ಬೆಂಗಳೂರು : ಖಾಸಗಿ ಹೂಡಿಕೆದಾರರಿಗೆ ಮೋಸ, ವಂಚನೆ ಮಾಡುವಲ್ಲಿ ಪೋಂಜಿ ಸ್ಕೀಮ್ ನಡೆಸುತ್ತಿರುವ ಕಂಪೆನಿಯೊಂದಕ್ಕೆ ತಾನು ರಕ್ಷಣೆ ಮತ್ತು ನೆರವು ನೀಡುತ್ತಿರುವುದಾಗಿ ಬಿಜೆಪಿ ತನ್ನ ವಿರುದ್ಧ ಆರೋಪ ಮಾಡಿರುವ ಬೆನ್ನಿಗೇ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಇಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಬಿಜೆಪಿಯ ಕರ್ನಾಟಕ ಸಿಎಂ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರು ಲೀಗಲ್ ನೊಟೀಸ್ ನೀಡಿದ್ದಾರೆ.
ಬಿಜೆಪಿ ಮತ್ತು ಅದರ ರಾಜಕೀಯ ನಾಯಕರ ವಿರುದ್ಧ ತೀವ್ರವಾಗಿ ಹರಿಹಾಯ್ದಿರುವ ಸಿದ್ಧರಾಮಯ್ಯ ಅವರು ತನ್ನ ವಿರುದ್ಧ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳಿಗಾಗಿ ಬಿಜೆಪಿ ಉನ್ನತ ನಾಯಕರಿಗೆ ಕ್ರಿಮಿನಲ್ ಮತ್ತು ಸಿವಿಲ್ ಮಾನನಷ್ಟದ ಲೀಗಲ್ ನೊಟೀಸ್ ಕೊಡಿಸಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಬಿಜೆಪಿ ಸ್ವತಃ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರಿಗೆ ದೇಶದಿಂದ ಪಲಾಯನ ಮಾಡುವುದಕ್ಕೆ ಅವಕಾಶ ನೀಡಿರುವಾಗ ಬಿಜೆಪಿ ನಾಯಕರು ತನ್ನ ವಿರುದ್ಧ ಏಕೆ ಬೆಟ್ಟು ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
“ಪ್ರಧಾನಿ ಮೋದಿ ಅವರು ತಮ್ಮನ್ನು ತಾವು ಚೌಕೀದಾರ್ ಎಂದು ಕರೆದುಕೊಂಡಿದ್ದಾರೆ. ಆದರೂ ಅವರು ವಿಜಯ್ ಮಲ್ಯ ಮತ್ತು ನೀರವ್ ಮೋದಿ ಅವರಿಗೆ ದೇಶದಿಂದ ಪಲಾಯನ ಮಾಡಲು ಬಿಟ್ಟಿದ್ದಾರೆ. ಹಾಗಿರುವಾಗ ಇವರೆಂತಹ ಚೌಕೀದಾರ ? ಮೋದಿ ಅವರು ಪದೇ ಪದೇ ದೇಶದ ಜನರಿಗೆ ಅಚ್ಛೇ ದಿನ್ ಬರುತ್ತದೆ ಎಂದು ಹೇಳುತ್ತಿರುತ್ತಾರೆ. ನಮಗೆ ಹಿಂದಿ ಬರುವುದಿಲ್ಲ ಎಂಬ ಭಾವನೆಯಲ್ಲಿ ಅವರು ಇಂತಹ ಮಾತುಗಳನ್ನೆಲ್ಲ ಹಿಂದಿಯಲ್ಲೇ ಹೇಳುತ್ತಾರೆ; ಆದರೆ ನಮಗೆ ಹಿಂದಿ ಚೆನ್ನಾಗಿಯೇ ಅರ್ಥವಾಗುತ್ತದೆ’ ಎಂದು ಸಿದ್ಧರಾಮಯ್ಯ ಹೇಳಿದರು.
”ದೇಶದ ಭದ್ರತೆಗೇ ಅಪಾಯಕಾರಿ ಎಂದು ರಾಷ್ಟ್ರದ ಗಂಭೀರ ವಂಚನೆಗಳ ತನಿಖಾ ಸಂಸ್ಥೆಯಾಗಿರುವ ಎಸ್‌ಎಫ್ಐಓ ಪ್ರಕಟಿಸಿರುವ ಕಂಪೆನಿಯೊಂದಿಗೆ ಡೀಲ್ ಮಾಡಿರುವ ಸಿದ್ಧರಾಮಯ್ಯ ಅವರ ವಿರುದ್ಧ ಕೇಸು ಹಾಕಲು ರಾಜ್ಯಪಾಲರ ಅನುಮತಿ ಕೋರಿ ದೂರು ದಾಖಲಿಸಲಿದೆ” ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಈ ನಡುವೆ ಹೇಳಿರುವುದು ಕಾಂಗ್ರೆಸ್ ಬೆಂಕಿ ತುಪ್ಪ ಎರೆದಂತಾಗಿದೆ.
ಇದೇ ವೇಳೆ ಬಿಜೆಪಿ “ಕ್ಯೂ ಐ ಗ್ರೂಪ್ ಆಫ್ ಕಂಪೆನೀಸ್ ಗೆ ಅನುಕೂಲ ಮಾಡಿಕೊಟ್ಟಿರುವ ಕಾರಣಕ್ಕೆ ಸಿದ್ಧರಾಮಯಯ ಅವರು ಅತ್ಯಂತ ದುಬಾರಿ “ಹ್ಯೂಬ್ಲಾಟ್’ ರಿಸ್ಟ್ ವಾಚನ್ನು ಪಡೆದಿರಬಹುದೇ ?’ ಎಂದು ಪ್ರಶ್ನಿಸಿದೆ.