ಮೈಸೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಮೈಸೂರಿನ ಕನಕ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
“ಎಲ್ಲಿ ಅವ ವಿಜಯ ಶಂಕರ್? ಸ್ವಾಮೀಜಿ, ಅವನನ್ನೂ, ನನ್ನನ್ನೂ ಒಟ್ಟಿಗೆ ಕರೆಯಬೇಕಿತ್ತು. ಅವನಿಗೆ ಸರಿಯಾಗಿ ಪಾಠ ಕಲಿಸುತ್ತಿದ್ದೆ. ಅವ ನಮ್ಮಲ್ಲಿಗೆ ಬಂದಿದ್ದ, ಪುನಃ ಓಡಿ ಹೋದ. ನಿನ್ನೆ ಇಲ್ಲಿನ ಕಾರ್ಯಕ್ರಮಕ್ಕೆ ಬಂದಿದ್ದನಂತೆ. ಮೈಸೂರು ಮಹಾರಾಜರ ಬಗ್ಗೆ ಮಾತನಾಡಿ ಹೋಗಿದ್ದಾನಂತೆ” ಎಂದು ಸಿದ್ದರಾಮಯ್ಯ ಗುಡುಗಿದರು.
“ರಾಜಕೀಯ ಮೀಸಲಾತಿ ಬಗ್ಗೆ ಅವನಿಗೆ ಏನು ಗೊತ್ತು? ನಾಲ್ವಡಿ ಕೃಷ್ಣರಾಜ ಒಡೆಯರ್ ಮೊದಲ ಬಾರಿಗೆ ಮೀಸಲಾತಿ ಜಾರಿಗೆ ತಂದರು. ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ತಂದವರು ಕಾಂಗ್ರೆಸ್ ನವರು. ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಮೀಸಲಾತಿ ಜಾರಿಗೊಳಿಸಲಾಯ್ತು. ಇದನ್ನು ವಕೀಲ ರಾಮಾ ಜೋಯಿಸ್ ಸುಪ್ರೀಂ ಕೋರ್ಟ್‌ನಲ್ಲಿ ವಿರೋಧಿಸಿದರು. ಆಗ ರಾಮಾ ಜೋಯಿಸ್ ಬಿಜೆಪಿ ಉಪಾಧ್ಯಕ್ಷನಾಗಿದ್ದರು. ರಾಜಸಭಾ ಸದಸ್ಯರೂ ಆಗಿದ್ದರು. ಇದೆಲ್ಲವನ್ನೂ ನೀವೆಲ್ಲ ತಿಳಿದುಕೊಳ್ಳಬೇಕು. ಈ ಪಕ್ಷದಲ್ಲಿ ಟಿಕೆಟ್ ಕೇಳುವುದು, ಟಿಕೆಟ್ ಸಿಗದೇ ಹೋದರೆ ಮತ್ತೊಂದು ಪಕ್ಷದಲ್ಲಿ ಹೋಗಿ ಟಿಕೆಟ್ ಕೇಳುದು. ಇದೇನಾ ರಾಜಕೀಯ? ಎಂದು ಮಾಜಿ ಸಚಿವ ಸಿ.ಎಚ್.ವಿಜಯ ಶಂಕರ್ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.
ಇದನ್ನೂ ಓದಿ:ಆರ್ ಎಸ್ಎಸ್ ಆನೆ ಇದ್ದಂತೆ, ತನ್ನ ದಾರಿ ಕಡೆ ಹೋಗುತ್ತಿರುತ್ತದೆ: ಸಿ.ಟಿ.ರವಿ
ಮೈಸೂರು- ಕೊಡಗು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ವಿಜಯ ಶಂಕರ್, ಚುನಾವಣೆಯಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು.