Advertisement

ಮೈಸೂರು ಜಿಲ್ಲಾ ವಿಭಜನೆಗೆ ಸಿದ್ದರಾಮಯ್ಯ ಆಕ್ರೋಶ

11:17 PM Oct 15, 2019 | Lakshmi GovindaRaju |

ಬೆಂಗಳೂರು/ಮೈಸೂರು: ಮೈಸೂರು ಜಿಲ್ಲೆಯನ್ನು ವಿಭಜಿಸುವ ಜೆಡಿಎಸ್‌ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಪ್ರಸ್ತಾವಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್‌ ಯಾರು ಎಂದು ಪ್ರಶ್ನಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಸ್ಥಾನದಿಂದ ಅನರ್ಹರಾಗಿರುವ ವಿಶ್ವನಾಥ್‌ ಅವರು ಮೈಸೂರು ಜಿಲ್ಲಾ ವಿಭಜನೆ ಬಗ್ಗೆ ಮಾತನಾಡುತ್ತಾರೆ.

Advertisement

ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅವರ್ಯಾರು? ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ರಾಷ್ಟ್ರೀಯ ನಾಯಕರು. ಅವರು ಕೇವಲ ಹುಣಸೂರು ಕ್ಷೇತ್ರಕ್ಕೆ ಮಾತ್ರ ಸೀಮಿತರಲ್ಲ. ಮೈಸೂರು ವಿಭಜನೆ ಬಗ್ಗೆ ನನ್ನ ಪ್ರಬಲ ವಿರೋಧವಿದೆ ಎಂದರು. “ವಿಶ್ವನಾಥ್‌ ಅವರು ನನಗಿಂತಲೂ ಮೊದಲಿನಿಂದ ರಾಜಕೀಯದಲ್ಲಿದ್ದಾರೆ.

ಈ ಹಿಂದೆ ಮೈಸೂರಿನಿಂದ ಚಾಮರಾಜನಗರ ಪ್ರತ್ಯೇಕವಾದಾಗ ಅವರೇಕೆ ಹುಣಸೂರು ಜಿಲ್ಲಾ ರಚನೆ ಬಗ್ಗೆ ಮಾತನಾಡಲಿಲ್ಲ. ಇದೊಂದು ರಾಜಕೀಯ ಗಿಮಿಕ್‌. ಈಗ ಹುಣಸೂರು ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿರುವುದರಿಂದ ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ’ ಎಂದರು. ಬೆಳಗಾವಿ ಜಿಲ್ಲೆಯಿಂದ ಗೋಕಾಕ್‌ ವಿಭಜನೆ ಮಾಡುವ ಪ್ರಸ್ತಾವ ಹಿಂದೆಯೇ ಇತ್ತು. ಆದರೆ, ಸ್ಥಳೀಯ ನಾಯಕರಲ್ಲಿ ಒಮ್ಮತ ಮೂಡದ ಕಾರಣ ವಿಭಜನೆ ಮಾಡಲು ಸಾಧ್ಯವಾಗಿರಲಿಲ್ಲ. ಈಗಲೂ ಬೆಳಗಾವಿ ಜಿಲ್ಲೆ ವಿಭಜನೆಗೆ ವಿರೋಧವಿದೆ ಎಂದು ಹೇಳಿದರು.

ಹೊಸ ಜಿಲ್ಲೆ ರಚಿಸುವುದರಲ್ಲಿ ತಪ್ಪೇನಿದೆ?: ವಿಶ್ವನಾಥ್‌
ಮೈಸೂರಿನಲ್ಲಿ ಮಾತನಾಡಿದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌, ದೇಶವೇ ವಿಭಜನೆಯಾಗಿರುವಾಗ ಮೈಸೂರು ಜಿಲ್ಲೆಯನ್ನು ವಿಭಜಿಸಿ, ಹುಣಸೂರು ಉಪ ವಿಭಾಗವನ್ನು ಕೇಂದ್ರವಾಗಿಟ್ಟುಕೊಂಡು ಡಿ.ದೇವರಾಜ ಅರಸು ಜಿಲ್ಲೆ ರಚಿಸುವುದರಲ್ಲಿ ತಪ್ಪೇನಿದೆ ಎಂದು ಪುನರುಚ್ಚರಿಸಿದರು. ಹುಣಸೂರು ತಾಲೂಕನ್ನು ಕೇಂದ್ರವಾಗಿಟ್ಟುಕೊಂಡು ಉಪ ವಿಭಾಗದ ಹಿಂದಿನ ನಾಲ್ಕು ತಾಲೂಕು, ಎರಡು ಹೊಸ ತಾಲೂಕು ಸೇರಿ ಆರು ತಾಲೂಕನ್ನು ಒಟ್ಟಾಗಿಟ್ಟುಕೊಂಡು ಜಿಲ್ಲೆ ರಚನೆಗೆ ಜನರ ಆಶಯವಿದೆ.

ಚುನಾವಣೆಗಾಗಿ ಹೊಸ ಜಿಲ್ಲೆ ರಚನೆಯ ಗಿಮಿಕ್‌ ಮಾಡುತ್ತಿಲ್ಲ. ಒಂದು ವರ್ಷದಿಂದ ಇದನ್ನು ಪ್ರತಿಪಾದನೆ ಮಾಡುತ್ತಾ ಬಂದಿದ್ದೇನೆ. ಸಿದ್ದರಾಮಯ್ಯ ಪ್ರಸ್ತಾವ ಮಾಡಿರುವಂತೆ ಭೌಗೋಳಿಕತೆ, ಕಿ.ಮೀ. ಮುಖ್ಯವಲ್ಲ. ಜನರ ಭಾವನೆಯನ್ನು ಅರ್ಥ ಮಾಡಿ ಕೊಳ್ಳಬೇಕು. ಕೇವಲ ಎರಡೂ ವರೆ ತಾಲೂಕು ಗಳನ್ನು ಒಳ ಗೊಂಡಿ ರುವ ಉಡುಪಿ, ಯಾದಗಿರಿ ಜಿಲ್ಲೆಯಾಗಿಲ್ಲವೇ?, ಯಾವ ಸಮಿತಿಯ ವರದಿಯೂ ಇಲ್ಲದೆ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಾಗಲಿಲ್ಲವೇ?

Advertisement

ಜೆ.ಎಚ್‌.ಪಟೇಲರು ಚಾಮರಾಜನಗರ ಜಿಲ್ಲೆ ಸೇರಿ ಹಲವು ಜಿಲ್ಲೆ ಮಾಡಿದಾಗ ಉಪ ಮುಖ್ಯ ಮಂತ್ರಿ ಯಾಗಿದ್ದ ಸಿದ್ದರಾಮಯ್ಯ ಏಕೆ ವಿರೋಧ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಸಾ.ರಾ.ಮಹೇಶ್‌ ಅವರೇ ಕೆ.ಆರ್‌.ನಗರ ತಾಲೂಕನ್ನು ಒಡೆದು ಸಾಲಿಗ್ರಾಮ ತಾಲೂಕು ಮಾಡಿಸಿದ್ದಾರೆ. ಹೊಸ ಜಿಲ್ಲೆ ಪ್ರಸ್ತಾವವನ್ನು ಟೀಕಿಸುವ ನಾಯಕರು ಹುಂಡೇಕಾರ್‌ ಮತ್ತು ವಾಸುದೇವ ರಾವ್‌ ಸಮಿತಿಗಳ ವರದಿಯನ್ನು ಓದಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಪ್ರತಿಭಟನೆ: ಮೈಸೂರು ಜಿಲ್ಲೆಯನ್ನು ವಿಭಜಿಸಿ ಹುಣಸೂರು ತಾಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸುವಂತೆ ಪ್ರಸ್ತಾವನೆ ಮಾಡಿರುವ ವಿಶ್ವನಾಥ್‌ ಹೇಳಿಕೆ ಖಂಡಿಸಿ ಕರ್ನಾಟಕ ಸೇನಾಪಡೆ ವತಿಯಿಂದ ಮೈಸೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next