ಶಿವಮೊಗ್ಗ: ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಿದ್ದರಾಮಯ್ಯನವರಿಗೆ ಕುಳಿತುಕೊಳ್ಳಲು ಆಗುತ್ತಿಲ್ಲ. ಆದಷ್ಟು ಬೇಗ ಸಿಎಂ ಆಗಲು ಕಾಯುತ್ತಿದ್ದಾರೆ. ಅದಕ್ಕೆ ಅವರು ನಾನೇ ಮುಂದಿನ ಸಿಎಂ ಎಂದು ಹೇಳುತ್ತಿದ್ದಾರೆ. ಆದರೆ ಅವರ ಪಕ್ಷವೇ ಹೇಳಿಲ್ಲ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಸ್ವಯಂಘೋಷಿತ ಮುಖ್ಯಮಂತ್ರಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಆ ಪಕ್ಷದವರಿಗೆ ಗೊತ್ತಿದೆ. ಕನಿಷ್ಠ ಅವರ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಾದರೂ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಹೇಳಲಿ ನೋಡೋಣ ಎಂದರು.
ಸಿಎಂ ಬದಲಾವಣೆ ಆಗುತ್ತದೆ ಎಂದು ಸಿದ್ದರಾಮಯ್ಯ ಕನಸು- ಮನಸ್ಸಿನಲ್ಲಿ ಹೇಳುತ್ತಿರುತ್ತಾರೆ. ಇದೇ ಮೊದಲನೇ ಬಾರಿಯಲ್ಲ. ಇದುವರೆಗೆ 57 ಅಥವಾ 58 ಬಾರಿ ಹೇಳಿರಬಹುದು. ಇತ್ತೀಚೆಗಷ್ಟೇ ಗ್ರಾಮ ಪಂಚಾಯತ್ ಚುನಾವಣೆ ಬಳಿಕ ಸಿಎಂ ಬದಲಾಗುತ್ತಾರೆ ಎಂದಿದ್ದರು. ಈಗ ಮೂರು ತಿಂಗಳ ನಂತರ ಸಿಎಂ ಬದಲಾಗುತ್ತಾರೆ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಸಿಎಂ ಅಗಿದ್ದನ್ನು ಮರೆತು, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಇದನ್ನೂ ಓದಿ:ಡಬಲ್ ಎಂಜಿನ್ ಗೆ ಬದ್ಧತೆ ಇದ್ದಿದ್ದರೆ ಠಾಕ್ರೆ ಹೇಳಿಕೆ ಖಂಡಿಸಬೇಕಿತ್ತು: ಕುಮಾರಸ್ವಾಮಿ
ಭೂಮಿ ಕೊಡಲಾಗದು: ಮಹಾರಾಷ್ಟ್ರ ಸಿಎಂ ಉದ್ಭವ್ ಠಾಕ್ರೆ ಗಡಿ ವಿವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ರಾಜ್ಯದಲ್ಲಿ ಮರಾಠಿಗರು ಇರುವ ಜಾಗವನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದಿದ್ದಾರೆ. ಕರ್ನಾಟಕದದವರು ಮಹಾರಾಷ್ಟ್ರದ ಎಲ್ಲಾ ಕಡೆಯಿದ್ದಾರೆ, ಹಾಗಂತ ಮಹಾರಾಷ್ಟ್ರವನ್ನು ರಾಜ್ಯಕ್ಕೆ ಜೋಡಿಸಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ, ಕೇರಳದ ಜೊತೆ ರಾಜ್ಯಕ್ಕೆ ಗಡಿ ಸಂಪರ್ಕವಿದೆ. ಎಲ್ಲರ ಜೊತೆಗೂ ಅಣ್ಣ- ತಮ್ಮಂದಿರ ರೀತಿಯಲ್ಲಿ ಉತ್ತಮ ಭಾಂಧವ್ಯ ಇಟ್ಟುಕೊಂಡು ಹೋಗಲಾಗುತ್ತಿದೆ. ಅದರೆ ಮಹಾರಾಷ್ಟ್ರದಲ್ಲಿ ಭೂಮಿ, ನೀರು ವಿಚಾರದಲ್ಲಿ ಕ್ಯಾತೆ ತೆಗೆಯುವ ಪಕ್ಷ ಹಾಗೂ ವ್ಯಕ್ತಿಗಳಿದ್ದಾರೆ. ಹಾಗೆ ಮಾಡಿದರೆ ಅವರಿಗೆ ಹಾಗೂ ಪಕ್ಷಕ್ಕೆ ಹೆಚ್ಚು ವೋಟ್ ಬರುತ್ತದೆ ಎನ್ನುವ ಮನೋಭಾವವಿದೆ ಎಂದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿರುವ ಸಾಂಗ್ಲಿ, ಸೊಲ್ಲಾಪುರವನ್ನು ರಾಜ್ಯಕ್ಕೆ ಸೇರಿಸುತ್ತೇವೆ: ಬೊಮ್ಮಾಯಿ
ಅವರು ಹಾಗೇ ಹೇಳಿದಾಕ್ಷಣ ಭೂಮಿಯನ್ನು ಕೊಡಲು ಸಾಧ್ಯವಿಲ್ಲ. ಹಾಗಂತ ನಾವೂ ಅವರ ಭೂಮಿಯನ್ನು ಕೇಳಲು ಹೋಗುವುದಿಲ್ಲ.ಗಡಿ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಸಿಎಂ ಜೊತೆ ಮಾತನಾಡುವೆ ಎಂದು ಸಚಿವ ಈಶ್ವರಪ್ಪ ಹೇಳಿದರು.
ಇದನ್ನೂ ಓದಿ: ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ನಂ. 1 : ಸತೀಶ್ ಜಾರಕಿಹೊಳಿ