ಬೆಂಗಳೂರು: ನನ್ನ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಯಾರ ವಿರೋಧವೂ ಇಲ್ಲ. ಅದನ್ನು ಸಿದ್ಧರಾಮೋತ್ಸವ ಎಂದು ನಾನು ಹೇಳಿದ್ದೇನಾ? ನನ್ನ ರಾಜಕೀಯ ಜೀವನದ ಕೆಲವು ಪ್ರಮುಖ ಘಟನೆಗಳ ಬಗ್ಗೆ ನೆನಪು ಮಾಡಿಕೊಂಡರೆ ತಪ್ಪಾ? ಸಮಾವೇಶದಲ್ಲಿ ರಾಜಕೀಯ ಸಂದೇಶ ಇರಲಿದೆ. ನಾವೇನು ಸನ್ಯಾಸಿಗಳಾ? ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಸನ್ಯಾಸಿನಾ? ಎನು ಸಂದೇಶ ಇರಬೇಕೋ, ಅದು ಇರುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮದವರ ವಿರುದ್ಧ ಗರಂ ಆದರು.
ಡಿಕೆ ಶಿವಕುಮಾರ್ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹುಟ್ಟುಹಬ್ಬದ ಕಾರ್ಯಕ್ರಮ ಪಕ್ಷ ಕಡೆಯಿಂದ ನಡೆಯುತ್ತಿರುವುದು. ಸಮಿತಿಯಲ್ಲಿ ಇರುವವರು ಕಾಂಗ್ರೆಸ್ ನಾಯಕರೇ. ನಾನು ಬೇರೆ ಪಕ್ಷದ ಯಾರನ್ನೂ ಕರೆಯುತ್ತಿಲ್ಲ. ರಾಹುಲ್ ಗಾಂಧಿಗೆ ನಾನೇ ಕರೆದಿದ್ದೇನೆ. ಹುಟ್ಟುಹಬ್ಬದ ಸಮಾವೇಶಕ್ಕೆ ಯಾರು ವಿರೋಧ ಮಾಡಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಇಂದು ಬೆಳಗ್ಗೆ ಉಪಹಾರಕ್ಕೆ ತಮ್ಮ ನಿವಾಸಕ್ಕೆ ಕರೆದಿದ್ದರು. ಈ ವೇಳೆ ಸುಮಾರು ಒಂದು ಗಂಟೆಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, 18 ರಂದು ಶಾಸಕರ ಸಭೆಯಿದೆ. ಎಐಸಿಸಿ ಕೆಲವು ಕಾರ್ಯಕ್ರಮ ಕೊಟ್ಟಿದ್ದಾರೆ. ನಿನ್ನೆ ಪದಾಧಿಕಾರಿಗಳು ಬಂದಿದ್ದರು. ಸಂಘಟನೆಯ ವಿಚಾರದಲ್ಲಿ ನಿನ್ನೆ ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ. ನಿನ್ನೆ ಸಭೆಯ ಕೆಲ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿತ್ತು. ಬೆಳಿಗ್ಗೆ ಮನೆಗೆ ತಿಂಡಿಗೆ ಬರಲು ಹೇಳಿದ್ದರು. ಅದಕ್ಕೆ ಬಂದು ಒಂದು ಗಂಟೆ ಚರ್ಚೆ ಮಾಡಿದೆ ಎಂದರು.
ಇದನ್ನೂ ಓದಿ:ಆಡಳಿತದ ವೇಗಕ್ಕೆ ಬೊಮ್ಮಾಯಿ ಸಂಪುಟದ ಸಚಿವರು ಕೈಜೋಡಿಸುತ್ತಿಲ್ಲ: ಎಚ್.ವಿಶ್ವನಾಥ್
ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ. ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ. ಸಿದ್ದರಾಮಯ್ಯ ಹುಟ್ಟುಹಬ್ಬದ ಆಚರಣೆ ಬಗ್ಗೆ ಸಹ ಚರ್ಚೆ ಮಾಡಿದ್ದೆವು. ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮ ಯಶಸ್ವಿ ಮಾಡಲು ಚರ್ಚೆ ನಡೆದಿದೆ ಎಂದರು.