌ಗೆ ಕಾಂಗ್ರೆಸ್‌ನಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ಕೊಡುವುದು. ತಾವು ಅಥವಾ ತಮ್ಮ ಪುತ್ರ ಡಾ.ಯತೀಂದ್ರ ವರುಣಾದಲ್ಲಿ ಸ್ಪರ್ಧೆ ಮಾಡುವುದು. ಜತೆಗೆ, ಜಿ.ಟಿ.ದೇವೇಗೌಡರು ಕಾಂಗ್ರೆಸ್‌ಗೆ ಬಂದರೆ ಹುಣಸೂರಿನಲ್ಲಿ ತಮ್ಮ ಶಿಷ್ಯ ಎಚ್.ಪಿ.ಮಂಜುನಾಥ್ ಗೆಲುವು ಸುಲಭವಾಗಲಿದೆ. ಜಿ.ಟಿ.ದೇವೇಗೌಡರಿಗೆ ಹುಣಸೂರಿನಲ್ಲಿ ತಮ್ಮದೇ ಆದ ಓಟ್‌ಬ್ಯಾಂಕ್ ಇದೆ. ಈ ಮೂಲಕ ತಮಗೆ ಸೆಡ್ಡು ಹೊಡೆದಿರುವ ಎಚ್.ವಿಶ್ವನಾಥ್ ಮಣಿಸಬಹುದೆಂಬ ಲೆಕ್ಕಾಚಾರ ಸಿದ್ದರಾಮಯ್ಯ ಅವರದ್ದಾಗಿದೆ ಎಂದು ಹೇಳಲಾಗಿದೆ.
ಇದರ ಜತೆಗೆ ಜೆಡಿಎಸ್‌ನ ಕೆಲವು ಮಾಜಿ ಶಾಸಕರನ್ನು ಕಾಂಗ್ರೆಸ್‌ಗೆ ಕರೆತರಲು ಸಿದ್ದರಾಮಯ್ಯ ಪ್ರಯತ್ನಿಸಿದ್ದು, ಚಿಕ್ಕನಾಯಕನಹಳ್ಳಿ ಸುರೇಶ್‌ಬಾಬು ಜತೆ ಮಾತುಕತೆ ನಡಸಿದ್ದಾರೆ. ಇದೇ ರೀತಿ ಹಲವರ ಜತೆ ಸಂಪರ್ಕದಲ್ಲಿದ್ದಾರೆಂದು ತಿಳಿದು ಬಂದಿದೆ. ಮೈಸೂರಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಕುಟುಂಬ ಸದಸ್ಯರೂ ಆಗಿರುವ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರನ್ನು ಭೇಟಿ ಮಾಡಿರುವುದು ಸಹ ರಾಜಕೀಯ ತಂತ್ರಗಾರಿ ಕೆಯ ಭಾಗವೇ ಆಗಿದೆ. ಅವರನ್ನೂ ಕಾಂಗ್ರೆಸ್‌ನತ್ತ ಸೆಳೆಯುವ ಯತ್ನ ನಡೆದಿದೆ ಎಂದು ಹೇಳಲಾಗಿದೆ.
ನಾಯಕತ್ವ ಉಳಿಸಿಕೊಳ್ಳುವ ಉದ್ದೇಶ: ರಾಜ್ಯದಲ್ಲಿ ಒಂದೊಮ್ಮೆ ವಿಧಾನಸಭೆ ಚುನಾವಣೆ ಎದುರಾದರೆ ಕಾಂಗ್ರೆಸ್ ಬಲ ಹೆಚ್ಚಿದರೆ ಮಾತ್ರ ಸರ್ಕಾರ ರಚನೆ ಸಾಧ್ಯ. ಇಲ್ಲದಿದ್ದರೆ ಮತ್ತೆ ಜೆಡಿಎಸ್ ಬೆಂಬಲಕ್ಕೆ ಮೊರೆ ಹೋಗಬೇಕಾಗುತ್ತದೆ. ಹೀಗಾಗಿ, ಜೆಡಿಎಸ್ ಬಲ ಕುಗ್ಗಿಸಿ ಸ್ವಂತ ಸಾಮರ್ಥ್ಯದಿಂದ ಗೆಲ್ಲುವ ಶಕ್ತಿ ಇರುವವರನ್ನು ಕಾಂಗ್ರೆಸ್‌ಗೆ ಸೆಳೆದರೆ ಕಾಂಗ್ರೆಸ್ ಸಂಖ್ಯೆ ಹೆಚ್ಚಿಸಿಕೊಳ್ಳಬಹುದು. ಜತೆಗೆ, ತಮ್ಮ ನಾಯಕತ್ವ ಉಳಿಸಿಕೊಂಡು ಪಕ್ಷದಲ್ಲಿ ತಮ್ಮದೇ ಆದ ತಂಡ ಇರುವಂತೆ ನೋಡಿಕೊಳ್ಳು ವುದು ಸಿದ್ದರಾಮಯ್ಯ ಅವರ ಉದ್ದೇಶ ಎಂದು ಹೇಳಲಾಗುತ್ತಿದೆ.
* ಎಸ್. ಲಕ್ಷ್ಮಿನಾರಾಯಣ