ಮೈಸೂರು: ದೇಶದಲ್ಲಿ ಜಾತಿವ್ಯವಸ್ಥೆ ನಿಂತ ನೀರಾಗಿದೆ. ಇದು ಚಲನಶೀಲವಾದರಷ್ಟೇ ಬದಲಾವಣೆ ಸಾಧ್ಯ. ಆದರೆ ಈ ಬದಲಾವಣೆಯನ್ನು ಆರೆಸ್ಸೆಸ್, ಸಂಘ ಪರಿವಾರ ಒಪ್ಪುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಮೈಸೂರು ನಗರ, ಜಿಲ್ಲೆ, ತಾಲೂಕು ಘಟಕದಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಭಕ್ತ ಕನಕದಾಸರ 535ನೇ ಜಯಂತ್ಯುತ್ಸವ, ಮೈಸೂರು ನಗರ, ಜಿಲ್ಲಾ, ತಾಲೂಕು ಕುರುಬರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಸಲ್ಮಾನರನ್ನು ಬೆದರುಗೊಂಬೆಯಂತೆ ಮಾಡಿ, ದೇಶ ಒಡೆಯುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಿದೆ. ವಿಧಾನಸೌಧದಲ್ಲಿ ವಾಲ್ಮೀಕಿ ಪ್ರತಿಮೆ ಮಾಡಿದ್ದು ನಾನು ಮತ್ತು ನಮ್ಮ ಸರ್ಕಾರ. ಆದರೆ ಅದರ ಲಾಭ ಪಡೆದುಕೊಂಡಿದ್ದು ಬೇರೆಯವರು. ಆದ್ದರಿಂದ ಸಮಾಜದ ಜನರು ಜಾಗೃತರಾಗಬೇಕು. ಅಸಮಾನತೆಗೆ ಕಾರಣ ಯಾರು ಮತ್ತು ಏಕೆ ಎಂಬುದನ್ನು ತಿಳಿದುಕೊಂಡು ಬಳಿಕ ಯಾರ ಜೊತೆ ಇರಬೇಕು ಎಂಬುದನ್ನು ತೀರ್ಮಾನಿಸಿ ಎಂದರು.
ನೋವು, ಅವಮಾನ ಅನುಭವಿಸದ ವ್ಯಕ್ತಿಯಿಂದ ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಯಾವ ವ್ಯಕ್ತಿ ನೋವು, ಅವಮಾನ ಅನುಭವಿಸಿರುತ್ತಾನೋ ಆತ ಬದಲಾವಣೆ ಬಯಸುತ್ತಾನೆ. ಕನಕದಾರು ವ್ಯಾಸರ ವೃಂದದಲ್ಲಿ ಇರುವಾಗ ಅಲ್ಲಿದ್ದ ಎಲ್ಲಾ ಮೇಲ್ವರ್ಗದವರಿಂದ ಅವಮಾನಕ್ಕೀಡಾಗಿದ್ದರು. ನೋವನ್ನು ಅನುಭವಿಸಿದ್ದರು. ಆದ್ದರಿಂದಲೇ ಅವರು ಅಸಮಾನತೆ ವಿರುದ್ಧ ಧ್ವನಿ ಎತ್ತಿದರು ಎಂದು ಹೇಳಿದರು.