Advertisement

Siddaramaiah: ಮುಡಾ ಕೇಸ್‌ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ

12:16 AM Sep 28, 2024 | Team Udayavani |

ಬೆಂಗಳೂರು: ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದಂತೆ ಮುಡಾ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್‌ ದಾಖಲಿಸಿದ ಬೆನ್ನಲ್ಲೇ ಇಡೀ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

Advertisement

ಮುಡಾ ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರದ ಕುರಿತು ತನಿಖೆ ನಡೆಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಪ್ರಕರಣದ ಮೂಲ ದೂರುದಾರ ಮೈಸೂರಿನ ಸ್ನೇಹಮಯಿ ಕೃಷ್ಣ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾ ರೆ. ಗೃಹ ಸಚಿವಾಲಯ, ಗೃಹ ಇಲಾಖೆ, ಸಿಬಿಐ, ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ ಸೇರಿ ಅರ್ಜಿಯಲ್ಲಿ 12 ಪ್ರತಿವಾದಿಗಳಿದ್ದು ಅರ್ಜಿಯು ಸೋಮವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಸಿದ್ದರಾಮಯ್ಯ ಪತ್ನಿ ಪಾರ್ವತಿ ಮುಡಾದಿಂದ 55.80 ಕೋಟಿ ರೂ. ಮೌಲ್ಯದ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಈ ಸಂಬಂಧ ತನಿಖೆ ನಡೆಸಿ ಕ್ರಮ ಜರಗಿಸುವಂತೆ ಕೋರಿ ಮೊದಲಿಗೆ ಮೈಸೂರಿನ ವಿಜಯನಗರ ಪೊಲೀಸರಿಗೆ ದೂರು ದಾಖಲಿಸಲಾಗಿತ್ತು. ಆದರೆ ಅವರು ಎಫ್ಐಆರ್‌ ದಾಖಲಿಸಲು ನಿರಾಕರಿಸಿದ್ದರು. ಬಳಿಕ ಸಿಬಿಐ ಸೇರಿ ವಿವಿಧ ತನಿಖಾ ಸಂಸ್ಥೆಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ದೂರು ನೀಡಲಾಗಿತ್ತು. ಆ ದೂರಿನ ಆಧಾರದ ಮೇಲೆ ಯಾವುದೇ ಕ್ರಮ ಜರಗಿಸದ ಹಿನ್ನೆಲೆಯಲ್ಲಿ ವಿಚಾರಣ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಲಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಈ ನಡುವೆ ಸಿದ್ದರಾಮಯ್ಯ ವಿರುದ್ಧ ತನಿಖೆ/ಅಭಿಯೋಜನೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಲಾಗಿತ್ತು. ರಾಜ್ಯಪಾಲರು ಅಭಿಯೋಜನೆ/ತನಿಖೆಗೆ ಅನುಮತಿ ನೀಡಿ ಆಗಸ್ಟ್‌ 16ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಸೆಪ್ಟಂಬರ್‌ 24ರಂದು ವಜಾಗೊಳಿಸಿದ್ದ ಹೈಕೋರ್ಟ್‌, ರಾಜ್ಯಪಾಲರ ಆದೇಶ ಎತ್ತಿಹಿಡಿದಿದೆ. ಹೈಕೋರ್ಟ್‌ ತೀರ್ಪಿನ ಅನಂತರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಪ್ರಕರಣ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೈಸೂರು ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿಗೆ ನಿರ್ದೇಶಿಸಿ ಸೆ. 25ರಂದು ಆದೇಶಿಸಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸಿದ್ದರಾಮಯ್ಯ ರಾಜ್ಯದ ಹಾಲಿ ಮುಖ್ಯಮಂತ್ರಿಗಳಾಗಿದ್ದು ರಾಜ್ಯದ ಇಲಾಖೆಗಳ ಮೇಲೆ ಅದರಲ್ಲೂ ಮುಖ್ಯವಾಗಿ ಲೋಕಾಯುಕ್ತ ಮತ್ತು ಪೊಲೀಸ್‌ ಪ್ರಾಧಿಕಾರಗಳಂತಹ ರಾಜ್ಯ ತನಿಖಾ ಸಂಸ್ಥೆಗಳ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆಯಿದೆ. ಇಂತಹ ಸಂಸ್ಥೆಗಳು ಮುಖ್ಯಮಂತ್ರಿಗಳ ವಿರುದ್ಧದ ಆರೋಪಗಳ ಬಗ್ಗೆ ನಿಷ್ಪಕ್ಷ ತನಿಖೆ ನಡೆಸುವ ಸಾಧ್ಯತೆಯಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next