Advertisement

ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು: ನಳಿನ್ ಕುಮಾರ್ ಕಟೀಲ್

12:21 PM May 08, 2022 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು.ನಮ್ಮ ಸರ್ಕಾರ ಬಂದು ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.

Advertisement

ಬಿಜೆಪಿ ಕಚೇರಿಯಲ್ಲಿ ಭಾನುವಾರ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ಗಾಂಧಿಯವರು ಸ್ವಾತಂತ್ರ್ಯ ನಂತರ ಭಾರತ ರಾಮರಾಜ್ಯ ಆಗಬೇಕು ಅಂದರು. ಗಾಂಧಿ ಸ್ವಾತಂತ್ರ್ಯದ ನಂತರದ ಭಾರತ ಜಾತ್ಯಾತೀತ ಆಗಬೇಕು ಅನ್ನಲಿಲ್ಲ. ಭಾರತ ರಾಮರಾಜ್ಯ ಆಗಲು ಪ್ರತೀ ವ್ಯಕ್ತಿ ರಾಮ ಆಗಬೇಕು. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣದ ಕಾರ್ಯ ಆಗಬೇಕು ಎಂದರು.

ಚಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಅಂತ ತೋರಿಸಿದ ಪಕ್ಷ ಬಿಜೆಪಿ. ಮತಗಟ್ಟೆ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಇವತ್ತು‌ ಕೇಂದ್ರದ ಗೃಹ ಸಚಿವ. ಹಳ್ಳಿಯಿಂದ ಬಂದ ಸಾಮಾನ್ಯನೊಬ್ಬ ಬಿಜೆಪಿಯ ರಾಜ್ಯಾಧ್ಯಕ್ಷ ಆಗುತ್ತಾನೆ, ಮೂರು ಸಲ ಸಂಸದ ಆಗುತ್ತಾನೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು.

ನಾವು ಪರಿವಾರವಾದದಿಂದ ಬಂದವರಲ್ಲ, ಹಣಬಲದಿಂದ ಬಂದವರಲ್ಲ. ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು. ಕಾಂಗ್ರೆಸ್ ನಲ್ಲಿ ಪದಾಧಿಕಾರಿಗಳ ಟೀಂ ಸಾಂವಿಧಾನಿಕವಾಗಿಲ್ಲ. ಕಾಂಗ್ರೆಸ್ ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಏನ್ ಕಟ್ಟುತ್ತಾರೆ ಅವರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ನಲ್ಲಿ 150 ಪ್ರಧಾನ ಕಾರ್ಯದರ್ಶಿ ಇದ್ದಾರೆ. ಅದು ಮುಂದೆ 250 ದಾಟುತ್ತೆ. ಹುಬ್ಬಳ್ಳಿ ದಾಂಧಲೆ ಹಿಂದೆ ಸಿದ್ದರಾಮಯ್ಯ ಷಡ್ಯಂತ್ರ ಇದೆ
ಶಿವಮೊಗ್ಗದ ಗಲಭೆ, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಭೆ ಹಿಂದೆ ಸಿದ್ದರಾಮಯ್ಯ ಇದ್ದಾರೆ ಎಂದು ಆರೋಪಿಸಿದರು.

Advertisement

ಬೊಮ್ಮಾಯಿ ಪಿಎಸ್ಐ ಅಕ್ರಮ‌ ಆದಾಗ ಕೂಡಲೇ ತನಿಖೆಗೆ ಕೊಟ್ಟರು. ನಮ್ಮ ಸರ್ಕಾರ ಪಾರದರ್ಶಕ ತನಿಖೆ ನಡೆಸುತ್ತಿದೆ. ಕಾಂಗ್ರೆಸ್ ನಲ್ಲಿ ಶಾಸ್ತ್ರಿಗಳು ಬಿಟ್ಟರೆ ಉಳಿದ ಎಲ್ಲ ಪ್ರಧಾನಿಗಳೂ ಕಳಂಕಿತರು. ವಾಜಪೇಯಿ, ಮೋದಿ ಕಳಂಕರಹಿತ, ಭ್ರಷ್ಟಾಚಾರ ರಹಿತ ಸರ್ಕಾರ ಕೊಟ್ಟವರು.
ರಾಜ್ಯದಲ್ಲೂ ಎಲ್ಲ ಕಾಂಗ್ರೆಸ್ ಸಿಎಂಗಳೂ ಭ್ರಷ್ಟಾಚಾರಿಗಳು. ಸಿದ್ದರಾಮಯ್ಯ ಗೆ ಹ್ಯೂಬ್ಲೋಟ್ ವಾಚ್ ಯಾರು ಕೊಟ್ಟರು. ಅರ್ಕಾವತಿ ರೀಡೂ ಪ್ರಕರಣದ ತನಿಖೆ ಆದರೆ ಸಿದ್ದರಾಮಯ್ಯ ಜೀವನಪರ್ಯಂತ ಜೈಲಿನಲ್ಲಿರ್ತಾರೆ. ಸಿದ್ದರಾಮಯ್ಯ ಅವರಷ್ಟು ಭ್ರಷ್ಟಾಚಾರಿ ಬೇರೆ ಯಾರೂ ಇಲ್ಲ.
ಕಾಂಗ್ರೆಸ್ ಅರಾಜಕತೆಯ ಸೃಷ್ಟಿಕರ್ತ. ಅಧಿಕಾರ ಇಲ್ಲದಿದ್ದರೆ ಕೈ ನಾಯಕರು ವಿಲವಿಲ ಒದ್ದಾಡುತ್ತಾರೆ ಎಂದರು.

ರಾಹುಲ್ ಗಾಂಧಿ ನೇಪಾಳಕ್ಕೆ ಹೋಗಿ ಏನು ಮಾಡಿದರು? ಇದರ ಬಗ್ಗೆ ಯಾಕೆ ಸಿದ್ದರಾಮಯ್ಯ, ಡಿಕೆಶಿ ಮೌನವಾಗಿದ್ದಾರೆ? ನೇಪಾಳದಲ್ಲಿ ರಾಹುಲ್ ಗಾಂಧಿ ಯಾರನ್ನು ಭೇಟಿ ಮಾಡಿದರು ಹೇಳಿ. ದೇಶದ ವಿರೋಧಿ ಚೀನಾ ಜತೆ ಸ್ನೇಹ ಮಾಡುತ್ತೀರಾ? ಮೋದಿಯವರ ಎಂಟು ವರ್ಷದ ಆಡಳಿತದಲ್ಲಿ ಒಂದೇ ಒಂದು‌ ಕಡೆ ಬಾಂಬ್ ಸ್ಫೋಟ ಆಗಲಿಲ್ಲ. ಕಾಂಗ್ರೆಸ್ ದೇಶದಲ್ಲಿ ಬಾಂಬಿನ ಕಾರ್ಖಾನೆ ಸೃಷ್ಟಿಸಿತು. ಭಿಂದ್ರನ್ ವಾಲೆಯ ಸೃಷ್ಟಿ ಇಂದಿರಾಗಾಂಧಿ ಮಾಡಿದ್ದು. ಇಂದಿರಾಗಾಂಧಿ ಭಯೋತ್ಪಾದನೆಗೆ ಕಾರಣ ಎಂದರು.

ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆಲ್ಲುತ್ತೇವೆ. ಕಾಂಗ್ರೆಸ್ ,ಜೆಡಿಎಸ್‌ನಿಂದ ಬಹಳ ಜನ ಬಿಜೆಪಿ ಬಾಗಿಲು ತಟ್ತಿದ್ದಾರೆ. ನಮಗೆ ಪುರುಸೊತ್ತಿಲ್ಲ, ಅಷ್ಟು ಜನ ಬರ್ತಿದ್ದಾರೆ. ಹಾಗಾಗಿ ನಾವು ಲಿಸ್ಟ್ ಮಾಡಿಕೊಂಡು ಸೇರ್ಪಡೆ ಮಾಡಿ ಕೊಳ್ಳುತ್ತಿದ್ದೇವೆ.
ನಾವು ಪಾರದರ್ಶಕವಾಗಿದ್ದೇವೆ. ಇವತ್ತು ಹಗರಣಗಳಾಗಿವೆ ಅಂತಾರಲ್ಲ ಎಲ್ಲವನ್ನೂ ತನಿಖೆಗೆ ಕೊಡಲಾಗಿದೆ. ಎಷ್ಟೇ ದೊಡ್ಡವರಿದ್ದರೂ ಬಂಧಿ ಸುತ್ತೇವೆ. ಪ್ರಿಯಾಂಕ್ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಸಾವಿರಾರು ಕೋಟಿ‌ ಒಡೆಯರು. ಈ ಸಾವಿರಾರು‌ ಕೋಟಿ ಎಲ್ಲಿಂದ ಬಂತು? ಪಿಎಸ್ಐ ನೇಮಕಾತಿ ತನಿಖೆ ಪೂರ್ಣವಾದಾಗ ಕಾಂಗ್ರೆಸ್ ನ 80% ಜನ ಜೈಲಲ್ಲಿರ್ತಾರೆ ಎಂದರು.

ಆಪರೇಷನ್ ಕಮಲ ಸಮರ್ಥಿಸಿಕೊಂಡ ನಳಿನ್ ಕುಮಾರ್ ಕಟೀಲ್, ಹಿಂದೆ ಆಪರೇಷನ್ ಕಮಲ ಮಾಡಿದಾಗ ಬಹಳ ಜನ ಕೇಳಿದರು,ಬೇರೆ ಪಕ್ಷಗಳಿಂದ ಕರ್ಕೊಂಡ್ ಬರೋದೇನಾ ನಿಮ್ ಕೆಲಸ ಅಂತ ಬಹಳ ಜನ ಕೇಳಿದರು, ಆದರೆ ಆಪರೇಷನ್ ಕಮಲ ಅನಿವಾರ್ಯ.ಒಂದು ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ಇದು ಅನಿವಾರ್ಯ. ಅಧಿಕಾರಕ್ಕಾಗಿ ಆಪರೇಷನ್ ಕಮಲ ಮಾಡಿರಬಹುದು. ಆದರೆನಮ್ಮ ಪಕ್ಷದಲ್ಲಿ ಪಕ್ಷಕ್ಕಾಗಿ ದುಡಿದವರು, ಸಾಮಾನ್ಯ ಕಾರ್ಯಕರ್ತನಿಗೂ ಶಾಸಕ ಮಾಡುತ್ತೇವೆ. ನಮ್ಮದು ಅಧಿಕಾರಕ್ಕಾಗಿ ಆದರ್ಶ ಅಲ್ಲ. ಕಾಂಗ್ರೆಸ್ ನಲ್ಲಿ ಈಗಲೂ ಇಂದಿರಾಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಜೈ ಅಂತಾರೆ, ನಾವು ಭಾರತ ಮಾತೆಗೆ ಜೈಕಾರ ಹಾಕುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next