Advertisement

ಬಿಎಸ್ ವೈ-ನನ್ನ ಭೇಟಿ ಸಾಬೀತು ಪಡಿಸಿದರೆ ರಾಜಕೀಯ ಸನ್ಯಾಸ : HDKಗೆ ಸಿದ್ದರಾಮಯ್ಯ ಸವಾಲು

11:12 AM Oct 13, 2021 | Team Udayavani |

ಕಲಬುರಗಿ : ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಾನು ಭೇಟಿಯಾಗಿದ್ದನ್ನು ಎಚ್.ಡಿ.ಕುಮಾರಸ್ವಾಮಿ ಸಾಬೀತು ಪಡೆಸಿದರೆ ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರ ಜನ್ಮದಿನದಂದು ಮಾತ್ರ ನಾನು ಖುದ್ದಾಗಿ ಭೇಟಿ ಮಾಡಿದ್ದಾನೆ. ನಂತರ ಸಭೆ, ಸಮಾರಂಭಗಳಲ್ಲಿ ಮುಖಾಮುಖಿಯಾಗಿದ್ದೇವೆ. ಇದನ್ನು ಹೊರತು ಪಡಿಸಿ ವೈಯಕ್ತಿಕವಾಗಿ ನಾನು ಯಡಿಯೂರಪ್ಪನವರನ್ನು ಭೇಟಿ ಮಾಡಿಲ್ಲ. ಅದಾಗ್ಯೂ ನನ್ನ-ಯಡಿಯುರಪ್ಪ ಭೇಟಿಯ ದಾಖಲೆಗಳು ಕುಮಾರಸ್ವಾಮಿ ಬಳಿ ಇದ್ದಾರೆ ಬಿಡುಗಡೆ ಮಾಡಲಿ ಎಂದು ಆಕ್ರೋಶ ಹೊರಹಾಕಿದರು.

ಯಡಿಯೂರಪ್ಪ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗೆ ನನ್ನ ಭೇಟಿ ಕಾರಣ ಎಂದು ಕುಮಾರಸ್ವಾಮಿ ಹೇಳಿದ್ದರೆ, ಸರ್ಕಾರ ನಡೆಸುವರ್ಯಾರು? ಮೋದಿ, ಯಡಿಯೂರಪ್ಪ ಮತ್ತು ಐಟಿ ದಾಳಿಗೊಳಗಾದ ಆಪ್ತರು ನಮ್ಮ ಪಕ್ಷದವರಾ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.

ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಆಡಳಿತ ಪಕ್ಷದವರ ಮನೆ ಬಾಗಿಲು, ಕಚೇರಿಗೆ ಹೋಗುವವನೇ ಅಲ್ಲ. ಇಷ್ಟು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಯಾರ ಮನೆಗೂ ಹೋಗಿಲ್ಲ. ಹಾಗೆ ಹೋಗುವವರ್ಯಾರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ನನ್ನನ್ನು ಕಂಡರೆ ಭಯ: ರಾಜಕೀಯವಾಗಿ ಯಾರನ್ನು ವಿರೋಧಿಸುತ್ತರೋ, ಅಂತಹರನ್ನು ಕಂಡರೆ ಭಯ ಇದ್ದೇ ಇರುತ್ತದೆ. ಕುಮಾರಸ್ವಾಮಿಗೆ ನಾನೇ ಟಾರ್ಗೆಟ್ ಆಗಿದ್ದರೆ, ನನ್ನ ಕಂಡರೆ ಅವರಿಗೆ ಭಯ ಇರಬೇಕೆಂದು ಸಿದ್ದರಾಮಯ್ಯ ಹೇಳಿದರು.

Advertisement

ದೇವೇಗೌಡರೂ ವಿರೋಧ ಪಕ್ಷದ ನಾಯಕರಾಗಿದ್ದರು: ವಿರೋಧ ಪಕ್ಷದ ನಾಯಕ ಸ್ಥಾನ ಸಾಂವಿಧಾನಿಕ ಗೌರವ. ಈ ಸ್ಥಾನವನ್ನು ಪುಟ್ಟಗೋಸಿ ಎಂದಾದರೆ ಕುಮಾರಸ್ವಾಮಿ ಅವರಿಗೆ ಸಂವಿಧಾನದ ಬಗ್ಗೆ ಇರುವ ಗೌರವ ಅರ್ಥವಾಗುತ್ತದೆ. ಮತ್ತು ಎರಡು ಬಾರಿ ಮುಖ್ಯಮಂತ್ರಿಯಾದವರಿಗೆ ವಿಪಕ್ಷ ಸ್ಥಾನದ ಬಗ್ಗೆ ಯಾವ ಅಭಿಪ್ರಾಯ ಏನೂ ಎಂಬುದೂ ಗೊತ್ತಾಗುತ್ತದೆ. ದೇವೇಗೌಡರು ಕೂಡ ದೇವರಾಜ ಅರಸು ಸರ್ಕಾರ ಇದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದರು‌‌. ಹಾಗಾದರೆ, ದೇವೇಗೌಡರ ಸ್ಥಾನವೂ ಪುಟ್ಟಗೋಸಿ ಆಗಿತ್ತೆ ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು.

ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ. ಸರ್ಕಾರ ಪತನದ ಅಂಚಿಗೆ ತಲುಪಿದಾಗ ಬರೋಬ್ಬರಿ 9 ದಿನ ಅಮೆರಿಕಾಕ್ಕೆ ಹೋಗಿ ಕುಮಾರಸ್ವಾಮಿ ಕುಳಿತರು. ಶಾಸಕರು ಹೋಗುತ್ತಾರೆ ಬಾರಯ್ಯ ಎಂದರೆ, ಇವತ್ತು ಬರುತ್ತೇನೆ ಸರ್, ನಾಳೆ ಬರುತ್ತೇನೆ ಸರ್ ಅಂತಿದ್ದರು ಎಂದು ಆಕ್ರೋಶ ಹೊರಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next