ರಾಯಚೂರು: ನಮ್ಮ ಗ್ಯಾರಂಟಿ ಯೋಜನೆಗಳಿಂದ ಬರಗಾಲದಲ್ಲೂ ರಾಜ್ಯದ ಬಡವರು ಸಂಕಷ್ಟದಿಂದ ಪಾರಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿಂಧನೂರಿನಲ್ಲಿ ಶನಿವಾರ ತಿಮ್ಮಾಪೂರ ಏತ ನೀರಾವರಿ ಯೋಜನೆ ಲೋಕಾರ್ಪಣೆ, ಜಲ ಜೀವನ್ ಮಿಷನ್ ಯೋಜನೆಯ ಶಂಕುಸ್ಥಾಪನೆ, ಸಿಂಧನೂರು ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನಾವು ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು ಬಿಜೆಪಿಯವರಿಗೆ ನುಂಗಲಾರದ ತುತ್ತಾಗಿದೆ. ಮೋದಿ ಅವರು ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಭಾಷಣ ಮಾಡಿದ್ದರು. ಆದರೆ, ಅವರ ಮಾತು ಮತ್ತೊಮ್ಮೆ ಸುಳ್ಳಾಗಿದೆ ಎಂದು ಟೀಕಿಸಿದರು.
ಶಕ್ತಿ ಯೋಜನೆಯಿಂದ 120 ಕೋಟಿ ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ. 1.16 ಕೋಟಿ ಮಹಿಳೆಯರ ಖಾತೆಗೆ ತಿಂಗಳಿಗೆ 2 ಸಾವಿರ ಕೊಡಲಾಗುತ್ತಿದೆ. ಹೀಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5-6 ಸಾವಿರ ರೂಪಾಯಿ ಉಳಿತಾಯ ಆಗುತ್ತಿದೆ ಎಂದರು.
ನಾವು ಕನ್ನಡಿಗರು ಪ್ರತೀ ವರ್ಷ ಕೇಂದ್ರಕ್ಕೆ 4 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಹಣ ಕೊಡುತ್ತೇವೆ. ಆದರೆ ಕೇಂದ್ರ ನಮಗೆ ವಾಪಾಸ್ ಕೊಡುವುದು 52 ಸಾವಿರ ಕೋಟಿ ಮಾತ್ರ. ಬರಗಾಲ ಬಂದಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ. ಇದನ್ನು ರಾಜ್ಯದ ಜನತೆ ಬಿಜೆಪಿ ಸಂಸದರಿಗೆ ಪ್ರಶ್ನಿಸಬೇಕು. ಕೇಂದ್ರ ಸರ್ಕಾರ ರಾಜ್ಯ ಜನರ ನೆರವಿಗೆ ಬರದಿದ್ದರೂ ನಾವು ರಾಜ್ಯದ ಜನರ ಕೈ ಬಿಡುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ನೀರಾವರಿ ಹೆಸರಲ್ಲಿ ಹಣ ತಿಂದು ತೇಗಿ ಹೋಗಿದೆ. ಆದರೂ ನಾವು ರಾಜ್ಯದ ಜನರಿಗೆ ಅಗತ್ಯ ನೀರಾವರಿ ಸೌಲಭ್ಯ ಒದಗಿಸುತ್ತೇವೆ ಎಂದರು.